ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆಂದು ಮುಕ್ತಿ?: ಮುಗ್ಧ ಮಕ್ಕಳ ಬದುಕು ಕಸಿಯದಿರಲಿ ನಮ್ಮ ನಿರ್ಲಕ್ಷ್ಯ

ಬೆಂಗಳೂರು:ಜೂ-4: ನಲಿಯುತ್ತ ಕಲಿಯಬೇಕಿದ್ದ ವಯಸ್ಸಿನ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಅವರ ಬಾಲ್ಯ ಮಾತ್ರವಲ್ಲ, ಬದುಕನ್ನೇ ಕಸಿಯುತ್ತಿರುವುದು ಆಘಾತಕಾರಿ ವಿಷಯ. ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳು ತ್ತಿದ್ದರೂ ಶೇ.80 ಪ್ರಕರಣ ಬೆಳಕಿಗೆ ಬರುವುದೇ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳೇ ನೀಡುವ ಮಾಹಿತಿ ಕಳವಳಕಾರಿ.

ಲೈಂಗಿಕ ದೌರ್ಜನ್ಯ, ಬಾಲ ದುಡಿಮೆ, ಬಾಲ್ಯವಿವಾಹ, ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಬಂಧಿಯಾದ ಸಂಘರ್ಷಕ್ಕೊಳಗಾದ ಬಾಲಕರನ್ನು ಹಿಂಸಿಸುವುದು, ಮಕ್ಕಳನ್ನು ಅಪಹರಿಸಿ ಬೆದರಿಸುವುದು, ವೇಶ್ಯಾವೃತ್ತಿಗೆ ತಳ್ಳಲು ಮಕ್ಕಳ ಮೇಲೆ ಒತ್ತಡ ಹೇರುವುದು, ಮಕ್ಕಳ ಮಾರಾಟ ಸೇರಿ ಹಲವಾರು ದೌರ್ಜನ್ಯಗಳು ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿವೆ. ಇಂತಹ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇವಲ 4 ತಿಂಗಳಲ್ಲಿ(2019ರ ಜನವರಿ-ಏಪ್ರಿಲ್​ವರೆಗೆ ) 85 ಪ್ರಕರಣಗಳು ದಾಖಲಾಗಿವೆ.

ಲೈಂಗಿಕ ದೌರ್ಜನ್ಯ: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಸಿಟಿ ಸಿವಿಲ್ ಆವರಣದಲ್ಲಿ ಪೋಕ್ಸೋ ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದು, 900ಕ್ಕೂ ಅಧಿಕ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಪ್ರಕರಣ ಇತ್ಯರ್ಥ ಪಡಿಸುವಷ್ಟರಲ್ಲಿ ಮತ್ತೆ ಅಷ್ಟೇ ಪ್ರಮಾಣದಲ್ಲಿ ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.

ಬಾಲ ಕಾರ್ವಿುಕರು: ಬಾಲ ಕಾರ್ವಿುಕರನ್ನು ತಡೆಗಟ್ಟಲು ಸರ್ಕಾರ ಕಠಿಣ ಕಾನೂನು ಜಾರಿಗೆ ತಂದರೂ ಪರಿಣಾಮಕಾರಿಯಾಗಿ ಯಶಸ್ವಿಯಾಗಲಿಲ್ಲ. ಕಾರ್ಖಾನೆ, ಗ್ಯಾರೇಜ್, ಹೋಟೆಲ್, ಬೇಕರಿ, ಬಟ್ಟೆ ಅಂಗಡಿ, ಕಟ್ಟಡ ಕೆಲಸ, ಕೂಲಿ ಕೆಲಸ, ಸಿರಿವಂತರ ಮನೆಗಳಲ್ಲಿ, ಕೃಷಿ ಜಮೀನಿನಲ್ಲಿ ಕೂಲಿಗಳಾಗಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಪ್ರಕರಣ ಏರಿಕೆಯಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ.

