ಬೆಂಗಳೂರು,ಮಾರ್ಚ್,31,2022(www.justkannada.in): ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳು ಮತ್ತು ಸ್ಥಳೀಯ ವ್ಯಾಪಾರಸ್ಥರ ಮಧ್ಯದಲ್ಲಿ ಘರ್ಷಣೆ ಉಂಟಾಗಿ ಹಲವು ವಾಹನಗಳು ಜಖಂ ಆಗಿದ್ದು ಇಬ್ಬರಿಗೆ ಗಾಯವಾಗಿರುವ ಘಟನೆ ಕಳವಳ ತಂದಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಬಾಗಲಕೋಟೆ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಭಕ್ತರ ಮೇಲೆ ಹಲ್ಲೆಯಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ನಾನು ಕರ್ನೂಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಸಂಪರ್ಕ ಸಾಧಿಸಿ, ಕರ್ನಾಟಕದ ಎಲ್ಲಾ ಯಾತ್ರಿಗಳ ಸುರಕ್ಷತೆಯನ್ನು ಕಾಪಾಡಲು ಮತ್ತು ಅವರ ಗಾಯಾಳುಗಳ ಆರೋಗ್ಯದ ಕಡೆ ಲಕ್ಷ್ಯವಹಿಸಲು ಮತ್ತು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳಿ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದ್ದೇನೆ ಎಂದರು.
ಈಗಾಗಲೇ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಕುರಿತು ಸತತ ನಿಗಾ ವಹಿಸಿದ್ದಾರೆ. ಸೂಕ್ತಕ್ರಮ ಕೈಗೊಳ್ಳಲು ಯಾತ್ರಿಗಳ ಸುರಕ್ಷತೆಯನ್ನು ಸುನಿಶ್ಚಿತಗೊಳಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.
Key words: assault –Kannadiga-Minister – Govind Karajola