ಮೈಸೂರು,ಜೂನ್,15,2021(www.justkannada.in): ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಮನೆ ಮನೆಗೆ ತೆರಳಿ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಗೌರವ ಅಧ್ಯಕ್ಷ ಎಂ.ಚಂದ್ರಶೇಖರ್, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ನೇತೃತ್ವದಲ್ಲಿ ಇಂದು ಮೈಸೂರು ಡಿಸಿ ಬಗಾದಿ ಗೌತಮ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಗ್ರಾಮದ ಕೆಲವೊಂದು ಭಾಗದಲ್ಲಿ ಕೊರೋನಾ ಲಸಿಕಾ ಕೇಂದ್ರಗಳಿರುವುದು ಸರಿಯಷ್ಟೇ, ವಾಸ್ತವವಾಗಿ ಆಯಾ ಭಾಗಗಳಲ್ಲಿ ಉಚಿತ ಲಸಿಕೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ವಿಷಯ ತಿಳಿದು ಬಂದಿದೆ ಇದು ಬಹಳ ಆತಂಕದ ವಿಚಾರ, ಈಗಾಗಲೇ ಮಹಾಮಾರಿ ಕೊರೊನಾ ಎರಡನೇ ಅಲೆ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಸಾವಿನ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಗ್ರಾಮದ ನಿವಾಸಿಗಳು ಭಯಭೀತರಾಗಿ ಜೀವನ ನಡೆಸುವ ಸ್ಥಿತಿ ಎದುರಾಗಿದೆ.
ಗ್ರಾಮೀಣ ಭಾಗದ ಜನರಲ್ಲಿ ಲಸಿಕೆ ಲಭ್ಯವಿರುವ ಸ್ಥಳ ಪರಿಶೀಲಿಸಿ ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಳ್ಳುವಷ್ಟು ತಿಳುವಳಿಕೆ ಇರುವುದಿಲ್ಲ, ಆದ ಕಾರಣ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಜವಾಬ್ದಾರಿಯುತ ನಿಲುವನ್ನು ನಿರ್ಧರಿಸುವುದರ ಮೂಲಕ ಜಿಲ್ಲೆಯ ಪ್ರತಿಯೊಂದು ಗ್ರಾಮದ ಗ್ರಾಮಸ್ಥರ ಮನೆ ಮನೆಗೆ ತೆರಳಿ ಉಚಿತ ಲಸಿಕೆಯನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ದೇಶದ ಅನ್ನದಾತರಾದ ರೈತರು ಭೂಮಿ ಆದರಿಸಿ ಜೀವನ ಸಾಗಿಸುತ್ತಿದ್ದಾರೆ ಜೊತೆಗೆ ಇದೀಗ ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರು ವ್ಯವಸಾಯ ಮಾಡಬೇಕಾಗಿರುವುದರಿಂದ ಧೈಹಿಕವಾಗಿ ಆರೋಗ್ಯ ಬಹಳ ಮುಖ್ಯ. ಹೀಗಾಗಿ ರೈತರ ಜೀವ ರಕ್ಷಣೆಯಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಪ್ರಮುಖ ಪಾತ್ರ ವಹಿಸುಬೇಕು ,ಹೀಗಾಗಿ ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರಿಗೆ ಮನೆ ಮನೆಗೆ ತೆರಳಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಕೆ ವೇಳೆ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ , ಡೈರಿ ವೆಂಕಟೇಶ್ ,ಎ. ಹೆಚ್.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.
Key words: Arrange – free vaccination – doorstep -rural areas-Appeal – Mysore -DC.