ಅಡಕೆ ಕ್ಯಾನ್ಸರ್​ಕಾರಕವೆಂದ ಕೇಂದ್ರ!

ಮಂಗಳೂರು:ಜುಲೈ-13: ಅಡಕೆ ಸೇವನೆ ಆರೋಗ್ಯಕ್ಕೆ ಪೂರಕ ಎಂದು ಕೃಷಿಕರು, ಕೃಷಿ ತಜ್ಞರು ಹೇಳುತ್ತಾರೆ. ಇನ್ನೊಂದೆಡೆ ಅಡಕೆಯಿಂದ ಚಾಕೊಲೇಟ್, ಚಹಾ ಮತ್ತಿತರ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಸಂಶೋಧಕರ ಹುಮ್ಮಸ್ಸೂ ಸಾಕಷ್ಟಿದೆ. ಆದರೆ ಅಡಕೆ ಆರೋಗ್ಯಕ್ಕೆ ಪೂರಕವಲ್ಲ ಎಂದು ಕೇಂದ್ರ ಸರ್ಕಾರ ಆಗಿಂದಾಗ್ಗೆ ನೀಡುವ ಹೇಳಿಕೆ ಅಡಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಅಡಕೆ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಯೇ ಎಂದು ಶುಕ್ರವಾರ ಲೋಕಸಭೆಯಲ್ಲಿ ಗುಜರಾತ್ ಖೇಡ್​ನ ಸಂಸದ ದೇವುಸಿಂಗ್ ಜೆಸಿಂಗ್ ಭಾಯ್ ಚೌಹಾಣ್ ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ‘ಹೌದು’ ಎಂದು ಉತ್ತರಿಸಿದೆ.

ಅಡಕೆ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ವರದಿಗಳಿರುವುದು ನಿಜವೇ? ಹೌದಾಗಿದ್ದರೆ ಗುಟ್ಕಾ, ಪಾನ್ ಮಸಾಲಾ, ಅಡಕೆಯಿಂದ ತಯಾರಿಸುವ ಸಿಹಿ, ಪರಿಮಳಯುಕ್ತ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಜಗಿಯುವ ತಂಬಾಕು ಸೇವನೆ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ವಿಧಿಸಿರುವ ನಿರ್ಬಂಧಗಳೇನು ಎಂಬುದರ ಸಹಿತ 4 ಉಪಪ್ರಶ್ನೆಗಳೊಂದಿಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಸಂಸದರು ಕೇಳಿದ್ದರು.

ಅಡಕೆ ಕ್ಯಾನ್ಸರ್​ಕಾರಕ: ಸಂಸದರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ, ಅಡಕೆ ಕ್ಯಾನ್ಸರ್​ಕಾರಕ ಎಂದು ಉಲ್ಲೇಖಿಸಿದ್ದಾರೆ. ದೇಹದ ವಿವಿಧ ಅಂಗಗಳ ಸಹಿತ ಆರೋಗ್ಯದ ಮೇಲೆ ಅಡಕೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಬಾಯಿ, ಗಂಟಲು, ಅನ್ನನಾಳ ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ಉಂಟು ಮಾಡುವ ಬಗ್ಗೆಯೂ ಕಳವಳಗಳಿವೆ.

ಅಡಕೆ, ಸುಪಾರಿ, ಪಾನ್ ಮಸಾಲಾಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ನಿಯಮಾವಳಿ ಅಡಿ ಬರುತ್ತವೆ. ಗುಟ್ಕಾ, ಸಿಹಿ, ಸೆಂಟೆಡ್, ಫ್ಲೇವರ್ಡ್ ಅಡಕೆ ಉತ್ಪನ್ನಗಳು ಹಾಗೂ ಜಗಿಯುವ ತಂಬಾಕನ್ನು ಈ ನಿಯಮದಿಂದ ಪ್ರತ್ಯೇಕಗೊಳಿಸಿಲ್ಲ. ಯಾವುದೇ ಆಹಾರ ಉತ್ಪನ್ನದಲ್ಲಿ ತಂಬಾಕು ಮತ್ತು ನಿಕೋಟಿನ್​ಗಳನ್ನು ಸೇರಿಸುವುದನ್ನು ನಿಷೇಧಿಸಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರುಚಿಯುಕ್ತ ಅಡಕೆ ಉತ್ಪನ್ನಗಳನ್ನು (ತಂಬಾಕು ರಹಿತ) ನಿಷೇಧಿಸಿದ ಬಗ್ಗೆ ಮಾಹಿತಿ ಇಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ.

