ಮುಂಬೈ, ಜೂನ್ 15, 2021 (www.justkannada.in): ಆಟೋರಿಕ್ಷಾ ಆ್ಯಂಬುಲೆನ್ಸ್ ಗಳ ಪರಿಕಲ್ಪನೆಯನ್ನು ಮತ್ತಷ್ಟು ಉಪಯುಕ್ತಗೊಳಿಸುವ ಉದ್ದೇಶದೊಂದಿಗೆ ‘ಮಸಾಲಾ ಕಿಂಗ್’ ಎಂದು ಜನಪ್ರಿಯತೆಗಳಿಸಿರುವ ವ್ಯಾಪಾರಸ್ಥ ಧನಂಜಯ್ ದಾತಾರ್ ಅವರು ಕೋವಿಡ್-19 ಪೀಡಿತ ರೋಗಿಗಳಿಗಾಗಿ ಆಕ್ಸಿಜನ್ ಸಿಲಿಂಡರ್ಗಳು ಹಾಗೂ ಇತರೆ ಸೌಲಭ್ಯಗಳು ಅಳವಡಿಸಿರುವ ‘ಆಟೊರಿಕ್ಷಾ ಆ್ಯಂಬುಲೆನ್ಸ್’ ಎಂಬ ನೂತನ ಉಪಕ್ರಮಕ್ಕೆ ಚಾಲನೆ ನೀಡಿದ್ದಾರೆ.
ದಾತಾರ್ ಯುಎಇನ ಅಲ್ ಆದಿಲ್ ಸಮೂಹದ ಸಿಎಂಡಿ ಆಗಿದ್ದು, ಪುಣೆ ಮೂಲದ ಎರಡು ಸರ್ಕಾರೇತರ ಸಂಸ್ಥೆಗಳಾದ ‘ಸ್ವದೇಶ್ ಸೇವಾ ಫೌಂಡೇಷನ್’ ಹಾಗೂ ‘ಬಘ್ತೊಯ್ ರಿಕ್ಷಾವಾಲಾ’ಗಳ ಸಹಯೋಗದೊಂದಿಗೆ ಈ ಸೌಲಭ್ಯವನ್ನು ಕಲ್ಪಿಸಿದ್ದಾರೆ.
ಈ ಉಪಕ್ರಮದಡಿ, ಗಂಭೀರ ಪರಿಸ್ಥಿತಿಯಲ್ಲಿರುವ ಹಾಗೂ ತಮ್ಮ ಮನೆಗಳಿಂದ ಹತ್ತಿರದ ಆಸ್ಪತ್ರೆಗೆ ತೆರಳಬೇಕಿರುವ ಆಮ್ಲಜನಕದ ಅಗತ್ಯವಿರುವಂತಹ ಕೋವಿಡ್ ಸೋಂಕಿತನ್ನು ಕರೆದೊಯ್ಯಲು, ಆಕ್ಸಿಜನ್ ಸಿಲಿಂಡರ್ ಹಾಗೂ ಇತರೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿರುವ 25 ಆಟೊರಿಕ್ಷಾಗಳ ಸಮೂಹವನ್ನು ಸಿದ್ಧಪಡಿಸಲಾಗಿದೆ.
ಈ ಆಟೋರಿಕ್ಷಾ ಆ್ಯಂಬೆಲೆನ್ಸ್ ಗಳು ಸದ್ಯಕ್ಕೆ ಪುಣೆ ಹಾಗೂ ಪಿಂಪ್ರಿ-ಚಿಂಚವಾಡಿ ಅವಳಿ ನಗರಗಳು ಹಾಗೂ ಮುಲ್ಷಿ, ಮವಲ್ ಹಾಗೂ ಭೋರ್, ಅಹ್ಮದ್ ನಗರ ಹಾಗೂ ಸಾಂಗ್ಲಿ ಒಳಗೊಂಡಂತೆ ಸುತ್ತಮುತ್ತಲಿನ ನಗರ ಹಾಗೂ ಪಟ್ಟಣಗಳಲ್ಲಿ ಸೇವೆಗಳನ್ನು ಆರಂಭಿಸಿವೆ. ಈ ಆಟೋ ಆ್ಯಂಬುಲೆನ್ಸ್ ಗಳ ಸಂಖ್ಯೆಯನ್ನು ಈಗಿರುವ 25ರಿಂದ ಹತ್ತಿರದ ಭವಿಷ್ಯದಲ್ಲಿ 100ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ.
