ನವದೆಹಲಿ, ಸೆ.9: ಜವಳಿ ಮತ್ತು ಕೈಮಗ್ಗ ಹಾಗೂ ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ನವದೆಹಲಿಯಲ್ಲಿಂದು ಕೇಂದ್ರ ಕೃಷಿ & ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿಗಳನ್ನು ಚರ್ಚಿಸಿ ಪ್ರಮುಖವಾಗಿ ರೈತರಿಗೆ ಅನುಕೂಲವಾಗುವಂತಹ ಹೊಸ ಸಕ್ಕರೆ ನೀತಿಯೊಂದನ್ನು ರೂಪಿಸುವಂತೆ ಮನವಿ ಮಾಡಿದರು.
ಪ್ರಸ್ತುತ ಚಾಲ್ತಿಯಲ್ಲಿರುವ ಸಕ್ಕರೆ ನೀತಿಯಲ್ಲಿ ಕಬ್ಬಿನಿಂದ ಉತ್ಪಾದನೆಯಾಗುವ ಸಕ್ಕರೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ನೀತಿ ರೂಪಿಸಲಾಗಿದೆ. ಸಕ್ಕರೆ ಉತ್ಪಾದನೆ ಜೊತೆಗೆ ಜೊತೆಗೆ ಕಬ್ಬು ಅರೆಯುವಿಕೆಯಿಂದ ಬರುವ ಮೊಲಾಸಿಸ್, ಎಥನಾಲ್, ಕೊಜನರೇಷನ್ ಒಳಗೊಂಡತೆ ಸಹ ಉತ್ಪನ್ನಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಸಕ್ಕರೆ ನೀತಿಯೊಂದನ್ನು ರೈತರ ಹಿತದೃಷ್ಟಿಯಿಂದ ರೂಪಿಸಬೇಕೆಂದು ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಈ ಬಗ್ಗೆ ಶೀಘ್ರದಲ್ಲೇ ರಾಜ್ಯ ಸರ್ಕಾರಗಳೊಂದಿಗೆ & ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.