ಮಕ್ಕಳ ರಕ್ಷಣೆಗೆ ಎನ್​ಜಿಒ: ದೌರ್ಜನ್ಯಕ್ಕೊಳಗಾದ ಮಕ್ಕಳನ್ನು ರಕ್ಷಿಸಲೆಂದೇ ರಾಜ್ಯದಲ್ಲಿ ಸಾಕಷ್ಟು ಎನ್​ಜಿಒಗಳು ಹುಟ್ಟಿಕೊಂಡಿದ್ದು, ವಸತಿ ಶಾಲೆ ಆರಂಭಿಸಿ ಉಚಿತ ಊಟ, ವಸತಿ, ಶಿಕ್ಷಣ ನೀಡುತ್ತಿವೆ. ಸರ್ಕಾರವೂ ಇವುಗಳೊಂದಿಗೆ ಕೈ ಜೋಡಿಸಿ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನೆರವು ನೀಡಲು ಹೊಸ ಯೋಜನೆ ಜಾರಿಗೆ ತರಲು ಚಿಂತಿಸಿದೆ. ನಾವೂ ಕೂಡ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿದಲ್ಲಿ ಬಾಲ ದೌರ್ಜನ್ಯ ತಡೆ ಸಾಧ್ಯ.

ಶಿಕ್ಷೆ-ದಂಡದ ಪ್ರಮಾಣ

# 14 ವರ್ಷದೊಳಗಿನ ಮಕ್ಕಳಿಂದ ದುಡಿಸಿ ಕೊಂಡವರಿಗೆ 3ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆ, 10ರಿಂದ 20 ಸಾವಿರ ರೂ. ದಂಡ.

# 12 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣ ದಂಡನೆ, 18 ವರ್ಷದೊಳಗಿನ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ, 16 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ 20 ವರ್ಷ ಜೈಲು ಶಿಕ್ಷೆ.

ದೌರ್ಜನ್ಯಕ್ಕೊಳಗಾದ ಮಕ್ಕಳನ್ನು ರಕ್ಷಿಸಬೇಕು. ಎಲ್ಲ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಲಾಗಿದೆ. ಪೊಲೀಸರು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಲು ಮುಂದಾಗಿದ್ದಾರೆ.

| ಸೀಮಂತ್ ಕುಮಾರ್ ಸಿಂಗ್ ಹೆಚ್ಚುವರಿ ಪೊಲೀಸ್ ಆಯುಕ್ತ

ನೊಂದವರಿಗೆ ಇಲ್ಲುಂಟು ಸಾಂತ್ವನ

ರಾಜ್ಯದಲ್ಲಿ ಬಾಲಕಿ-ಬಾಲಕರ 27 ಪ್ರತ್ಯೇಕ ಬಾಲ ಮಂದಿರಗಳಿದ್ದು, ದೌರ್ಜನ್ಯಕ್ಕೊಳಗಾದ ಬಾಲಕ- ಬಾಲಕಿಯರಿಗೆ ಸೌಲಭ್ಯ-ಶಿಕ್ಷಣ ನೀಡಲಾಗುತ್ತದೆ. ಶಾಲೆ ತೊರೆದ 14 ವರ್ಷದೊಳಗಿನ ಮಕ್ಕಳಿಗೆ 1 ಸಾವಿರ ರೂ. ನೀಡಿ ಪ್ರಾಥಮಿಕ ಶಿಕ್ಷಣದ ಖರ್ಚನ್ನು ಸರ್ಕಾರವೇ ಭರಿಸುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಮಕ್ಕಳಿಗೆ ಅಭಯ ನಿಧಿ ಯೋಜನೆಯಡಿ ವೈದ್ಯಕೀಯ ಸವಲತ್ತು ನೀಡಲಾಗುತ್ತದೆ. ಪೋಕ್ಸೋ ಪ್ರಕರಣದಲ್ಲಿ ಕಾನೂನು ನೆರವಿಗೆ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾಧಿಕಾರಿ ಹಾಗೂ ಕಾನೂನು ತಜ್ಞರನ್ನು ನೇಮಿಸಲಾಗಿದೆ. ಬೆಂಗಳೂರು, ಬಳ್ಳಾರಿ, ಕಲಬುರಗಿ ಹಾಗೂ ಧಾರವಾಡದಲ್ಲಿ ಮನೋ ವಿಕಲ ಬಾಲಕ/ಬಾಲಕಿ ಮಂದಿರ ಆರಂಭಿಸಲಾಗಿದೆ.
ಕೃಪೆ;ವಿಜಯವಾಣಿ

ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆಂದು ಮುಕ್ತಿ?: ಮುಗ್ಧ ಮಕ್ಕಳ ಬದುಕು ಕಸಿಯದಿರಲಿ ನಮ್ಮ ನಿರ್ಲಕ್ಷ್ಯ
anti-child-violence-day-children-sex-abuse-child-labour-children-harassment