ಸಮ್ಮಿಶ್ರ ಸರ್ಕಾರಗಳು ವರವೋ..? ಶಾಪವೋ..?

ಬೆಂಗಳೂರು,ಮೇ,12,2023(www.justkannada.in): ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಫಲಿತಾಂಶ  ಪ್ರಕಟವಾಗಲು ಒಂದು ದಿನ ಕಾಯಬೇಕು.  ರಾಜಕೀಯ ಪಕ್ಷಗಳಿಗೆ  ಇನ್ನಿಲ್ಲದ ಟೆನ್ಷನ್.  ಈ ಬಾರಿ ಮತದಾರ ಯಾವುದಾದರೊಂದು ಪಕ್ಷಕ್ಕೆ ಬಹುಮತ ನೀಡುವನೊ, ಆಥವಾ ಅತಂತ್ರ ಫಲಿತಾಂಶ ಮರುಕಳಿಸಿ, ಆಪರೆಷನ್ ಕಮಲ, ಆಪರೇಷನ್ ಹಸ್ತ ಎಂಬ ಅಸಂವಿಧಾನಿಕ ಮಾರ್ಗ ಹಿಡಿಯುವಂತೆ ಮಾಡುವನೊ ಎಂಬ ಆತಂಕದಲ್ಲಿದ್ದಾರೆ.

ರಾಜ್ಯದಲ್ಲಿ ಇದುವರೆವಿಗೂ ಮತದಾರ ನಾಲ್ಕು ಬಾರಿ ಅತಂತ್ರ ಫಲಿತಾಂಶ ನೀಡಿದ್ದಾನೆ. 1983, 2004, 2008 ಮತ್ತು 2018ರಲ್ಲಿ ರಾಜ್ಯದಲ್ಲಿ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡಲಿಲ್ಲ. 1983 ರಲ್ಲಿ ಜನತಾ ಪಕ್ಷ, ಬಿಜೆಪಿ, ಕ್ರಾಂತಿರಂಗ, ಕಮುನಿಷ್ಟರ ಬಾಹ್ಯ ಬೆಂಬಲದಿಂದ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚಿಸಿ ಬಹು ಕಾಲ ಉಳಿಸಿಕೊಳ್ಳಲು ಆಗಲಿಲ್ಲ. 2004 ರಲ್ಲಿ 58 ಸ್ಥಾನ ಗಳಿಸಿದ ದೇವೇಗೌಡರ ಜೆಡಿಎಸ್, ಜಾತ್ಯಾತೀತ ಸೋಗಿನಡಿ ಕಾಂಗ್ರೆಸ್ ಜೊತೆ ಮೊದಲ ಸಮ್ಮಿಶ್ರ ಸರ್ಕಾರ ರಚಿಸಿತು, ಕಾಂಗ್ರೆಸ್ ನ ಎನ್ ಧರಂ ಸಿಂಗ್ ಮುಖ್ಯ ಮಂತ್ರಿಯಾಗಿ, ಸಮ್ಮಿಶ್ರ ಸರ್ಕಾರವನ್ನು ಜೆಡಿಎಸ್ ನಾಯಕರು ನೀಡಿದ ಕಿರುಕುಳದ ನಡುವೆಯೇ ಚೆನ್ನಾಗೆ ನಡೆಸಿದರು. ಅಂತಹ ಸರ್ಕಾರವನ್ನು, ದೇವೇಗೌಡರ ಪುತ್ರ ಕುಮಾರಸ್ವಾಮಿ, ತಾವು ಮುಖ್ಯಮಂತ್ರಿಯಾಗುವ ಕನಸನ್ನು ಈಡೇರಿಸಿಕೊಳ್ಳಲು, ಧರಂಸಿಂಗ್ ಸರ್ಕಾರ ಪಥನಗೊಳಿಸಿ, ಬಿಜೆಪಿಯೊಡನೆ ಮತ್ತೊಂದು 20-20 ಸರ್ಕಾರ ರಚಿಸಿದರು. ಜೆಡಿಎಸ್ 2004 ರಲ್ಲಿ ಕಾಂಗ್ರೆಸ್ ನ ಧರಂ ಸಿಂಗ್ ರಿಗೆ ಮುಖ್ಯ ಮಂತ್ರಿ ಸ್ಥಾನ ನೀಡಲು ಒಪ್ಪಿದ್ದು, ಸಿದ್ದರಾಮಯ್ಯನವರಿಗೆ ಆ ಪದವಿ ವಂಚಿಸಲು ಎಂಬುದು ಈಗ ಹಳೆಯ ವಿಷಯ.

