ಚುನಾವಣಾ ತೀರ್ಪನ್ನು ಸ್ವೀಕರಿಸುತ್ತೇವೆ: ಬಿಜೆಪಿಗೆ ಅಭಿನಂದನೆ ಸಲ್ಲಿಸಿದ ಅರವಿಂದ ಕೇಜ್ರಿವಾಲ್

ನವದೆಹಲಿ, ನವೆಂಬರ್,8,2025 (www.justkannada.in): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ  ಸೋಲನುಭವಿಸಿದ್ದು ದೆಹಲಿ ಜನತೆ ನೀಡಿದ ತೀರ್ಪನ್ನು ಸ್ವೀಕರಿಸುತ್ತೇವೆ ಎಂದು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಅರವಿಂದ ಕೇಜ್ರಿವಾಲ್,  ದೆಹಲಿ ಜನತೆ ನೀಡಿರುವ ಚುನಾವಣಾ ತೀರ್ಪನ್ನು ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ. ನಮಗೆ ಸೋಲಿನ ನಿರೀಕ್ಷೆ ಇರಲಿಲ್ಲ. ಆದರೂ ಪ್ರಜಾಪ್ರಭುತ್ವದಲ್ಲಿ ಜನತೆ ನೀಡುವ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸೋಲಿನ ಪರಾಮರ್ಶೆ ನಡೆಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಕಟ್ಟುವಲ್ಲಿ ನಾವು ನಿರತರಾಗುತ್ತೇವೆ ಎಂದಿದ್ದಾರೆ.

ಹಾಗೆಯೇ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಸಜ್ಜಾಗಿರುವ ಬಿಜೆಪಿಗೆ ಅಭಿನಂದನೆ ಸಲ್ಲಿಸಿರುವ ಅರವಿಂದ ಕೇಜ್ರಿವಾಲ್, ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಬಿಜೆಪಿ ದೆಹಲಿ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡಲಿ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಅದರಂತೆ ಆಪ್‌ ಕೂಡ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.

“ನಾವು ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಉತ್ತಮ ಆಡಳಿತ ನೀಡಿದ್ದೇವು. ದೆಹಲಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವು. ಪ್ರಮುಖವಾಗಿ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಬದಲಾಯಿಸುವಲ್ಲಿ ನಾವು ತುಂಬಾ ಶ್ರಮಿಸಿದ್ದೇವು. ಆದರೆ ದೆಹಲಿ ಮತದಾರರು ಈ ಬಾರಿ ಬಿಜೆಪಿ ಪರವಾಗಿ ನಿರ್ಣಯ ಮಾಡಿದ್ದಾರೆ. ನಾವು ಈ ಜನಾದೇಶಕ್ಕೆ ತಲೆಬಾಗುತ್ತೇವೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

Key words: Delhi, Assembly Elections, Arvind Kejriwal, congratulates, BJP