“ಕೋವಿಡ್ ಮಹಾಮಾರಿ ಇನ್ನೂ ಸಂಪೂರ್ಣವಾಗಿ ನಾಶವಾಗದೆ ಇರುವ ಕಾರಣ, ಸಮಾಜದ ಬಹಳ ಅಗತ್ಯವುಳ್ಳ ಸ್ಥರದ ಜನರ ವೈದ್ಯಕೀಯ ಅಗತ್ಯಗಳ ಕಡೆ ನಾವೆಲ್ಲರೂ ಗಮನಿಸಬೇಕಿದೆ. ಗಂಭೀರ ಪರಿಸ್ಥಿರಿಗಳಲ್ಲಿ ಆಕ್ಸಿಜನ್ ಕೊರತೆಯ ಕಾರಣದಿಂದಾಗಿ ಪರದಾಡುತ್ತಿದ್ದಂತಹ ಹಾಗೂ ಈಗಲೂ ಪರದಾಡುತ್ತಿರುವಂತಹ ಬಡ ರೋಗಿಗಳ ಪರಿಸ್ಥಿತಿಯನ್ನು ನಾವ್ಯಾರೂ ಮರೆಯಬಾರದು. ಈ ಹಿನ್ನೆಲೆಯಲ್ಲಿ ಈ ಆಟೋರಿಕ್ಷಾ ಆ್ಯಂಬುಲೆನ್ಸ್ಗಳು ನಮ್ಮ ಉದ್ದೇಶವನ್ನು ಈಡೇರಿಸುತ್ತವೆ ಎಂದು ನಂಬಿದ್ದೇನೆ,” ಎನ್ನುತ್ತಾರೆ ದಾತಾರ್.
ಈ ಪರಿಕಲ್ಪನೆಯ ಕುರಿತು ವಿವರಿಸಿದ ಸ್ವದೇಶ ಸೇವಾ ಫೌಂಡೇಷನ್ನ ಸ್ಥಾಪಕಿ ಹಾಗೂ ಈ ಉಪಕ್ರಮದ ಸಂಯೋಜಕಿ ಧನಶ್ರೀ ಪಾಟೀಲ್ ಅವರು, “ಕೋವಿಡ್-19ರ ಈ ಎರಡನೆಯ ಅಲೆ ನಮ್ಮಲ್ಲರಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಉದ್ಭವಿಸುಬಹುದಾಗಿರುವ ಗಂಭೀರ ಪರಿಸ್ಥಿತಿಯ ಕುರಿತು ಚೆನ್ನಾಗಿ ಅರಿವು ಮೂಡಿಸಿದೆ. ಜೊತೆಗೆ, ಆಕ್ಸಿಜನ್ನ ತೀವ್ರ ಅಗತ್ಯತೆ ಇರುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಬೇಕಾಗಿರುವುದು ಬಹಳ ಮುಖ್ಯ. ಆಕ್ಸಿಜನ್ ಸಿಲಿಂಡರ್ ಅನುಪಸ್ಥಿತಿ ಅಥವಾ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೇ ಇದ್ದರೆ ಸೋಂಕಿತರ ಆರೋಗ್ಯದ ಸ್ಥಿತಿ ಗಂಭೀರವಾಗಬಹುದು, ಹಾಗೂ ಕೆಲವು ಪ್ರಕರಣಗಳಲ್ಲಿ ಮಾರಣಾಂತಿಕವೂ ಆಗಬಹುದು,” ಎಂದರು.
