ಬೆಂಗಳೂರು,ಸೆಪ್ಟಂಬರ್,26,2024 (www.justkannada.in): ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಹಾಗೂ ನಿಂದಿಸಿದರೆ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ಹಾಕುವ ಕಾನೂನು ಜಾರಿಗೆ ತಂದಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಲ್ಲೇಶ್ವರಂ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಪ್ರಿಸ್ಟಿನ್ ಆಸ್ಪತ್ರೆಯ 20 ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭವನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಸ್ಟಿನ್ ಆಸ್ಪತ್ರೆ ಸೇವಾ ಮನೋಭಾವನೆ ಇಟ್ಟುಕೊಂಡು ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವ ಮೂಲಕ ಒಳ್ಳೆಯ ಹೆಸರು ಮಾಡಿದೆ. ಇಂದಿನ ದಿನಗಳಲ್ಲಿ ಹಲವು ಆಸ್ಪತ್ರೆಗಳು ವ್ಯಾಪಾರೀಕರಣದಲ್ಲಿ ಮುಳುಗಿದ್ದು, ಇಂತಹ ಸಮಯದಲ್ಲಿ ಕೂಡ ಈ ರೀತಿಯ ಆಸ್ಪತ್ರೆ ಗಳು ತಮ್ಮ ಬಿಸಿನೆಸ್ ಗೆ ಗಮನ ನೀಡದೆ ಮಾನವೀಯತೆ ಮೆರೆದು ಹೆಸರಾಗಿವೆ. ಆಸ್ಪತ್ರೆಯ ವೈದ್ಯರು ತಾವೇ ಮುಂದೆ ಬಂದು ಬಿಲ್ ಗಳನ್ನು ಪಾರದರ್ಶಕವಾಗಿ ತರಲು ಸಲಹೆ ನೀಡಿದ್ರೆ ಸರ್ಕಾರ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗಲಿದೆ ಎಂದು ಹೇಳಿದರು.
ನಾವು ನಿಮ್ಮ ಜೊತೆಗೆ ಇದ್ದೇವೆ ನಮ್ಮ ಸರ್ಕಾರ ಯಾರಾದ್ರೂ ಆಸ್ಪತ್ರೆ ಹಾಗೂ ವೈದ್ಯರ ಮೇಲೆ ಹಲ್ಲೆ ಹಾಗೂ ನಿಂದಿಸಿದರೆ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ಹಾಕುವ ಕಾನೂನು ಜಾರಿಗೆ ತಂದಿದ್ದೇವೆ. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು ಅದು ಈಗಾಗಲೇ ಜಾರಿಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ, ಆಸ್ಪತ್ರೆ ಕೋವಿಡ್ ಸಂದರ್ಭದಲ್ಲಿ 24 ಗಂಟೆ ಕೆಲಸ ಮಾಡಿ ಹಲವಾರು ಕೋವಿಡ್ ರೋಗಿಗಳಿಗೆ ಜೀವ ಉಳಿಸಿದೆ. ನಾನು ಮತ್ತು ವೈದ್ಯರಾದ ಪ್ರಸನ್ನ ಮತ್ತು ನಾಗೇಂದ್ರ ಅವರ ತಂಡ ಕಟ್ಟಿಕೊಂಡು ಕೋವಿಡ್ ಸಂದರ್ಭದಲ್ಲಿ ಅವಿರತವಾಗಿ ಕೆಲಸ ನಿರ್ವಹಿಸಿದ್ದಾರೆ
ನನ್ನ ಮಕ್ಕಳು ಕೂಡ ವೈದ್ಯರಾಗಿ ನಮ್ಮ ಕ್ಷೇತ್ರದಲ್ಲಿ ನಾನು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಶಿಬಿರದಲ್ಲೂ ಪಾಲ್ಗೊಂಡು ಜನಸೇವೆ ಸಲ್ಲಿಸುತ್ತಿದ್ದಾರೆ ಜೊತೆಗೆ ನನ್ನ ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆ ಎಂಡಿ ಡಾ.ಪ್ರಸನ್ನ ಹಾಗೂ ಇನ್ನಿತರಿರಿಗೆ ಸೇವೆಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಮಾಜಿ ಶಾಸಕ ನರೇಂದ್ರ ಬಾಬು, ಹಿರಿಯ ಪ್ರಾಧ್ಯಾಪಕರಾದ ಕೆ.ಇ ರಾಧಾಕೃಷ್ಣ, ಹಾಗೂ ರಾಜ್ಯ ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷರಾದ ಗೋವಿಂದಯ್ಯ ಸತೀಶ್ ಹಾಗೂ ಪ್ರಿಸ್ಟಿನ್ ಆಸ್ಪತ್ರೆಯ ಎಂ ಡಿ ಡಾ, ಎಚ್ ಎಂ ಪ್ರಸನ್ನ, ಡಾ, ಬಾಲಚಂದ್ರ , ಡಾ, ಲಕ್ಷ್ಮೀ ನಾರಾಯಣ, ಅನಂತ್ ಕಿಶನ್ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ರಶ್ಮಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.
Key words: Assault, doctor, 7 years, punishment, Minister, Dinesh Gundurao