ಮೈಸೂರು,ಮೇ,22,2023(www.justkannada.in): ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಬಡಗಲಪುರ ನಾಗೇಂದ್ರ, ಮೈಸೂರು ಜಿಲ್ಲೆಯ ಸಿದ್ದರಾಮಯ್ಯನವರು ಸಿಎಂ ಆಗಿರುವುದು ಖುಷಿಯ ವಿಷಯ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ರಾಜ್ಯದ ಒಳಿತಿಗಾಗಿ ಕೆಲಸ ಮಾಡಲಿ. ಜೊತೆಗೆ ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾಗಿರುವುದು ಖುಷಿಯ ವಿಚಾರ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನ ನಂಬಿ ಸಂಪೂರ್ಣ ಬಹುಮತ ನೀಡಿದ್ದಾರೆ. ಬಿಜೆಪಿ ಸರ್ಕಾರವನ್ನ ಜನತೆ ಕಿತ್ತೆಸೆದಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿ ಎಂದು ಶುಭಹಾರೈಸಿದರು.
ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆಯನ್ನ ವಾಪಾಸ್ ಪಡೆಯಬೇಕು. ಕೇಂದ್ರ ಸರ್ಕಾರ ರೂಪಿಸಿರುವ ವಿದ್ಯುಚ್ಛಕ್ತಿ ಕಾಯ್ದೆಯನ್ನ ರಾಜ್ಯದಲ್ಲಿ ಜಾರಿಗೆ ತರಬಾರದು. ಡಾ ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರೆಕಿಸಬೇಕು ಎಂದು ಸರ್ಕಾರದ ಮುಂದೆ ಬಡಗಲಪುರ ನಾಗೇಂದ್ರ ಬೇಡಿಕೆಗಳನ್ನಿಟ್ಟರು.
ಸುದ್ಧಿಗೋಷ್ಠೀಯಲ್ಲಿ ಹೊಸಕೋಟೆ ಬಸವರಾಜ್, ಪ್ರಸನ್ನ ಎನ್ ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.
Key words: Badgalpur Nagendra-demands-government – withdraw -anti-farmer act.