ಬೆಂಗಳೂರು,ಮಾರ್ಚ್,21,2022(www.justkannada.in): ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಶಿಕ್ಷಣ ಮುಂದುವರೆಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಜೊತೆ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಿ ಚರ್ಚಿಸಿದರು. ಸಭೆಯ ಬಳಿಕ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿದ್ದೇವೆ. ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡಿ ಅವರ ಅಭಿಪ್ರಾಯಗಳನ್ನ ಪಡೆದುಕೊಂಡಿದ್ದೇವೆ. ಅವರ ಕಲಿಕೆ ನಿಂತುಹೋಗದೇ ಮುಂದುವರಿಯಬೇಕು. ಫಸ್ಟ್ ಇಯರ್ ನಿಂದ ಫೈನಲ್ ಇಯರ್ ವರೆಗಿನ ವಿದ್ಯಾರ್ಥಿಗಳಿದ್ದಾರೆ. ನಮ್ಮಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಹಾಗೆಯೇ ನಾನು ಒಂದು ಸಮಿತಿಯನ್ನ ನೇಮಕ ಮಾಡಿದ್ದೇನೆ. ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಬಗ್ಗೆ ಕೇಂದ್ರಕ್ಕೆ ಹಾಗೂ ಎನ್‌ಎಂಸಿಗೆ ನಾವೂ ಏನ್ ಕೊಡಬೇಕು ಅನ್ನೋದರ ಬಗ್ಗೆ ಸಮಿತಿ ವರದಿ ನೀಡಲಿದೆ. ಇದರ ಜೊತೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಅವರಿಗೆ ಯಾವ ರೀತಿ ನ್ಯಾಯ ಕೊಡಿಸಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇರುವ ಕಾನೂನಿನಡಿ ನಮ್ಮ ಲಾ ಪ್ರಕಾರ ಇವರ ಶೈಕ್ಷಣಿಕ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಸುಧಾಕರ್ ಹೇಳಿದರು.
ವಿದ್ಯಾರ್ಥಿಗಳು ಸಧ್ಯ ಯಾವ ಫೀಸ್ ಕೂಡ ಕಟ್ಟುವ ಅವಶ್ಯಕತೆ ಇಲ್ಲ. ಶುಲ್ಕ ಪಾವತಿಸದೇ ಶಿಕ್ಷಣ ಮುಂದುವರೆಸಬಹುದು. ಸಮಿತಿಯ ವರದಿ ಬಂದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
Key words: Arrangements -continue –education-Minister -Dr. K. Sudhakar