ನವದೆಹಲಿ, ಮಾ.19, 2025 : ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು.
ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿ, ಹೃದಯಾಘಾತ ಮತ್ತು ಪಾರ್ಶ್ವವಾಯುನಿಂದ ಮರಣ ಹೊಂದುವವರು ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಪ್ರತಿ ವರ್ಷ ನಾವು ಲಕ್ಷಾಂತರ ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ದುರದೃಷ್ಟವಶಾತ್ ಶೇ.30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕರಗಿಸುವ ಇಂಜೆಕ್ಷನ್‌ಗಳು ಲಭ್ಯವಾಗುವಂತೆ ಮಾಡಬೇಕು. ಇದರಿಂದ ಗೋಲ್ಡನ್. ಹವರ್ ನಲ್ಲಿಯೇ,( ಆರು ಗಂಟೆಗಳ ಒಳಗಾಗಿ) ಜೀವಗಳನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಆರಂಭಿಕವಾಗಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟಂಟ್ ಅಳವಡಿಸುವುದಕ್ಕಾಗಿ ರೋಗಿಗಳನ್ನು ಹತ್ತಿರದ ನಗರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಪ್ರಧಾನಿ ಒತ್ತಾಯಿಸಿದರು. ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಒಳಗೊಳ್ಳಲ್ಪಟ್ಟಿದ್ದರೂ ಜೀವ ರಕ್ಷಕ ಔಷಧಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತೀವ್ರಗತಿಯ ಸುಧಾರಣೆ ಆಗುತ್ತಿವೆ. 2013-14ರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆ ಕೇವಲ 37,000 ಕೋಟಿ ರೂ. ಗಳಷ್ಟಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಹಂಚಿಕೆ 99,058 ಕೋಟಿ ರೂ.ಗಳಿಗೆ ಏರಿದೆ ಎಂದು ಹೆಚ್.ಡಿ. ದೇವೇಗೌಡ ಹೇಳಿದರು.
key words: heart attack, stroke treatment, Ayushman Bharat, Former Prime Minister H.D. Devegowda.
summary:
Add heart attack, stroke treatment to Ayushman Bharat coverage: Former Prime Minister H.D. Devegowda.