ಮೈಸೂರು,ಜೂನ್,23,2023(www.justkannada.in): ಇಂದು ಅಷಾಢಮಾಸದ ಮೊದಲ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದು ನಾಡ ಅದಿ ದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.
ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದ್ದು ಲಕ್ಷ್ಮೀ ಅಲಂಕಾರದಿಂದ ನಾಡ ಅದಿ ದೇವತೆ ಕಂಗೊಳಿಸುತ್ತಿದ್ದಾಳೆ. ದೇವಾಲಯದ ಆವರಣದಲ್ಲಿ ವಿವಿಧ ಹೂ ಹಾಗೂ ಹಣ್ಣುಗಳಿಂದ ಅಲಂಕಾರ ಮಾಡಲಾಗಿದ್ದು, ತಾಯಿ ಚಾಮುಂಡೇಶ್ವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಂತರ ಮಹಾಮಂಗಳಾರತಿ ಮಾಡಲಾಯಿತು.
ಇನ್ನು ಬೆಳಿಗ್ಗೆ 5.30ರಿಂದ ಭಕ್ತರಿಗೆ ಚಾಮುಂಡಿ ತಾಯಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಭಾರಿ ಪಾಸ್ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದ್ದು, 300ರೂ ಹಾಗೂ 50ರೂ ಟಿಕೆಟ್ ಪಡೆದು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ 50ರೂ. ಟಿಕೆಟ್ ಲೈನ್ ನಲ್ಲಿ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ಪ್ರಸಾದ ವಿತರಣೆ..
ಸಹಸ್ರಾರು ಸಂಖ್ಯೆಯ ಭಕ್ತರು ಮೆಟ್ಟಿಲುಗಳ ಮೂಲಕ ಚಾಮುಂಡಿ ತಾಯಿ ದರ್ಶನಕ್ಕೆ ಆಗಮಿಸುತ್ತಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಚಾಮುಂಡೇಶ್ವರಿ ಭಕ್ತ ಮಂಡಳಿ ವತಿಯಿಂದ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಚಾಮುಂಡಿ ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ,ಮಧ್ಯಾಹ್ನ,ಸಂಜೆ ಮೂರು ಸಮಯದಲ್ಲೂ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ.
ದಾನಿಗಳು ಮತ್ತು ಭಕ್ತರ ಸಹಯೋಗದೊಂದಿಗೆ ಪ್ರಸಾದ ವಿತರಣೆ ಮಾಡುತ್ತಿದ್ದೇವೆ. ಬರುವಂತಹ ಎಲ್ಲಾ ಭಕ್ತದಿಗಳಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 20ಸಾವಿರ ಮ್ಯಾಂಗೋ ಬರ್ಫಿ ತಯಾರು ಮಾಡಲಾಗಿದೆ. ತಾಯಿ ಚಾಮುಂಡೇಶ್ವರಿಯ ಭಕ್ತರು ನಮ್ಮ ಜೊತೆ ಬಂದು ಕೆಲಸ ಮಾಡುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ ಎಂದು ಶ್ರೀ ಚಾಮುಂಡೇಶ್ವರಿ ಭಕ್ತ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದರು.
ಉಚಿತ ಬಸ್ ವ್ಯವಸ್ಥೆ..
ಇನ್ನು ಸಾರಿಗೆ ಇಲಾಖೆ ವತಿಯಿಂದ ಹೆಲಿಪ್ಯಾಡ್ ಮೈದಾನದಿಂದ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಲಲಿತಮಹಲ್ ಮೈದಾನದಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ಇಲಾಖೆ ವತಿಯಿಂದ 100ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಎಷ್ಟೇ ಜನ ಆಗಮಿಸಿದರು ಸಂಜೆ 8ರ ತನಕ ಬಸ್ ವ್ಯವಸ್ಥೆ ಮಾಡಲಾಗುತ್ತೆ. ಸಾರಿಗೆ ಇಲಾಖೆಯ ವೆಚ್ಚವನ್ನ ಸರ್ಕಾರವೇ ಭರಿಸುತ್ತದೆ. ಬೆಟ್ಟಕ್ಕೆ ತೆರಳುವ ಭಕ್ತರ ಸೇವೆಗೆ ನಾವು ಸದಾ ಸಿದ್ದ ಎಂದು ಸಾರಿಗೆ ಇಲಾಖೆ ಅಧಿಕಾರಿ ಆನಂದ್ ಹೇಳಿದರು.
ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಶಾಸಕ ಜಿಟಿ ದೇವೇಗೌಡರ ಕುಟುಂಬ..
ಆಷಾಡ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಶಾಸಕ ಜಿಟಿ ದೇವೇಗೌಡ, ಪುತ್ರ ಹರೀಶ್ ಗೌಡ ಅವರು ಕುಟುಂಬ ಸಮೇತ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಆಷಾಡ ಮಾಸದ ಒಂದು ತಿಂಗಳು ಪೂಜೆ ನಡೆಯುತ್ತದೆ. ಚಾಮುಂಡೇಶ್ವರಿ ತಾಯಿಯನ್ನ ಬಹಳ ಭಕ್ತಿ ಭಾವದಿಂದ ಹೆಣ್ಣು ಮಕ್ಕಳು ಪೂಜಿಸುತ್ತಾರೆ. ಆಷಾಢ ಮಾಸದ ಪ್ರಯುಕ್ತ ಕುಟುಂಬ ಸಮೇತರಾಗಿ ಆಗಮಿಸಿ ತಾಯಿ ದರ್ಶನ ಪಡೆದಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ ಆಗಲಿ. ಕೆರೆ,ಕಟ್ಟೆ, ಆಣೆಕಟ್ಟೆಗಳು ತುಂಬಲಿ, ರೈತರಿಗೆ ಒಳಿತಾಗಲಿ ಎಂದು ಶಾಸಕ ಜಿಟಿ ದೇವೇಗೌಡ ಆಷಾಢ ಮಾಸದ ಶುಭ ಕೋರಿದರು.
ಇನ್ನು ಚಾಮುಂಡಿ ಬೆಟ್ಟಕ್ಕೆ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರು ಕುಟುಂಬ ಸಮೇತ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ನಗರದ ಹಲವು ಚಾಮುಂಡೇಶ್ವರಿ ದೇವಾಲಯಗಳಲ್ಲಿ ವಿಶೇಷ ಪೂಜಾ ಸಂಭ್ರಮ.
ಆಷಾಡ ಮಾಸದ ಮೊದಲ ಶುಕ್ರವಾರ ಪ್ರಯುಕ್ತ ಅದಿ ದೇವತೆ ಚಾಮುಂಡೇಶ್ವರಿಗೆ ಎಲ್ಲೆಡೆ ಪೂಜಾ ಸಂಭ್ರಮ ಕಂಡು ಬಂದಿತು. ನಗರದ ಹಲವು ಚಾಮುಂಡೇಶ್ವರಿ ದೇವಾಲಯಗಳಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದ್ದು ಭಕ್ತರ ಹಿಂಡು ದೇವಾಲಯಗಳತ್ತ ಹರಿದು ಬರುತ್ತಿದೆ. ನಗರದ ಮಹದೇಶ್ವರ ಬಡಾವಣೆ, ಕೆ ಜಿ ಕೊಪ್ಪಲಿನ ಚಾಮುಂಡೇಶ್ವರಿ ದೇವಾಲಯಗಳಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ.
ದೇವಾಲಯಗಳಲ್ಲಿ ಮುಂಜಾಯಿಂದಲೇ ಮಹಾ ಮಂಗಳಾರತಿ, ರುದ್ರಾಭಿಷೇಕ, ಪಂಚಮೃತಾಭಿಷೇಕ, ಬಿಲ್ವಾಭಿಷೇಕ ಸಹಸ್ರನಾಮಗಳಿಂದ ವಿಶೇಷ ಪೂಜಾ ಕೈಂಕರ್ಯ ಮೇಳೈಸಿತು. ಕುವೆಂಪು ನಗರದ ಬಂದಂತಮ್ಮ ಕಾಳಮ್ಮ ದೇವಾಲಯ, ಟಿ.ಕೆ ಲೇಔಟ್ ನ ಬಿಸಲಮಾರಮ್ಮ ದೇವಾಲಯಗಳಲ್ಲಿ ಭಕ್ತರ ದಂಡು ಆಗಮಿಸಿದ್ದು ನಿಂಬೆ ಹಣ್ಣಿನ ದೀಪ, ತುಪ್ಪದ ದೀಪದಾರತಿ, ಮಂಗಳಾರತಿ ಮೂಲಕ ಮಹಿಳೆಯರು ತಾಯಿಗೆ ಭಕ್ತಿ ಪೂರ್ವಕ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು.
Key words: Asadha masa-Devotees –mysore-chamundi hills