ಬೆಂಗಳೂರು,ಮೇ,8,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ದಿನವಷ್ಟೇ ಬಾಕಿ ಇದ್ದು, ಮೇ 10ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಒಟ್ಟು 1.60 ಲಕ್ಷ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಅಲೋಕ್ ಕುಮಾರ್, ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಭದ್ರತಾ ಕಾರ್ಯದಲ್ಲಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್ಪೆಕ್ಟರ್, 2,610 ಪಿಎಸ್ ಐ, 5,803 ಎಎಸ್ ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 8.5 ಸಾವಿರ ಹೋಂಗಾರ್ಡ್ಗಳನ್ನು, 650 ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ಬೇರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾದಿಂದಲೂ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ. ಈ ಹಿಂದೆ ಯಾವತ್ತೂ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿರಲಿಲ್ಲ, ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣ ಕಡೆ ಹೆಚ್ಚಿನ ನಿಗಾ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗಬಾರದೆಂದು ಐಪಿಎಸ್ ಅಧಿಕಾರಿಗಳ ಮೂಲಕ 5 ದಿನಗಳಿಂದ ನಿಗಾ ಇಡಲಾಗಿದೆ. 11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಿದ್ದೇವೆ ಎಂದು ಅಲೋಕ್ ಕುಮಾರ್ ತಿಳಿಸಿದರು.
-V.Mahesh kumar
Key words: Assembly election- Heavy security – 1.60 lakh- police