ಮಂಡ್ಯ,ಸೆಪ್ಟಂಬರ್,3,2020(www.justkannada.in): ಮಂಡ್ಯ ವಿವೇಕಾನಂದನಗರ ಬಡಾವಣೆ ಜನರ ಬಹು ದಿನಗಳ ಕನಸು ನನಸಾಗಿದೆ. ಒಳಚರಂಡಿ ಹಾಗೂ ಕುಡಿಯುವ ನೀರು ಕಲ್ಪಿಸುವ ಕಾಮಗಾರಿ ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣ ಗೌಡ ಅವರಲ್ಲಿ ಮನವಿ ಮಾಡಿದ್ದರು. ಈ ವಿಚಾರವಾಗಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಜೊತೆ ಸಭೆ ನಡೆಸಿ, ಪ್ರಸ್ತಾವನೆ ಸಿದ್ದಪಡಿಸಿ ನೀಡುವಂತೆ ಸಚಿವರು ಸೂಚಿಸಿದ್ದರು. ಅಂತೆಯೇ ಇಂದು ನಡೆದ ಸಚಿವ ಸಂಪುಟದಲ್ಲಿ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆಯಲಾಗಿದೆ.
86 ಹೆಕ್ಟೇರ್ ಪ್ರದೇಶದಲ್ಲಿರುವ ಮಂಡ್ಯದ ವಿವೇಕಾನಂದನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು 10 ವರ್ಷಗಳಿಂದ ಪ್ರಯತ್ನ ನಡೆದಿತ್ತು. ನಾಲ್ಕಾರು ಬಾರಿ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ದೊರೆತಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಮತ್ತೊಮ್ಮೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಂಪುಟದಲ್ಲಿ ಅನುಮೋದನೆ ಪಡೆಯುವಲ್ಲಿ ಸಚಿವ ಡಾ| ನಾರಾಯಣ ಗೌಡ ಯಶಸ್ವಿಯಾಗಿದ್ದಾರೆ.
ಒಟ್ಟು 16 ಕೋಟಿ 46 ಲಕ್ಷ ರೂಪಾಯಿಗೆ ಅನುಮೋದನೆ ದೊರಕಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮಹಾತ್ವಾಕಾಂಕ್ಷೆಯ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
Key words: Approval – drainage and drinking –water- project – Minister -Narayana Gowda