ಶ್ರೀಶೈಲ,ಮಾರ್ಚ್,31,2022(www.justkannada.in): ಆಂಧ್ರಪ್ರದೇಶದ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ ಸ್ಥಳೀಯರಿಂದ ಕನ್ನಡಿಗರ ಮೇಲೆ ಹಲ್ಲೆಯಾಗಿದ್ದು, ಕನ್ನಡಿಗರ ನೂರಾರು ವಾಹನಗಳನ್ನ ಜಖಂ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೋಟೆಲ್ ವೊಂದರಲ್ಲಿ ನೀರಿನ ವಿಚಾರಕ್ಕೆ ಗಲಾಟೆಯಾಗಿ ಕರ್ನಾಟಕದ ಬಾಗಲಕೋಟೆ ಮೂಲದ ಯುವಕನ ಮೇಲೆ ಹಲ್ಲೆಯಾಗಿದೆ. ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ನೂರಕ್ಕೂ ಹೆಚ್ಚು ಗಾಡಿ ಜಖಂಗೊಂಡಿರುವ ಮಾಹಿತಿ ಲಭ್ಯವಾಗಿದೆ.
ಹೋಟೆಲ್ನಲ್ಲಿ ನೀರು ಕೇಳುವ ವಿಚಾರವಾಗಿ ಜಗಳ ಪ್ರಾರಂಭವಾಗಿತ್ತು. ಗಲಾಟೆಯಲ್ಲಿ ಬಾಗಲಕೋಟೆಯ ಶ್ರೀಶೈಲ ವಾರಿಮಠ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ಅವರು ಶ್ರೀಶೈಲ ಯಾತ್ರೆಗೆ ತೆರಳಿದ್ದರು. ಹೋಟೆಲ್ ವೊಂದರಲ್ಲಿ ಯುವಕ ಶ್ರೀಶೈಲ್ ಕುಡಿಯಲು ನೀರು ಕೇಳಿ, ಬಳಿಕ ಬಾಟಲ್ನಲ್ಲಿ ನೀರು ತುಂಬಿಕೊಳ್ಳಲು ಮುಂದಾಗಿದ್ದರು. ಈ ವೇಳೆ ತಕರಾರು ತೆಗೆದು ಹೋಟೆಲ್ ನಲ್ಲಿ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಯುವಕನಿಗೆ ಚಾಕು ಇರಿಯಲಾಗಿದೆ.
ಇದೇ ವೇಳೆ ಸ್ಥಳದಲ್ಲಿ ಕನ್ನಡಿಗರು ಹಾಗೂ ಸ್ಥಳೀಯರ ನಡುವೆ ಘರ್ಷಣೆ ಉಂಟಾಗಿದ್ದು, ಕನ್ನಡಿಗರ ವಾಹನಗಳಿಗೆ ಕಲ್ಲು ತೂರಾಟ ಮಾಡಲಾಗಿದೆ. ಉದ್ವಿಗ್ನ ಸ್ಥಿತಿಯ ಕಾರಣ, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 144 ಸೆಕ್ಷನ್ ಹಾಕಲಾಗಿದೆ.
Key words: Assaulted – locals – Srisailam Kannadiga