ದಕ್ಷಿಣ ಕನ್ನಡ,ಅಕ್ಟೋಬರ್,3,2020(www.justkannada.in): ಎಪಿಎಂಸಿಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ರೈತರಿಗೆ ಮುಕ್ತ ಮಾರುಕಟ್ಟೆ ಒದಗಿಸಿ ಪೈಪೋಟಿ ಕಲ್ಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಇನ್ನಷ್ಟು ಮೂಲಸೌಕರ್ಯವನ್ನು ಒದಗಿಸಲಿದ್ದೇವೆ. ಕಾಯ್ದೆ ತಿದ್ದುಪಡಿ ಬಗ್ಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಹೇಳಿದ್ದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್.
ಪುತ್ತೂರಿನ ಎಪಿಎಂಸಿ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡರು, ಎಪಿಎಂಸಿಯ ಸಂಪೂರ್ಣ ಹಕ್ಕು ರಾಜ್ಯ ಸರ್ಕಾರದ್ದು. ಹೀಗಾಗಿ ರಾಜ್ಯದ ಸರ್ಕಾರದ ಹಕ್ಕಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಶ್ರಮಿಸುತ್ತಿದ್ದು, ರೈತರಿಗೆ ಮೂಲಸೌಕರ್ಯವನ್ನು ಒದಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ರೈತರಿಗೆ 1.7 ಪಟ್ಟು ಹೆಚ್ಚಿಗೆ ಆದಾಯ ಕಲ್ಲಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಬಹಳ ದೊಡ್ಡದು. ಜೊತೆಗೆ ಆಹಾರ ಉತ್ಪಾದನೆಯಲ್ಲಿ ನಮ್ಮ ದೇಶ ಇಂದು ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಹೇಳಿದರು.
ಭೂಮಿಯ ಆರೋಗ್ಯವನ್ನು ಸಹ ನಾವು ಕಾಪಾಡಿಕೊಳ್ಳಬೇಕು. ಅಂದರೆ ಒಂದು ಭೂಮಿಗೆ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಹಾಕಬೇಕು? ಭೂಮಿಯ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವರು ತಿಳಿಸಿದರು.
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಕೊರೋನಾ ಲಾಕ್ಡೌನ್ ಸಮಯದಲ್ಲಿ ಯಶವಂತಪುರ ಎಪಿಎಂಸಿಗೆ ಸುಮಾರು 400 ಟನ್ ಈರುಳ್ಳಿ, ಲಕ್ಷ ಟನ್ ಟೊಮೇಟೊ ಬರುತ್ತಿತ್ತು. ಆದರೆ, ಟೊಮೇಟೊ ಕೆಜಿಗೆ 2 ರೂಪಾಯಿಗೂ ಮಾರಾಟವಾಗುತ್ತಿತ್ತು. ಇನ್ನು ರೈತನು ಮುಕ್ತವಾಗಿ ಮಾರುಕಟ್ಟೆಗೆ ತರಲು ಪೊಲೀಸರು ಚೆಕ್ ಪೋಸ್ಟ್ ನಲ್ಲಿ ತಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂತು. ಹಾಗಾಗಿ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ರೈತರಿಗೆ ಬೆಳೆ ಸಾಗಿಸಲು ಸಮಸ್ಯೆಯಾಗದಂತೆ ನೋಡಿಕೊಂಡಿದ್ದರ ಫಲವಾಗಿ 2 ರೂಪಾಯಿ ಇದ್ದ ಟೊಮೇಟೊ ಬೆಲೆ 16 ರೂಪಾಯಿಗೆ ಬಂದಿತು ಎಂದು ತಿಳಿಸಿದರು.
ವಿರೋಧಪಕ್ಷದಿಂದ ಬೇಕೆಂದೇ ವಿರೋಧ…
ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಬೇಕೆಂದೇ ವಿರೋಧ ಮಾಡುತ್ತಿದ್ದಾರೆ. ಈ ಕಾಯ್ದೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇತ್ತು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಅನುಷ್ಠಾನಕ್ಕೆ ಏಕೆ ತಂದಿಲ್ಲ. ಈಗ, ನಾವು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಸಚಿವರು ಹೇಳಿದರು.
