ಜಾತಿಗಣತಿ ವರದಿ ಬಿಡುಗಡೆಗೆ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ತೀವ್ರ ವಿರೋಧ

ಮೈಸೂರು,ಏಪ್ರಿಲ್,16,2025 (www.justkannada.in): ರಾಜ್ಯದಲ್ಲಿ ಜಾತಿ ಗಣತಿ ವರದಿ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದು ಈ ಮಧ್ಯೆ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಜಾತಿಗಣತಿ ವರದಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜಿಲ್ಲಾ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಮರಿಸ್ವಾಮಿ ನೇತೃತ್ವದಲ್ಲಿ  ಮೈಸೂರಿನ ಪತ್ರಕರ್ತರ ಭವನದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಜಾತಿ ಗಣತಿ ವರದಿ ಬಿಡುಗಡೆಗೆ ಖಂಡನೆ ವ್ಯಕ್ತಪಡಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮರಿಸ್ವಾಮಿ,  2015 ರಲ್ಲಿ ಅಂದಿನ ಸರ್ಕಾರ ಜಾತಿ ಗಣತಿ ವೈಜ್ಞಾನಿಕವಾಗಿ ನಡೆಸಿಲ್ಲ. ಕೇವಲ ಯಾವುದೋ ಒಂದು ಎಸಿ ರೂಮ್ ನಲ್ಲಿ ಕೂತು ತಯಾರಿದ ವರದಿ ಆಗಿದೆ. 1987 ರ ಚಿನ್ನಪ್ಪರೆಡ್ಡಿ ಆಯೋಗದ ಪ್ರಕಾರ ಅಂದೇ ಸುಮಾರು 51 ಲಕ್ಷ ಇದಾರೆ ಎಂದು ವರದಿ ಹೇಳಿದೆ. ಅದಾದ ಬಳಿಕ 1991 ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 55 ಲಕ್ಷ ಇದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಕೇವಲ 61 ಲಕ್ಷ ಅಂತ ಅಂಕಿ ಅಂಶ ಕೊಟ್ಟಿದ್ದಾರೆ. ಹಾಗಾದರೆ 34 ವರ್ಷಗಳಲ್ಲಿ ಕೇವಲ ಐದಾರು ಲಕ್ಷ ಮಾತ್ರ ಹೆಚ್ಚಳವಾಗಿದೆಯಾ.? ಎಂದು ಪ್ರಶ್ನಿಸಿದರು.

ಸರಿಯಾಗಿ ಸಮೀಕ್ಷೆ ನಡೆಸಿದರೇ  90 ಲಕ್ಷದಿಂದ 1ಕೋಟಿ ಅಷ್ಟು ಜನ ಸಂಖ್ಯೆ ಇದೆ. ಕಾಂಗ್ರೆಸ್ ಸರ್ಕಾರ ತಪ್ಪು ಅಂಕಿ ಅಂಶಗಳ ನೀಡಿ ಒಕ್ಕಲಿಗರ ಹತ್ತಿಕ್ಕುವ, ತುಳಿಯುವ ಕೆಲಸ ಮಾಡುತ್ತಿದೆ. ಒಕ್ಕಲಿಗ,ಲಿಂಗಾಯತ ಸಮುದಾಯಗಳನ್ನ ರಾಜಕೀಯವಾಗಿ ತುಳಿಯುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಜಾತಿಗಣತಿಗೆ ನಮ್ಮ ವಿರೋಧ ಇಲ್ಲ. ಆದರೆ ವೈಜ್ಞಾನಿಕ ಜಾತಿಗಣತಿ ನಡೆಯಲಿ. ಈಗ ಬಿಡುಗಡೆಗೆ ಸಿದ್ದವಾಗಿರುವ ಜಾತಿ ಗಣತಿ ವರದಿಯನ್ನ ತೀವ್ರವಾಗಿ ವಿರೋಧಿಸುತ್ತೇವೆ. ಈ ಬಗ್ಗೆ ಸರ್ಕಾರದ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚೇತನ್, ಮಿರ್ಲೆ ಶ್ರೀನಿವಾಸ ಗೌಡ, ಸುಶೀಲ ನಂಜಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Mysore, District, Vokkaliga Sangha,opposes, caste census report