ತಂಬಾಕು ಪಟ್ಟಿಯಲ್ಲಿ ಅಡಕೆ!

ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ನಿಯಮಾವಳಿ ಅಡಿ ತಂಬಾಕಿನೊಂದಿಗೆ ಅಡಕೆ ಉತ್ಪನ್ನಗಳನ್ನೂ ಸೇರಿಸಿರುವುದು ಸಮಸ್ಯೆಯ ಮೂಲ. ಈ ಹಿಂದೆ ಸಮಸ್ಯೆಯಾದಾಗಲೂ ಪಟ್ಟಿಯಿಂದ ಅಡಕೆಯನ್ನು ಪ್ರತ್ಯೇಕಿಸುವ ಕುರಿತು ಗಂಭೀರ ಪ್ರಯತ್ನಗಳು ನಡೆದಿಲ್ಲ. ಹಾಗಾಗಿ ಪ್ರತಿಬಾರಿ ಸಂಸದರು ಈ ಕುರಿತು ಪ್ರಶ್ನಿಸಿದಾಗ ಸಚಿವರು ಕಡತದ ಮಾಹಿತಿ ತೆಗೆದು ಉತ್ತರಿಸುತ್ತಾರೆ. ಇದೇ ಸಮಸ್ಯೆ ಈ ಬಾರಿಯೂ ಆಗಿದೆ. ಅಡಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಸಂಶೋಧನೆ, ಈ ಕುರಿತು ಸುಪ್ರೀಂ ಕೋರ್ಟಿಗೆ ಅಫಿಡವಿಟ್, ಸಂಸತ್​ನಲ್ಲಿ ಚರ್ಚೆ, ಕಾನೂನಿನಲ್ಲಿ ತಿದ್ದುಪಡಿ ಆಗಬೇಕಾದ ಕೆಲಸಗಳು. ಈ ನಿಟ್ಟಿನಲ್ಲಿ ಅಡಕೆ ಬೆಳೆಯುವ ಭಾಗದ ಸಚಿವರು, ಸಂಸದರ ಪ್ರಯತ್ನ ಅಷ್ಟಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.

ಹಿಂದೆಯೂ ಆಗಿತ್ತು ವಿವಾದ-ವಿರೋಧ

ಯುಪಿಎ ಸರ್ಕಾರವಿದ್ದಾಗ 2011ರಲ್ಲಿ ಅಡಕೆ ನಿಷೇಧ ಭಾರಿ ವಿವಾದವಾಗಿತ್ತು. ಅಡಕೆಯಲ್ಲಿ ಆರೋಗ್ಯಕ್ಕೆ ಹಾನಿಕರ ಅಂಶಗಳಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರಿಂದ ವಿವಾದ ಹುಟ್ಟಿಕೊಂಡಿತ್ತು. ಬೆಳೆಗಾರರಿಂದ ಭಾರಿ ವಿರೋಧದ ಬಳಿಕ ಕೇಂದ್ರ ಸರ್ಕಾರ, ಅಡಕೆ ನಿಷೇಧಿಸುವುದಿಲ್ಲ ಎಂದಿತ್ತು. ಅಡಕೆ ಬಾಯಿಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು 2017ರ ಡಿಸೆಂಬರ್​ನಲ್ಲಿ ಆಗಿನ ಕೇಂದ್ರ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಲೋಕಸಭೆಯಲ್ಲಿ ಉತ್ತರಿಸಿದ್ದೂ ವಿರೋಧಕ್ಕೆ ಕಾರಣವಾಗಿತ್ತು. ಅಡಕೆ ಜಗಿಯುವಿಕೆಯಿಂದ ಹಲ್ಲು ಹಾಗೂ ಬಾಯಿಯ ಸಮಸ್ಯೆಗಳು, ಹುಣ್ಣು ಉಂಟಾಗಬಹುದು. ಅಲ್ಲದೆ ಬಾಯಿಯ ಕ್ಯಾನ್ಸರ್ ಸಾಧ್ಯತೆಯೂ ಇದೆ ಎಂದು ಸಚಿವೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಅಡಕೆ ಹಾನಿಕರವಲ್ಲ