ಆಕೆಯ ಪ್ರಕಾರ ಇಂತಹ ಸನ್ನಿವೇಶಗಳಲ್ಲಿ ಆಕ್ಸಿಜನ್ ಸಿಗದಿರುವ ರೋಗಿಗಳ ಕುಟುಂಬಸ್ಥರೂ ಸಹ ಆತಂಕಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಸೋಂಕಿತರ ಮನೆ ಚಿಕ್ಕ ಬಡಾವಣೆಯ ಸಣ್ಣ ಗಲ್ಲಿ (ರಸ್ತೆ) ಒಳಗೆ ಇದ್ದರೂ ಸಹ ಪರದಾಡಬೇಕಾಗುತ್ತದೆ. “ಬಹಳ ಕಿರಿದಾದ ರಸ್ತೆಯ ಕಾರಣದಿಂದಾಗಿ ಆ್ಯಂಬುಲನ್ಸ್ ಗಳು ಅಲ್ಲಿಗೆ ಸುಲಭವಾಗಿ ಹೋಗಲಾಗುವುದಿಲ್ಲ. ಇಂತಹ ಅದೆಷ್ಟೋ ಸ್ಥಳಗಳು ನಮ್ಮ ದೇಶದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಆಟೋ ಆ್ಯಂಬುಲೆನ್ಸ್ ಗಳು ಬಹಳ ಉತ್ತಮ ಪರಿಹಾರವಾರಬಲ್ಲವು,” ಎನ್ನುತ್ತಾರೆ.
ನಮ್ಮ ಈ ಉಪಕ್ರಮಕ್ಕೆ ತಜ್ಞ ವೈದ್ಯರ ತೊಂಡವೊAದೂ ಸಹ ಸಹಕರಿಸುತ್ತಿದೆ. ಈ ತಂಡ ಆಟೊ ಆ್ಯಂಬುಲೆನ್ಸ್ಗಳ ಚಾಲಕರೊಂದಿಗೆ ರೋಗಿಗಳು/ಸೋಂಕಿತರನ್ನು ಕರೆತರುವಾಗ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯ ಮಾರ್ಗದರ್ಶನವನ್ನೂ ನೀಡುತ್ತಾರೆ.
ಈ ಆಟೊ ಆ್ಯಂಬುಲೆನ್ಸ್ ಗಳ ಎಲ್ಲಾ ಚಾಲಕರಿಗೂ ಸಹ ಪಲ್ಸ್ ಆಕ್ಸಿಮೀಟರ್ ಬಳುಸುವುದು ಹೇಗೆ, ಆಕ್ಸಿಜನ್ ಫ್ಲೋ ಮೀಟರ್ ಬಳಸಿ ದೇಹದ ಆಕ್ಸಿಜನ್ ಮಟ್ಟ ಎಷ್ಟಿದೆ ಹಾಗೂ ರೋಗಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಸರಬರಾಜು ಮಾಡುವುದು ಹೇಗೆ ಎಂಬ ವಿಷಯಗಳ ಕುರಿತು ವೈದ್ಯರ ಮಾರ್ಗದರ್ಶನದಡಿ ಈಗಾಗಲೇ ತರಬೇತಿ ನೀಡಲಾಗಿದೆ.
ಬಘ್ತೊಯ್ ರಿಕ್ಷಾವಾಲಾ ಎನ್ಜಿಒದ ಸ್ಥಾಪಕ ಡಾ. ಕೇಶವ್ ಕ್ಷೀರಸಾಗರ್ ಅವರು ಈ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾ, “ನಮ್ಮ ಚಾಲಕರು ಸಾಂಕ್ರಾಮಿಕದ ಮಾರ್ಗಸೂಚಿಗಳ ಪಾಲನೆಯೊಂದಿಗೆ ಸೋಂಕಿತರನ್ನು ಕರೆದುಕೊಂಡು ಬರುತ್ತಾರೆ. ಪ್ರತಿ ಆಟೊರಿಕ್ಷಾ ಆ್ಯಂಬುಲೆನ್ಸ್ ಓರ್ವ ರೋಗಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಈ ಆಟೋಗಳ ಚಾಲಕರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿರುತ್ತಾರೆ ಹಾಗೂ ವಾಹನವನ್ನು ಆಗಾಗ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗುತ್ತದೆ. ಹಣ ವ್ಯಯಿಸುವ ಶಕ್ತಿ ಇಲ್ಲದಿರುವಂತಹ ಬಡವರಿಗೆ ಈ ಸೇವೆಯನ್ನು ಉಚಿತವಾಗಿಯೂ ಹಾಗೂ ಇತರರಿಗೆ ಕೈಗೆಟಕುವ ದರಗಳಲ್ಲಿಯೂ ಕಲ್ಪಿಸಲಾಗುತ್ತಿದೆ,” ಎನ್ನುತ್ತಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Auto ambulance-now -available -oxgen