ಟೀಂ ಕೆಪಿಸಿಸಿ ಸೇರಲು ಆಕಾಂಕ್ಷಿಗಳ ದುಂಬಾಲು

ಬೆಂಗಳೂರು:ಜುಲೈ-4: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಳೆದು ತೂಗಿ 8 ವರ್ಷದ ಬಳಿಕ ‘ಟೀಂ ಕಾಂಗ್ರೆಸ್’ ಹೊಸದಾಗಿ ಕಟ್ಟಲು ಕೆಪಿಸಿಸಿ ತಯಾರಾಗುತ್ತಿದ್ದು, ಪದಾಧಿಕಾರಿಯಾಗಲು ಅಪರಿಮಿತ ಆಕಾಂಕ್ಷಿಗಳು ಪಕ್ಷದ ಕಚೇರಿ ಮುಂದೆ ಸರದಿಗಟ್ಟಿದ್ದಾರೆ.

ಆಫೀಸ್ ಬೇರರ್​ಗಳು ವಿಸಿಟಿಂಗ್ ಕಾರ್ಡ್ ನಾಯಕರಾಗಿರಬಾರದು, ಪರಿಣಾಮಕಾರಿ ಮತ್ತು ಪ್ರಭಾವಿ ಆಗಿರಬೇಕೆಂಬ ಸಂಕಲ್ಪದೊಂದಿಗೆ ಪಕ್ಷದ ಪ್ರಮುಖ ನಾಯಕರು ಈ ಬಾರಿ ತಂಡ ಕಟ್ಟುತ್ತಿದ್ದಾರೆ. ಈ ನಡುವೆ ಆಕಾಂಕ್ಷಿಗಳು ತಮ್ಮ ಪ್ರವರವನ್ನು ಕೆಪಿಸಿಸಿ ಮುಂದೆ ಮಂಡಿಸಿ ಅವಕಾಶ ಗಿಟ್ಟಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಡೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ನೆಲಕಚ್ಚಿದರೂ ಪದಾಧಿಕಾರಿ ಆಗಬೇಕೆಂಬ ಪಕ್ಷದ ಕಾರ್ಯಕರ್ತರ ಉತ್ಸಾಹ ಪಕ್ಷದ ನಾಯಕರನ್ನೇ ದಂಗುಬಡಿಸಿದೆ. ಪಕ್ಷವನ್ನು ಮರು ಸಂಘಟಿಸಲು ಎಐಸಿಸಿ ಕಳೆದ ವಾರ ಕೆಪಿಸಿಸಿಯನ್ನು ವಿಸರ್ಜಿಸಿತ್ತು. ಹಾಗೇ ಅಧ್ಯಕ್ಷ-ಉಪಾಧ್ಯಕ್ಷರ ಹೊರತಾಗಿ ಉಳಿದ ಪದಾಧಿಕಾರಿಗಳನ್ನು ಹೊಸದಾಗಿ ನೇಮಿಸಿಕೊಳ್ಳಲು ಪಕ್ಷ ಮಾನದಂಡವನ್ನೇ ರಚಿಸುತ್ತಿದೆ. ಈ ಮಾನದಂಡಕ್ಕೆ ಹೊಂದಿಕೆಯಾಗುವ ಅಥವಾ ಸಮೀಪಿಸುವವರನ್ನು ಆರಿಸುವ ಉದ್ದೇಶ ಹೊಂದಿದೆ. ಈಗಿನ ಮಾಹಿತಿ ಪ್ರಕಾರ ಒಂದು ವಾರದಿಂದ 400ಕ್ಕೂ ಹೆಚ್ಚು ಆಕಾಂಕ್ಷಿಗಳು ಪದಾಧಿಕಾರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ಪದಾಧಿಕಾರಿ ಸಂಖ್ಯೆ 70ಕ್ಕೆ ಮಿತಿಗೊಳಿಸಬೇಕೆಂಬುದು ಪಕ್ಷದ ಪ್ಲಾನ್. ಕೆಪಿಸಿಸಿ ಅಧ್ಯಕ್ಷ, ಉಪಾಧ್ಯಕ್ಷರು, ಎಐಸಿಸಿ ಸಹ ಉಸ್ತುವಾರಿಗಳು, ರಾಜ್ಯದ ಪ್ರಮುಖ ನಾಯಕರು ಕುಳಿತು ಪದಾಧಿಕಾರಿಗಳ ತಂಡ ರೂಪಿಸಲು ಉದ್ದೇಶಿಸಿದ್ದಾರೆ. ಈ ಮಾಹಿತಿ ಅರಿತ ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷರು, ಸಹ ಉಸ್ತುವಾರಿಗಳು, ಪ್ರಮುಖ ನಾಯಕರಿಗೆ ಮನವಿ ಪತ್ರ ಸಲ್ಲಿಸುತ್ತಿದ್ದಾರೆ. ಕೆಲವರು ಗಿಂಜುತ್ತಿದ್ದಾರೆ, ಇನ್ನು ಕೆಲವರು ಶಿಫಾರಸು ಪತ್ರಗಳನ್ನೂ ಕೊಡುತ್ತಿದ್ದಾರೆ.

