ಬೆಂಗಳೂರು:ಆ-8:(www.justkannada.in) ಸಂವಿಧಾನದ 371 ಜೆ ಕಲಂ ಅಡಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೀಡುವ ಉದ್ಯೋಗದಲ್ಲಿ ಮೀಸಲಾತಿಯನ್ನು ಕೇವಲ ಆ ಭಾಗಕ್ಕೆ ಮಾತ್ರ ಸೀಮಿತಗೊಳಿಸುವುದು ಕಾರ್ಯಸಾಧುವಲ್ಲ. ಇದು ಈಡೀ ಕರ್ನಾಟಕದಾದ್ಯಂತ ಅನ್ವಯವಾಗಬೇಕೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜ್ಯಮಟ್ಟದ ಸಂಸ್ಥೆ ಅಥವಾ ಕಛೇರಿಗಳಲ್ಲಿ ಹೈದರಾಬಾದ್-ಕರ್ನಾಟಕದ ಜನರಿಗೆ ಶೇ.8ರಷ್ಟು ಹುದ್ದೆಗಳನ್ನು ಮೀಸಲಿಡಲು ರಾಜ್ಯಪಾಲರು ಕೂಡ ಸಮ್ಮತಿ ಸೂಚಿಸಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಈ ಪ್ರದೇಶದ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಪ್ರತಿನಿಧಿಸುವ ಎಂಟು ಶೇಕಡಾ ಮೀಸಲಾತಿಯನ್ನು ಒದಗಿಸಲಾಗಿದೆ. ಹೀಗಾಗಿ, ಹೈ-ಕ ಪ್ರದೇಶದ ಹೊರಗಿನವರಿಗೂ ಅಂದರೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ರಾಜ್ಯ ಮಟ್ಟದ ಕಚೇರಿಗಳಲ್ಲಿ ಮೀಸಲಾತಿಯನ್ನು ಒದಗಿಸಲಾಗುವುದು. ಆದೇಶದ 13 ನೇ ಪ್ಯಾರಾಗ್ರಾಫ್ನಲ್ಲಿ ಮೀಸಲಾತಿ ನೀಡುವ ಮೂಲಕ ರಾಜ್ಯಪಾಲರು ಅಧಿಕಾರ ಚಲಾಯಿಸುವುದನ್ನು ಸಂವಿಧಾನದ 371 ಜೆ ವಿಧಿ ಸಂಪೂರ್ಣವಾಗಿ ಮತ್ತು ಕಾನೂನುಬದ್ಧವಾಗಿ ಬೆಂಬಲಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಎಚ್ಟಿ ನರೇಂದ್ರ ಪ್ರಸಾದ್ ಅವರನ್ನೊಳಗೊಂಡ ಹೈಕೋರ್ಟ್ನ ವಿಭಾಗೀಯ ಪೀಠ ತಿಳಿಸಿದೆ.
ಹೈದರಾಬಾದ್-ಕರ್ನಾಟಕ ಪ್ರದೇಶವಾಗಿರುವ ಕಲ್ಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗೀರಿ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ. 118 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ 2012 ರಲ್ಲಿ ಸಂವಿಧಾನದಲ್ಲಿ 371 ಜೆ ವಿಧಿಯನ್ನು ಸೇರಿಸಲಾಯಿತು. ಇದರ ಆಧಾರದ ಮೇಲೆ 2013 ರಲ್ಲಿ ರಾಜ್ಯಪಾಲರು ಹೈದರಾಬಾದ್-ಕರ್ನಾಟಕ ಪ್ರದೇಶದ ವ್ಯಕ್ತಿಗಳಿಗೆ ರಾಜ್ಯಮಟ್ಟದ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಮೀಸಲಾತಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.