ನಾವು ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗೆ ಈಗ ತಮ್ಮ ಬೆಳೆಯನ್ನು ರಾಜ್ಯದ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅಧಿಕಾರವನ್ನು ನೀಡಿದಂತಾಗಿದೆ. ಜೊತೆಗೆ ಎಪಿಎಂಸಿ ಪರವಾನಗಿ ಹೊಂದಿ ಬೇರೆಡೆ ಮಾರಾಟ ಮಾಡಿದರೆ ದಂಡ ವಿಧಿಸುವುದಲ್ಲದೆ, ಪರವಾನಗಿಯನ್ನೇ ರದ್ದುಪಡಿಸಲಾಗುತ್ತಿತ್ತು. ಈಗ ನಮ್ಮ ಸರ್ಕಾರ ಈ ಕಾನೂನು ತೊಡಕನ್ನು ನಿವಾರಿಸಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚುವುದಿಲ್ಲ. ಜೊತೆಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಒತ್ತು ಕೊಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಮುಖ್ಯಮಂತ್ರಿಗಳು ಈಗಾಗಲೇ ಎಲ್ಲ ರೈತ ಮುಖಂಡರು ಹಾಗೂ ರೈತರ ಜೊತೆ ಚರ್ಚೆ ನಡೆಸಿ ಒಪ್ಪಿಗೆ ಪಡೆದೇ ಆರ್ಡಿನನ್ಸ್ ಹೊರಡಿಸಿದ್ದಾರೆ. ಆದರೆ, ವಿರೋಧ ಪಕ್ಷದವರು ಕೇವಲ ವಿರೋಧ ಮಾಡುವ ಸಲುವಾಗಿಯೇ ಮಾತನಾಡುತ್ತಿದ್ದಾರೆ. ಹೀಗಾಗಿ ಕಾಯ್ದೆಯನ್ನು ಮತ್ತೊಮ್ಮೆ ಅಧಿವೇಶನದಲ್ಲಿ ತಂದು ಒಪ್ಪಿಗೆ ಪಡೆದು ಜಾರಿ ಮಾಡುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ…
ಎಪಿಎಂಸಿಗೆ ಸಂಬಂಧಪಟ್ಟಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ಪುತ್ತೂರಿನ ಎಪಿಎಂಸಿ ಆವರಣದಲ್ಲಿ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ 2.10 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಾದ ಸಂಜೀವ ಮಠಂದೂರು ಅವರುಗಳು ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಪುತ್ತೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ನೂತನ ತರಕಾರಿ ಮಾರುಕಟ್ಟೆ ಕಟ್ಟಡ, 1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳನ್ನು ಸಚಿವರುಗಳು ಉದ್ಘಾಟಿಸಿದರು. ಬಳಿಕ ಮಾರುಕಟ್ಟೆ ಕಟ್ಟಡವನ್ನು ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ರೈಲ್ವೆ ಪಾರ್ಸೆಲ್ ಸೇವೆಗೆ ಚಾಲನೆ…..
ಕೃಷಿ ಸರಂಜಾಮುಗಳನ್ನು ರೈಲ್ವೆ ಮೂಲಕ ತಲುಪಿಸುವ ವಿನೂತನ ಯೋಜನೆಯಾದ ಕೊಂಕಣ ರೈಲ್ವೆ ಪಾರ್ಸೆಲ್ ಸರ್ವಿಸ್ ಅನ್ನು ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು ಅವರು ಉದ್ಘಾಟಿಸಿದರು. ಬಳಿಕ ಗೋದಾಮಿನಿಂದ ರೈಲ್ವೆ ನಿಲ್ದಾಣಕ್ಕೆ ಕೃಷಿ ಸರಂಜಾಮು ಸಾಗಿಸುವ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ಕೊಡಲಾಯಿತು. ಎಪಿಎಂಸಿ ಅಧ್ಯಕ್ಷರಾದ ದಿನೇಶ್ ಸೇರಿದಂತೆ ಇತರ ಅಧಿಕಾರಿಗಳ ವರ್ಗದವರು ಉಪಸ್ಥಿತರಿದ್ದರು.
Key words: APMC – not- close-dakshina kannada-Union Minister -DV Sadananda Gowda – ST Somashekhar