ಮೈಸೂರು,ಮಾರ್ಚ್,5,2024(www.justkannada.in): ನಾಳೆಯಿಂದ ಮೈಸೂರಿನ ಪ್ರತಿಷ್ಠಿತ ರಂಗಾಯಣ ಸಂಸ್ಥೆಯಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದ್ದು, ರಂಗಾಯಣ ಸಂಸ್ಥೆಯ ಆವರಣದಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ.
ಮಾರ್ಚ್ 6ರಿಂದ 11ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ ಮಾಡಲಾಗಿದ್ದು, ‘ಇವ ನಮ್ಮವ ಇವ ನಮ್ಮವ’ ಎಂಬ ಬಸವಣ್ಣನವರ ವಚನದ ಸಾಲಿನ ಶೀರ್ಷಿಕೆಯೊಂದಿಗೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅನಾವರಣಗೊಳ್ಳಲಿದೆ.
ನಾಡಿನ ಹೆಸರಾಂತ ಸಾಹಿತಿ, ಕವಿ ಜಯಂತ್ ಕಾಯ್ಕಿಣಿಯವರು ಚಾಲನೆ ನೀಡಲಿದ್ದಾರೆ. ಈ ಬಾರಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡ ಭಾಷೆಯ 10 ಹಾಗೂ ತುಳು ಭಾಷೆಯ ಒಂದು ನಾಟಕ ಸೇರಿದಂತೆ ಒಟ್ಟು 17 ನಾಟಕಗಳು ಭೂಮಿಗೀತ, ವನರಂಗ, ಕಲಾಮಂದಿರ, ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಜನಪದ ಸಂಭ್ರಮ, ವಿಚಾರ ಸಂಕಿರಣ, ಕರಕುಶಲ ಮೇಳ, ಪುಸ್ತಕ ಮಾರಾಟ, ಚಲನಚಿತ್ರೋತ್ಸವ ಮೊದಲಾದ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿದ ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ನಾಳೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ನಾಳೆ ಜಾನಪದೋತ್ಸವ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ನಾಟಕೋತ್ಸವಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಚಾಲನೆ ನೀಡಲಿದ್ದಾರೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾಷ್ಟ್ರೀಯ ಚಲನ ಚಿತ್ರೋತ್ಸವ, ಪುಸ್ತಕ ಮೇಳ, ನಾಟಕ ಪ್ರದರ್ಶನಗಳು ನಡೆಯಲಿದ್ದು, ಕಲಾವಿದರಿಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪ್ರಮುಖವಾಗಿ ಬಸವಣ್ಣನವರ ಆಶಯವನ್ನ ಜನರಿಗೆ ತಿಳಿಸಲು ಮುಂದಾಗಿದ್ದೇವೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಎಲ್ಲಾ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
Key words: Baharoopi-Natakotsava- Mysore- tomorrow.