ದಕ್ಷಿಣ ಕನ್ನಡ,ಅಕ್ಟೋಬರ್,3,2020(www.justkannada.in): ಆಯುರ್ವೇದ ಔಷಧ ಪದ್ಧತಿಯಲ್ಲಿ ಹಲವಕ್ಕೆ ಜೇನುತುಪ್ಪ ಬೇಕೇ ಬೇಕು. ಇದರಲ್ಲಿ ಅಷ್ಟು ಅದ್ಭುತ ಶಕ್ತಿ ಇದೆ. ಹೀಗಾಗಿ ಇದಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ ಹೇಳಿದರು.
ಪುತ್ತೂರಿನ ದಕ್ಷಿಣ ಕನ್ನಡ ಜೇನು ವ್ಯವಹಾರಗಳ ಸಹಕಾರಿ ಸಂಘ ನಿಗಮದಲ್ಲಿ ನೂತನ ಆಡಳಿತ ಕಚೇರಿ ಹಾಗೂ ಸಭಾಭವನವನ್ನು ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಸಹಕಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರುಗಳು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಜೇನುನೊಣಗಳಿಂದಲೂ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಶೇ. 85 ರಷ್ಟು ಪರಾಗಸ್ಪರ್ಶವಾಗುವುದರಿಂದ ಇತರ ಬೆಳೆಗಳಿಗೂ ಅನುಕೂಲವಾಗುತ್ತಿದೆ ಎಂದು ಸದಾನಂದ ಗೌಡ ಅವರು ತಿಳಿಸಿದರು.
ಆತ್ಮನಿರ್ಭರ ಭಾರತ್ ಯೋಜನೆಯಡಿ ಜೇನು ಕೃಷಿಯೂ ಸೇರಿದೆ. ಇದಕ್ಕಾಗಿ ಸುಮಾರು 500 ಕೋಟಿ ರೂಪಾಯಿ ನಿಗದಿಪಡಿಸಲಾಗಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವರು ತಿಳಿಸಿದರು.
ಯುವಕರಿಗೆ ಜೇನುಕೃಷಿಗಳ ಬಗ್ಗೆ ತರಬೇತಿಯನ್ನು ಕೊಟ್ಟು, ಅವರಿಗೆ ಆತ್ಮನಿರ್ಭರ ಯೋಜನೆಯಡಿ ಜೇನುಪೆಟ್ಟಿಗೆಯನ್ನು ಸಾಲದ ರೂಪದಲ್ಲಿ ನೀಡಿದಲ್ಲಿ ಇನ್ನಷ್ಟು ಪೂರಕ ವಾತಾರಣ ನಿರ್ಮಾಣವಾಗಲಿದೆ ಎಂದು ಸದಾನಂದಗೌಡರು ತಿಳಿಸಿದರು.
ಪುತ್ತೂರು ಸಹಕಾರಿಗಳು ದೇಶಕ್ಕೇ ಮಾದರಿ- ಸಚಿವ ಸೋಮಶೇಖರ್…
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಸಹಕಾರ ಸಂಸ್ಥೆ ಬೆಳೆಯಲು ಅಲ್ಲಿನ ಅಧ್ಯಕ್ಷರು, ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಸಹಕಾರದಿಂದ ಸ್ಪಂದಿಸಿ ಪೂರಕವಾಗಿ ಕೆಲಸ ಮಾಡಬೇಕು. ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಅಂತಹ ವಾತಾವರಣ ಪುತ್ತೂರಿನ ಸಹಕಾರಿಗಳಲ್ಲಿ ಕಾಣುತ್ತಿದೆ. ಇದು ದೇಶದಲ್ಲಿಯೇ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಇನ್ನು ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಿ, ಸದಸ್ಯರಿಗೆ ಡಿವೆಡೆಂಟ್ ಕೊಡುವುದು, ಸ್ವಂತವಾದ ಕಟ್ಟಡ ಹೊಂದಿದ್ದರೆ ಬೆಳೆದಿದೆ ಎಂದರ್ಥ. ಆದರೆ, ಕೆಲವು ಕಡೆ ಡಿಸಿಸಿ ಬ್ಯಾಂಕ್ ವ್ಯವಹಾರದಲ್ಲಿ ಅವ್ಯವಹಾರ ಕಾಣಿಸಿಕೊಂಡು ಮುಳುಗಿಸುವ ಹಂತಕ್ಕೂ ಹೋಗಲಾಗಿದೆ. ಇಲ್ಲಿ ಮಾತ್ರ ಎಲ್ಲರೂ ಅಭಿವೃದ್ಧಿ ಬಗ್ಗೆಯೇ ಚಿಂತಿಸಿ ಕಾರ್ಯಪ್ರವೃತ್ತರಾಗುತ್ತಿರುವುದು ಸಂತಸದ ವಿಚಾರ ಎಂದು ಸಚಿವರಾದ ಸೋಮಶೇಖರ್ ಹೇಳಿದರು.
