ಮೈಸೂರು, ಅಕ್ಟೋಬರ್,24,2020(www.justkannada.in): ಐತಿಹಾಸಿಕ ದಸರಾ ಹಬ್ಬದ ಪಾರಂಪರಿಕ ಸೌಂದರ್ಯವನ್ನು ಅನಾವರಣ ಮಾಡುವ ಜೊತೆಗೆ ಕೊರೋನಾ ನಿರ್ಮೂಲನೆಗೆ ಕಡ್ಡಾಯ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವಿನ ಜಾಗೃತಿ ಮೂಡಿಸಲು ಮೈಸೂರಿನ ಉಜ್ಜೀವನ್ ಬ್ಯಾಂಕ್ ಹೆಬ್ಬಾಳ್ ಶಾಖೆಯ ವತಿಯಿಂದ ಪಾರಂಪಾರಿಕ ದಸರಾ ಬೊಂಬೆ ಪ್ರದರ್ಶನ ಆಯೋಜಿಸಲಾಗಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಬಸವಣ್ಣ, ಮಹಿಳಾ ವಿಶೇಷ ಪತ್ರಿಕೆ ಸಂಪಾದಕರಾದ ಸುಬ್ಬಾರಾವ್ ಮತ್ತು ನಿವೃತ್ತ ಎಲ್ ಐಸಿ ಪ್ರಾದೇಶಿಕ ವ್ಯವಸ್ಥಾಪಕ ಹೇಮಣ್ಣ ಕೆ.ಟಿ ಅವರು ‘ದಸರಾ ಬೊಂಬೆ ಪ್ರದರ್ಶನ’ಕ್ಕೆ ಚಾಲನೆ ನೀಡಿದರು. ಇದೇ ವೇಳೆ ದಸರಾಬೊಂಬೆಗಳ ಜಾಗೃತಿ ಪ್ರಚಾರ ರಥಕ್ಕೆ ಹಸಿರು ನಿಶಾನೆ ತೋರಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಬಸವಣ್ಣ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗವಾಗಿರುವ ದಸರಾ ಗೊಂಬೆಗಳ ಪ್ರದರ್ಶನ ಕಲೆಯು ದಿನದಿಂದ ದಿನಕ್ಕೆ ನೇಪಥ್ಯಕ್ಕೆ ಸರಿದು ಕಣ್ಮರೆಯಾಗುತ್ತಿದೆ. ಯುವಜನರಲ್ಲಿ ದಸರಾ ಹಬ್ಬದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಬೊಂಬೆಗಳ ಪ್ರದರ್ಶನವು ಸಹಕಾರಿಯಾಗಿದೆ. ಒಂದೊಂದು ಬೊಂಬೆಗೂ ಐತಿಹಾಸಿಕ ಹಿನ್ನೆಲೆಯಿದೆಯಲ್ಲದೇ ನಮ್ಮ ಸಂಸ್ಕೃತಿಯ ಸೊಬಗನ್ನು ಅನಾವರಣ ಮಾಡುತ್ತವೆ. ಉಜ್ಜೀವನ್ ಬ್ಯಾಂಕ್ ದಸರಾ ಬೊಂಬೆಗಳ ಪ್ರದರ್ಶನವನ್ನು ಆಯೋಜಿಸುವ ಮೂಲಕ ಜನಸಾಮಾನ್ಯರಲ್ಲಿ ಕೊರೋನಾ ಜಾಗೃತಿ ಮತ್ತು ಬೊಂಬೆಗಳ ಕಥೆಯನ್ನುಮನದಟ್ಟು ಮಾಡಿಕೊಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಮ್ಯಾನೇಜರ್ ದೀಪಿಕಾ ಎಸ್ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.
Key words: Awareness- Corona-traditional –dasara- puppet show -Ujjivan Bank-mysore