ಹೈಕೋರ್ಟ್ ನಿಂದ ಮೇಲ್ಮನವಿ ತಿರಸ್ಕಾರ: ಪವರ್ ಟಿವಿ ಪ್ರಸಾರ ಸ್ಥಗಿತ ಮುಂದುವರಿಕೆ

ಬೆಂಗಳೂರು,ಜುಲೈ,3,2024 (www.justkannada.in): ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಪವರ್‌ ಟಿ.ವಿ. ಕನ್ನಡ ಟಿ.ವಿ ಚಾನಲ್‌ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ  ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿರಾಕರಿಸಿದ್ದು ಪವರ್ ಟಿವಿ ಪ್ರಸಾರ ಸ್ಥಗಿತ ಮುಂದುವರಿಕೆಯಾಗಿದೆ.

ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಪವರ್‌ ಟಿ.ವಿ. ಕನ್ನಡ ಟಿ.ವಿ ಚಾನಲ್‌ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಿ ಏಕಸದಸ್ಯ ನ್ಯಾಯಪೀಠ  ಆದೇಶ ನೀಡಿತ್ತು. ಈ ಆದೇಶವನ್ನ ಪ್ರಶ್ನಿಸಿ, ‘ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ ನಿರ್ದೇಶಕ ಬೆಂಗಳೂರಿನ ದಬ್ಬೇಗಟ್ಟ ಮಧು ಲಕ್ಷ್ಮಣ, ‘ಮೆಸರ್ಸ್‌ ಮಿಟ್‌ಕಾನ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ ನಿರ್ದೇಶಕ ಮುಂಬೈನ ಶ್ರೀಕಾಂತ್‌ ಮಿಥೇಶ್‌ ಬಾಂಗ್ಡಿಯಾ ಮತ್ತು ‘ಪವರ್‌ ಸ್ಮಾರ್ಟ್‌ ಮೀಡಿಯಾ’ದ ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ರಾಕೇಶ್‌ ಸಂಜೀವ ಶೆಟ್ಟಿ ಅಲಿಯಾಸ್ ರಾಕೇಶ್‌ ಶೆಟ್ಟಿ ಮೇಲ್ಮನವಿ  ಸಲ್ಲಿಸಿದ್ದರು.

ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದ್ದು, ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಮೇಲ್ಮನವಿದಾರರ ಅಹವಾಲನ್ನು ಆಲಿಸಿ ಆರು ವಾರಗಳಲ್ಲಿ ಇತ್ಯರ್ಥಗೊಳಿಸಿಕೊಳ್ಳಬೇಕು ಎಂದು ನ್ಯಾಯಪೀಠ ಗಡುವು ನೀಡಿದೆ.

ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು ಮೇಲ್ಮನವಿದಾರ ಕಂಪನಿಗಳ ಪರ ವಾದ ಮಂಡಿಸಿದ್ದರು.

 ‘ನಮ್ಮ ವಿರುದ್ಧ ಪವರ್‌ ಟಿ.ವಿ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ’ ಎಂದು ಆರೋಪಿಸಿ ಜೆಡಿಎಸ್‌ನ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಎಂ.ರಮೇಶ್‌ ಗೌಡ, ಅವರ ಪತ್ನಿ ಡಾ.ಎ.ರಮ್ಯಾ ರಮೇಶ್‌ ಹಾಗೂ ಐಪಿಎಸ್ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡ ಅವರು ಹೈಕೋರ್ಟ್ ಗೆ ರಿಟ್‌ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ  ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪವರ್‌ ಟಿ.ವಿ.ಚಾನಲ್‌, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ-1995ರ ಆದೇಶವನ್ನು ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು’ ಎಂದು ಆದೇಶ ಹೊರಡಿಸಿತ್ತು.

Key words: Appeal, rejected, High Court, Power TV