ಮೊದಲ ಆಷಾಢ ಶುಕ್ರವಾರ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಅಧಿದೇವತೆ ಚಾಮುಂಡೇಶ್ವರಿ

ಮೈಸೂರು,ಜುಲೈ,12,2024 (www.justkannada.in): ಇಂದು ಮೊದಲ ಆಷಾಢ ಶುಕ್ರವಾರ ಸಂಭ್ರಮವಾಗಿದ್ದು,  ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿದೆ.

ಮೊದಲನೇ ಆಷಾಢ ಶುಕ್ರವಾರ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಮುಂಜಾನೆಯಿಂದಲೇ ಶ್ರೀ ಚಾಮುಂಡೇಶ್ವರಿ ತಾಯಿಗೆ ಅಭಿಷೇಕ, ವಿವಿಧ ಪುಷ್ಪಗಳಿಂದ  ಅಲಂಕರಿಸಲಾಗಿತ್ತು. ನಾಡಿನ‌ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಧರ್ಮ ದರ್ಶನಕ್ಕೆ 100 ರೂ, ಹಾಗೂ 300 ರೂಪಾಯಿಗಳ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಭಕ್ತಾದಿಗಳಿಗೆ ಕುಡಿಯುವ ನೀರು, ಉಪಾಹಾರ, ಪ್ರಸಾದ ವಿತರಣೆ, ವಾಹನಗಳ ನಿಲುಗಡೆ, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನ ಜಿಲ್ಲಾಡಳಿತದಿಂದ ಒದಗಿಸಲಾಗಿತ್ತು. ಸರತಿ ಸಾಲಿನಲ್ಲಿ ದರ್ಶನಕ್ಕೆ ಹೋಗುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದ್ದು, ನೂಕುನುಗ್ಗಲು ಉಂಟಾಗಬಾರದು ಎಂದು ಬ್ಯಾರಿಕೇಡ್ ವ್ಯವಸ್ಥೆ. ಸಿಸಿಟಿವಿ ಅಳವಡಿಕೆ, ಅಶ್ವದಳ ಪೋಲಿಸ್ ಸಿಬ್ಬಂದಿ, ದೇವಸ್ಥಾನ ಸುತ್ತ  ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಹರಕೆ ಹೊತ್ತವರು ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಒಂದು ಕಡೆ ಸಿಹಿ ವಿತರಿಸುತ್ತಿದ್ದರೇ ಮತ್ತೊಂದು ಕಡೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಾಮುಂಡಿ ಬೆಟ್ಟಕ್ಕೆ ಖಾಸಗೀ ವಾಹನಗಳಿಗೆ ನಿರ್ಬಂಧವಿದ್ದು ಮೈಸೂರಿನ ಹೆಲಿಪ್ಯಾಡ್ ನಿಂದ ಉಚಿತವಾಗಿ  ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

key words: ashada Friday, Chamundi hills, devotees