ಹೊಸ ಸವಾಲು: ಪ್ರತಿ ಜಿಲ್ಲೆಯಿಂದಲೂ ಪಕ್ಷದ ಮುಖಂಡರು ತಂತಮ್ಮವರಿಗೆ ಅವಕಾಶ ಕೊಡಿಸಲು ಬೆಂಗಳೂರಿಗೆ ನಿಯೋಗ ಕರೆತರುತ್ತಿರುವ ಬೆಳವಣಿಗೆ ಕೆಪಿಸಿಸಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಹಿಂದೆ ಪದಾಧಿಕಾರಿಗಳಾಗಲು ಬಯಸುವವರು ಈ ಬಾರಿಯೂ ತಮ್ಮನ್ನು ಮುಂದುವರಿಸುವಂತೆ ಮನವಿ ಹಿಡಿದು ಬರುತ್ತಿದ್ದಾರೆ. ಇನ್ನೊಂದೆಡೆ ಪ್ರಭಾವಿ ನಾಯಕರ ಅನುಯಾಯಿಗಳು ಒತ್ತಡ ತರುತ್ತಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಯುವಕರು ಅವಕಾಶ ಬಯಸುತ್ತಿರುವುದು ಪಕ್ಷಕ್ಕೆ ಎರಡು ಬಗೆಯ ಅನುಭವ ತಂದೊಡ್ಡಿದೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿನಿತ್ಯ ಸಾಕಷ್ಟು ಮಂದಿ ಭೇಟಿ ಮಾಡಿ ಪದಾಧಿಕಾರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಲು ಇಷ್ಟೊಂದು ಆಸಕ್ತಿ ತೋರಿಸುತ್ತಿರುವುದು ಬಹಳ ಅಚ್ಚರಿ ಎನಿಸುತ್ತದೆ ಎಂದರು.

ಇನ್ನು ಮೂರು ವಾರಗಳಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಆಯ್ಕೆಯಲ್ಲಿ ಒತ್ತಡ-ಲಾಬಿ ಕೆಲಸ ಮಾಡಲ್ಲ. ಅರ್ಹರನ್ನು ಗುರುತಿಸಿ ಅವಕಾಶ ನೀಡುತ್ತೇವೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಒತ್ತಡ ಏಕೆ?

* ತಮ್ಮ ಪ್ರದೇಶದಲ್ಲಿ ಪ್ರಭಾವಿ ಆಗಬಹುದು
* ಭವಿಷ್ಯದಲ್ಲಿ ಹುದ್ದೆಗಳನ್ನು ಪಡೆಯಲು ಕೃಪಾಂಕ ಇದ್ದಂತೆ
* ರಾಜ್ಯ, ರಾಷ್ಟ್ರೀಯ ನಾಯಕರ ಸಂಪರ್ಕ ಸುಲಭ ಸಾಧ್ಯ
ಕೃಪೆ:ವಿಜಯವಾಣಿ

ಟೀಂ ಕೆಪಿಸಿಸಿ ಸೇರಲು ಆಕಾಂಕ್ಷಿಗಳ ದುಂಬಾಲು
aspirers-to-join-team-kpcc