ಬೆಂಗಳೂರು, ನವೆಂಬರ್ 11, 2022 (www.justkannada.in): ಅನ್ವಯಿಕ ಗಣಿತಜ್ಞ, ವೇದ ಪಂಡಿತರೂ ಆಗಿದ್ದಂಥಹ ಪದ್ಮಶ್ರೀ ಪುರಸ್ಕೃತ ಪ್ರೊ. ಆರ್.ಕೆ.ಕಶ್ಯಪ್ ಅವರು ಇಂದು ಬೆಂಗಳೂರಿನಲ್ಲಿ ಸ್ವರ್ಗಸ್ಥರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಅವರು ಪರ್ ಡ್ಯೂ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ, ಹಾರ್ವರ್ಡ್ ನ ಓರ್ವ ಪ್ರಾಧ್ಯಾಪಕರೊಂದಿಗೆ, ಮಾದರಿಗಳನ್ನು ಗುರುತಿಸುವ ಆಲ್ಗಾರಿದಂ (Ho-Kashyap rule) ಹೋ-ಕಶ್ಯಪ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿ ಪಡೆದಿದ್ದರು. ಶ್ರೀಯುತರು ಸುಮಾರು ೫೦ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಕಶ್ಯಪ್ ಅವರಿಗೆ ವೇದಗಳ ಬಗ್ಗೆ ಅತೀ ಆಸಕ್ತಿ ಇತ್ತು. ಯುಎಸ್‌ನಿಂದ ಹಿಂದಿರುಗಿದ ನಂತರ ಅವರು ಬೆಂಗಳೂರಿನ ಜಯನಗರದಲ್ಲಿ ೧೯೯೭ರಲ್ಲಿ ಸಾಕ್ಷಿ – ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್ ಅನ್ನು ಸ್ಥಾಪಿಸಿದರು. ಆ ಸಂಸ್ಥೆಯ ಮೂಲಕ ಅವರು ವೇದಗಳ ಅಧ್ಯಯನವನ್ನು ಕೈಗೊಂಡು, ಹಲವು ಪುಸ್ತಕಗಲನ್ನು ಸಂಪಾದಿಸಿ, ಪ್ರಕಟಿಸಿದರು. ಜೊತೆಗೆ ಶ್ರೀ ಅರಬಿಂದೊ ಅವರ ಕುರಿತು ಅಧ್ಯಯನ ನಡೆಸಿದರು. ನಾಲ್ಕೂ ವೇದಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ಕೀರ್ತಿಯೂ ಇವರಿಗೆ ಸಂದಿದೆ. ಜೊತೆಗೆ ಇವರ ಸಂಸ್ಥೆಯಲ್ಲಿ ಒಂದು ಗ್ರಂಥಾಲಯವನ್ನೂ ಸಹ ಸ್ಥಾಪಿಸಿದ್ದಾರೆ. ಕನಕಪುರ ರಸ್ತೆಯಲ್ಲಿ ‘ಆರೊವೇದ’ ಎಂಬ ಹೆಸರಿನಲ್ಲಿ ಸಾವಯವ ಕೃಷಿ ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕಶ್ಯಪ್ ಅವರ ಅಪಾರ ಕೊಡುಗೆಗಳು ಹಾಗೂ ಸಾಧನೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರ ಅವರಿಗೆ ೨೦೨೧ರಲ್ಲಿ ಪದ್ಮಶ್ರೀ ಪ್ರಶ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ಅವರು ೨೦೧೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೩ರಲ್ಲಿ ಸ್ವದೇಶ ವಿಜ್ಞಾನ ಚಳವಳಿ ವತಿಯಿಂದ ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ, ೨೦೧೩ರಲ್ಲಿ ಭಾರತೀಯ ವಿದ್ಯಾ ಭವನದಿಂದ ವೇದ ಬ್ರಹ್ಮ ಪ್ರಶ್ತಿಗಳನ್ನೂ ಸಹ ಪಡೆದಿಕೊಂಡರು. ೨೦೧೪ರಲ್ಲಿ ಅವರಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಡಿ.ಲಿಟ್ ನೀಡಿ ಗೌರವಿಸಲಾಗಿತ್ತು.
Key words: Applied –Mathematician- Prof. R.K. Kashyap- passed away
ENGLISH SUMMARY…
Prof R L Kashyap, Padmashree awardee, an applied mathematician, and Vedic scholar of par excellence passed away on Friday morning, in Bengaluru. He was 84.