2008 ರಲ್ಲಿ ಬಿಜೆಪಿ ಜೆಡಿಎಸ್ ನ ವಚನ ಭ್ರಷ್ಟತೆಯನ್ನೇ ಚುನಾವಣಾ ವಿಷಯವನ್ನಾಗಿಸಿ 110 ಸ್ಥಾನ ಗಳಿಸಿ, ಆರು ಜನ‌ ಪಕ್ಷೇತರರ ನೆರವಿನಿಂದ ಪ್ರಥಮ ಬಿಜೆಪಿ ಸರ್ಕಾರ ರಚಿಸಿದರು ಯಡಿಯೂರಪ್ಪ.

2018 ರಲ್ಲಿ ಮತ್ತೆ ಅತಂತ್ರ. ಬಿಜೆಪಿಗೆ 104 ಸ್ಥಾನ, ಪಕ್ಷೇತರರು ಸಹ ಇರಲಿಲ್ಲ. ಅಂದು ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ, ಹೇಳಿ ಕೇಳಿ ಬಿಜೆಪಿಯ ಕಟ್ಟಾಳು. ಅತಿ ದೊಡ್ಡ ಪಕ್ಷವಗಿ ಹೊರಹೊಮ್ಮಿದ್ದ ಬಿಜೆಪಿಯನ್ಮು, ಅದಕ್ಕೆ ಬಹುಮತ ಇಲ್ಲದಿದ್ದರೂ, ಸರ್ಕಾರ ರಚಿಸಲು ಸಹಾಯ ಮಾಡಿದರು. ಅದರೆ ಯಡಿಯೂರಪ್ಪನವರ ಸರ್ಕಾರ ಒಂದು ವಾರದಲ್ಲಿ ಪತನವಾಯಿತು. ನಂತರ ಮತ್ತೆ ಜಾತ್ಯಾತೀತ ಮತ್ತು ಮುಖವಾಡ ಮುನ್ನೆಲೆಗೆ ತಂದು ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸರ್ಕಾರ ದ ಗದ್ದುಗೆ ಹಿಡಿದವು. ಈ ಸಮ್ಮಿಶ್ರ ಸರ್ಕಾರ ದ ರಚನೆ ಕಾಂಗ್ರೆಸ್ ನ ಹಲವರಿಗೆ ಅಪಥ್ಯವಾಗಿತ್ತು. ಹದಿನಾಲ್ಕು ತಿಂಗಳು ಬಾಳಿದ ಕುಮಾರಸ್ವಾಮಿ ಯ ಸರ್ಕಾರ ಬಿದ್ದು ಹೋಯಿತು. ಕಾಂಗ್ರೆಸ್ ನ 14 ಶಾಸಕರು, ಜೆಡಿಎಸ್ ನ 3 ಶಾಸಕರು ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾದರು, ಯಡಿಯೂರಪ್ಪ ನಾಲ್ಕನೆ ಬಾರಿಗೆ ಮುಖ್ಯಮಂತ್ರಿಯಾದರು.

ಯಡಿಯೂರಪ್ಪ ನವರ ಪದಚ್ಯುತಿ, ಬಸವರಾಜ ಬೊಮ್ಮಾಯಿಯವರ ದಿಡೀರ್ ಪಟ್ಟಾಭಿಷೇಕ, ಇವೆಲ್ಲವೂ ಜನ ಮಾನಸದಲ್ಲಿವೆ. ನಾಲ್ಕು ಬಾರಿ ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ, ಹೆಗಡೆಯವರ ಸರ್ಕಾರ ಹೊರತುಪಡಿಸಿ, ಒಳ್ಳೆಯ ಸರ್ಕಾರ ನೀಡಿದ ನಿದರ್ಶನವೇ ಇಲ್ಲ.

ಸಮ್ಮಿಶ್ರ ಸರ್ಕಾರ ಎಂದರೆ ಉಂಡೂ ಹೋದ, ಕೊಂಡೂ ಹೋದ ಎಂಬ ಸರ್ಕಾರಗಳೇ ಹೊರತು, ರಾಜ್ಯದ ಅಭಿವೃದ್ಧಿಯ ಕಡೆ ಗಮನ ನೀಡಿದ ಉದಾಹರಣೆ ಕಡಿಮೆ. ಈ ಬಾರಿ ಮತ್ತೆ ಮತದಾರ ಅತಂತ್ರ ಫಲಿತಾಂಶ ನೀಡದಿರಲಿ ಎಂಬುದೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಹಾಗೂ ಜನರ ಪ್ರಾರ್ಥನೆ.  ನಾಳೆಯವರೆಗೂ ಕಾಯೋಣ.

M.SIDDARAJU, SENIOR JOURNALIST

 

ಎಂ.ಸಿದ್ಧರಾಜು.

ಹಿರಿಯ ಪತ್ರಕರ್ತರು, ಬೆಂಗಳೂರು

 

 

Key words: assembly election- coalition -governments – jds-congress-bjp