ಬಿಎಸ್​ವೈ ರಾಜಕೀಯ ಉತ್ಸಾಹದ ಮೇಲೆ ಮೈತ್ರಿ ಭವಿಷ್ಯ ನಿರ್ಧಾರ

ಬೆಂಗಳೂರು:ಜುಲೈ-5: ಕಾಂಗ್ರೆಸ್-ಜೆಡಿಎಸ್ ನಡುವಿನ ದೋಸ್ತಿಯಲ್ಲಿ ಅಪನಂಬಿಕೆ ಆರಂಭವಾಗಿ ಹಲವು ದಿನಗಳೇ ಕಳೆದಿವೆ. ಆದರೂ ಮೈತ್ರಿ ಸರ್ಕಾರ ದಿನ ಕಳೆಯುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರಣವಂತೆ!

ಹೀಗೊಂದು ಅಚ್ಚರಿಯನ್ನು ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರೇ ಉಸುರಿದ್ದಾರೆ. ಮೈತ್ರಿಯಲ್ಲಿ ತಲೆ ತಗ್ಗಿಸಿಕೊಂಡು ಮುಂದುವರಿಯಲು ಹಲವು ಕಾರಣಗಳುಂಟು, ಅದರಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಪ್ರಮುಖವಾಗಿದೆ ಎಂಬ ವಿಶ್ಲೇಷಣೆ ಇದೆ. ನಾವು ಜೆಡಿಎಸ್​ನೊಂದಿಗೆ ಮುಂದುವರಿದಷ್ಟೂ ದಿನ ಪಕ್ಷಕ್ಕೆ ಅಪಾಯ ಕಟ್ಟಿಟ್ಟಬುತ್ತಿ, ಅವರೊಂದಿಗೆ ಮುಂದುವರಿಯುವುದು ಸೂಕ್ತವಲ್ಲ ಎಂಬ ಸಂಗತಿ ಹೈಕಮಾಂಡ್ ಮಟ್ಟದಲ್ಲೂ ಅನೇಕ ಬಾರಿ ಚರ್ಚೆಯಾಗಿದೆ. ಸದ್ಯಕ್ಕಂತೂ ಸಂಬಂಧ ಕಡಿದುಕೊಳ್ಳದೇ ಇರಲು ಬೇರೆಯದೆ ಕಾರಣವಿದೆ ಎಂದವರು ವಿವರಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, 76 ವರ್ಷವಾದರೂ ಬಿ.ಎಸ್. ಯಡಿಯೂರಪ್ಪ ಈಗಲೂ ರಾಜಕಾರಣದಲ್ಲಿ ಉತ್ಸಾಹ ಉಳಿಸಿಕೊಂಡಿದ್ದಾರೆ. ಒಂದೊಮ್ಮೆ ಈ ಹಂತದಲ್ಲಿ ನಾವು ಜೆಡಿಎಸ್ ಜತೆ ಸಂಬಂಧ ಕಡಿದುಕೊಂಡು ಮಧ್ಯಂತರ ಚುನಾವಣೆ ನಡೆದರೆ ಬಿಎಸ್​ವೈ ಫ್ಯಾಕ್ಟರ್ ಖಂಡಿತ ಕೆಲಸ ಮಾಡುತ್ತದೆ ಎಂದವರು ವಿಶ್ಲೇಷಿಸಿದ್ದಾರೆ. ಬಿಎಸ್​ವೈ ಒಮ್ಮೆ ಸರ್ಕಾರ ರಚನೆಗೆ ಮುಂದಾದರೆಂದರೆ, ಅವರ ಹಿಂದೆ ಪ್ರಬಲ ಸಮುದಾಯಗಳು ಬೆನ್ನಿಗೆ ನಿಲ್ಲುತ್ತವೆ. ಇದರಿಂದ ಕಾಂಗ್ರೆಸ್​ಗೆ ಭವಿಷ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಜಾತಿ ಸಮೀಕರಣ ಮಾಡಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗುತ್ತದೆ ಮತ್ತು ಈ ಸಮಯ ದೀರ್ಘಾವಧಿ ತೆಗೆದುಕೊಳ್ಳುತ್ತದೆ. ಹೀಗಾಗಿ ಇನ್ನಷ್ಟು ದಿನ ಜೆಡಿಎಸ್ ನಾಯಕರನ್ನು ಸಹಿಸಿಕೊಂಡು ಸರ್ಕಾರದಲ್ಲಿ ಮುಂದುವರಿಯುವುದೆ ಲೇಸೆಂಬ ತೀರ್ವನಕ್ಕೆ ಬಂದಿದ್ದಾರೆ. ಒಂದೊಮ್ಮೆ ಯಡಿಯೂರಪ್ಪ ರಾಜಕೀಯ ಉತ್ಸಾಹ ಕುಗ್ಗಿದ ಬಳಿಕ ನಮ್ಮ ನಿರ್ಧಾರ ಬದಲಿಸಿಕೊಂಡರೆ ಬಿಜೆಪಿ ಜತೆ ದೊಡ್ಡ ಸಮುದಾಯ ಇಡೀ ಬೆನ್ನಿಗೆ ನಿಲ್ಲದು. ಈ ಕಾರಣಕ್ಕೆ ತಾಳ್ಮೆಯಿಂದ ಕಾಯ್ದು ನೋಡಲು ಪಕ್ಷದ ಅನೌಪಚಾರಿಕ ಸಭೆಗಳಲ್ಲಿ ಚರ್ಚೆ ನಡೆಸಿ ನಿರ್ಧಾರಕ್ಕೆ ಬಂದಿದ್ದಾರೆಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಗೂ ಮುನ್ನ ಮತ್ತು ಫಲಿತಾಂಶ ಪ್ರಕಟ ಬಳಿಕ ಜೆಡಿಎಸ್​ನೊಂದಿಗಿನ ಸಂಬಂಧದ ಬಗ್ಗೆ ಹೆಚ್ಚೆಚ್ಚು ನಕಾರಾತ್ಮಕ ಅಭಿಪ್ರಾಯ ಬರಲು ಆರಂಭವಾಯಿತು. ಕಾಂಗ್ರೆಸ್ ಹೈಕಮಾಂಡ್ ಮಾತ್ರ ತನ್ನ ನಿಲುವಿನಲ್ಲಿ ಅಚಲತೆ ತೋರಿಸುತ್ತಲೇ ಬಂದಿದೆ. ಒಂದು ವೇಳೆ ಜೆಡಿಎಸ್ ಜತೆ ಮೈತ್ರಿ ಸಾಕೆಂದರೆ ಒಂದೂ ಮಧ್ಯಂತರ ಚುನಾವಣೆ ಬರಬಹುದು, ಇಲ್ಲವಾದರೆ ಬಿಜೆಪಿ ಹಾಗೂ ಹೀಗೂ ಸರ್ಕಾರ ನಡೆಸಬಹುದು. ಈ ಹಂತದಲ್ಲಿ ಮಧ್ಯಂತರ ಚುನಾವಣೆ ನಡೆದರೆ ಖಂಡಿತ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸನ್ನಿವೇಶ ಇಲ್ಲ ಎಂಬ ಸ್ಪಷ್ಟತೆ ಇರುವುದರಿಂದಲೇ ಮೈತ್ರಿ ಸರ್ಕಾರದಲ್ಲೇ ಮುಂದುವರಿಕೆ ಸೂಕ್ತವೆಂಬ ಅಭಿಪ್ರಾಯ ಹೈಕಮಾಂಡ್ ಮಟ್ಟದಲ್ಲಿ ವ್ಯಕ್ತವಾಗಿದೆ.