ಅಡಕೆ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಿಲ್ಲ ಎನ್ನುವ ಅಧ್ಯಯನ ವರದಿಯನ್ನು ಕಾಸರಗೋಡಿನ ಸಿಪಿಸಿಆರ್​ಐ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಗೆ 4 ತಿಂಗಳ ಹಿಂದೆಯೇ ಸಲ್ಲಿಸಿದೆ. ಆದರೆ ಅದನ್ನು ಇನ್ನೂ ಕಡತಕ್ಕೆ ಸೇರಿಸದ ಕಾರಣ ಹಳೇ ಉತ್ತರವನ್ನೇ ಸಚಿವರು ಪುನರಾವರ್ತಿಸಿರುವ ಸಾಧ್ಯತೆ ಇದೆ. ಸದ್ಯ ಬೇರೆ ಅಧ್ಯಯನಗಳನ್ನು ಉಲ್ಲೇಖಿಸಿರುವ ಆರೋಗ್ಯ ಸಚಿವಾಲಯ ಹಿಂದಿನಂತೆಯೇ ಅಡಕೆ ಕಾರ್ಸಿನೊಜೆನಿಕ್ (ಕ್ಯಾನ್ಸರ್​ಕಾರಕ) ಎನ್ನುವ ಉತ್ತರ ನೀಡಿದೆ.

ಯುಪಿಎ ಸರ್ಕಾರ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದಿತ್ತು. ಸುಪ್ರೀಂಕೋರ್ಟ್​ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಡಕೆ ಹಾನಿಕಾರಕವಲ್ಲ ಎಂದು ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಡಲಿದೆ. ಇದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ವೈಜ್ಞಾನಿಕ ವರದಿಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಫಾಲೋಅಪ್​ನಲ್ಲಿದ್ದೇನೆ. ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

| ಶೋಭಾ ಕರಂದ್ಲಾಜೆ, ಉಡುಪಿ- ಚಿಕ್ಕಮಗಳೂರು ಸಂಸದೆ

ಲೋಕಸಭೆಯಲ್ಲಿ ಹಿಂದೆ 2017ರಲ್ಲಿ ನೀಡಿದ್ದ ಉತ್ತರವನ್ನೇ ಈಗಲೂ ಆರೋಗ್ಯ ಸಚಿವರು ನೀಡಿದ್ದಾರೆ. ಆದರೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವ ವರದಿಯನ್ನು ಕಡತಕ್ಕೆ ಸೇರಿಸಿದ ಬಳಿಕ ಇದು ಪುನರಾವರ್ತಿಸಲಿಕ್ಕಿಲ್ಲ.

| ಸತೀಶ್ಚಂದ್ರ ಎಸ್.ಆರ್., ಕ್ಯಾಂಪ್ಕೊ ಅಧ್ಯಕ್ಷ
ಕೃಪೆ: ವಿಜಯವಾಣಿ

ಅಡಕೆ ಕ್ಯಾನ್ಸರ್​ಕಾರಕವೆಂದ ಕೇಂದ್ರ!
arecanut-consumption-has-an-adverse-affect-on-health