27 ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿದ್ದೇನೆ. ರೈತರಿಗೆ ಹೇಗೆ ಎಲ್ಲ ರೀತಿಯ ಬೆಳೆಗಳನ್ನು ಬೆಳೆಯಲು ಹಕ್ಕಿದೆಯೋ ಹಾಗೆಯೇ ಈಗಿನ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಹೀಗಾಗಿ ರೈತರಿಗೆ ಯಾವುದೇ ಪರವಾನಗಿ ಬೇಡ. ಜೊತೆಗೆ ಯಾವುದೇ ದಂಡ ಹಾಕುವ ಪ್ರಶ್ನೆಯೂ ಇರುವುದಿಲ್ಲ ಎಂದು ಸೋಮಶೇಖರ್ ಅವರು ಸ್ಪಷ್ಟಪಡಿಸಿದರು.
ಇನ್ನು ಮಲ್ಟಿನ್ಯಾಷನಲ್ ಒತ್ತಡಕ್ಕೆ ಮಣಿಯಲಾಗಿದೆ ಎಂದು ಪ್ರತಿಪಕ್ಷದವರು ಆರೋಪ ಮಾಡುತ್ತಾರೆ. ಆದರೆ, ಇಲ್ಲಿ ದಿಕ್ಕುತಪ್ಪಿಸುವ ಕೆಲಸವಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 29 ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಪರವಾನಗಿ ಕೊಟ್ಟಿದ್ದರು. ಹೀಗಿದ್ದರೂ ಎಪಿಎಂಸಿ ವ್ಯವಸ್ಥೆಗಾಗಲೀ, ರೈತರಿಗಾಗಲೀ ಯಾವುದೇ ಧಕ್ಕೆಯಾಗಿಲ್ಲ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.
ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲಿ ಎಂಬ ನಿಟ್ಟಿನಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿಯವರು ಆಶಯಹೊಂದಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ದಂಡ ಬೀಳುತ್ತಿಲ್ಲ. ಇದುವರೆಗೆ ಪರವಾನಗಿ ಪಡೆದು ಬೇರೆಡೆ ಮಾರಾಟ ಮಾಡಿದ್ದ ರೈತರಿಂದ ದಂಡ ಹಾಕಿ ವಸೂಲಿ ಮಾಡಲಾಗಿದ್ದ ಶುಲ್ಕವೇ 25 ಲಕ್ಷ ರೂಪಾಯಿ ಆಗಿತ್ತು. ಇನ್ನು ರೈತರಿಗೆ ಆ ತಾಪತ್ರಯವಿಲ್ಲ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಶಾಸಕರಾದ ಸಂಜೀವ ಮಠಂದೂರು ಹಾಗೂ ಇತರರು ಉಪಸ್ಥಿತರಿದ್ದರು.
ಮಧುಪ್ರಪಂಚದ 42ನೇ ಸಂಚಿಕೆ ಬಿಡುಗಡೆ
ಜೇನುಕೃಷಿಗೆ ಸಂಬಂಧಪಟ್ಟಂತೆ ಮಧುಪ್ರಪಂಚದ 42ನೇ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಿಡುಗಡೆಗೊಳಿಸಲಾಯಿತು. ಮಾಧುರಿ ಸಾಕ್ಷ್ಯಚಿತ್ರವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಅನಾವರಣಗೊಳಿಸಿದರು.
Key words: Ayurvedic medicine -power – honey – Union Minister- DV Sadananda Gowda-ST Somashekar