ಹೈಕಮಾಂಡ್​ನ ಈ ಅಭಿಪ್ರಾಯ ರಾಜ್ಯದ ಪ್ರಮುಖ ನಾಯಕರ ಪೈಕಿ ಕೆಲವರಿಗೆ ಇಷ್ಟವಾಗಿದ್ದರೆ, ಮತ್ತೆ ಕೆಲವರಿಗೆ ಸಹ್ಯವೆನಿಸಿಲ್ಲ. ಆದರೂ ತಲೆಯಾಡಿಸಿ ಬಂದಿದ್ದಾರೆ. ಪಕ್ಷ ಸಂಘಟನೆಯನ್ನು ಪುನಾರಚಿಸಿ ಒಂದು ಹುರುಪು ಮೂಡಿದ ನಂತರವಷ್ಟೇ ಪಕ್ಷ ತನ್ನ ನಿಲುವು ಬದಲಿಸಲು ಸಾಧ್ಯವಿದೆ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟರು.

ರಾಜ್ಯದಲ್ಲೂ ಸ್ಥಿತ್ಯಂತರ?

ಎಐಸಿಸಿ ಹೊಸ ಅಧ್ಯಕ್ಷರ ಆಯ್ಕೆ ಬಳಿಕ ರಾಜ್ಯ ಕಾಂಗ್ರೆಸ್​ನಲ್ಲೂ ಒಂದಷ್ಟು ಬದಲಾವಣೆ ಆಗಬಹುದೆಂದು ಊಹಿಸಲಾಗಿದೆ. ರಾಜ್ಯ ಕಾಂಗ್ರೆಸ್​ನಲ್ಲಿ ವಲಸಿಗ, ಮೂಲನಿವಾಸಿಗರು ಎಂಬ ಬಣ ರಾಜಕೀಯವಿದ್ದು, ಆಗಿಂದಾಗ್ಗೆ ಒಂದೊಂದು ಬಣ ಮೇಲುಗೈ ಸಾಧಿಸುತ್ತಲೇ ಬಂದಿದೆ. ಇದೀಗ ಎಐಸಿಸಿ ಹಂತದಲ್ಲಿ ಹೊಸ ಅಧ್ಯಕ್ಷರು ಮತ್ತು ಅವರ ತಂಡದ ಮೂಲಕ ರಾಜ್ಯದಲ್ಲೂ ತಮ್ಮ ಹಿಡಿತ ಬಿಗಿಗೊಳಿಸಿಕೊಳ್ಳಲು ಕೆಲ ನಾಯಕರು ಕಾಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೃಪೆ;ವಿಜಯವಾಣಿ

ಬಿಎಸ್​ವೈ ರಾಜಕೀಯ ಉತ್ಸಾಹದ ಮೇಲೆ ಮೈತ್ರಿ ಭವಿಷ್ಯ ನಿರ್ಧಾರ
b-s-yeddyurappa-bsy-bjp-congress-jds-alliance