ರಾಮಮಂದಿರಕ್ಕೆ ಬಾಲರಾಮನ ಮೂರ್ತಿ ಆಯ್ಕೆ: ಶಿಲ್ಪಿ ಅರುಣ್ ಯೋಗಿರಾಜ್ ಸ್ವಗ್ರಾಮದಲ್ಲಿ ಸಂಭ್ರಮಾಚರಣೆ.

ಮೈಸೂರು,ಜನವರಿ, 2,2023(www.justkannada.in):  ಜನವರಿ 22ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನೆರವೇರಲಿದ್ದು ಈ ದಿನಕ್ಕಾಗಿ ಹಿಂದೂ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ  ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಟಾಪನೆಗೆ ಮೈಸೂರಿನ ಶಿಲ್ಫಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಬಾಲರಾಮ ಮೂರ್ತಿ ಆಯ್ಕೆಯಾಗಿದ್ದು ಸ್ವಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಅರುಣ್ ಯೋಗಿ ಕೆತ್ತನೆ ಮಾಡಿರುವ ಬಾಲರಾಮ ಮೂರ್ತಿ ಆಯ್ಕೆಯಾಗಿರುವ ಹಿನ್ನೆಲೆ, ಅರುಣ್ ಯೋಗಿರಾಜ್ ಅವರ ಸ್ವಗ್ರಾಮ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಶಿಲ್ಪಿ ಅರುಣ್ ಯೋಗಿರಾಜ್ ಜೊತೆ ಮಾವ ಚಲುವರಾಜ್  ಅವರು ಸಹ ರಾಮನಮೂರ್ತಿ ಕೆತ್ತನೆಯಲ್ಲಿ ಭಾಗಿಯಾಗಿದ್ದರು.  ಆರು ತಿಂಗಳು ಅರುಣ್ ಯೋಗಿ ಜೊತೆ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಕೆತ್ತನೆಯಲ್ಲಿ ಭಾಗಿಯಾಗಿದ್ದರು. ಇದೀಗ ಅರುಣ್ ಯೋಗಿ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ.

ಅರುಣ್ ಯೋಗಿರಾಜ್ ಮತ್ತು ಕುಟುಂಬಸ್ಥರನ್ನ ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು.

ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹ ಕೆತ್ತನೆ ಮಾಡುವ ಮೂಲಕ  ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರಾಷ್ಟ್ರದ ಗಮನ ಸೆಳೆದಿದ್ದು, ಈ ಹಿನ್ನೆಲೆ ಅರುಣ್ ಯೋಗಿರಾಜ್ ಕುಟುಂಬಸ್ಥರನ್ನ ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.

ಮೈಸೂರಿನ ಪಾಠಶಾಲಾ ಬಳಿ ಇರುವ ನಿವಾಸಕ್ಕೆ ಭೇಟಿ ನೀಡಿ ಅರುಣ್ ಯೋಗಿರಾಜ್ ಪತ್ನಿ ವಿಜೇತ ಹಾಗೂ ತಾಯಿ ಸರಸ್ವತಿ ಅವರನ್ನ  ಕಾಂಗ್ರೆಸ್ ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರು ಸನ್ಮಾನಿಸಿದರು.

ಅಯೋಧ್ಯೆಯಲ್ಲಿ ನಮ್ಮ ಮೈಸೂರಿನ ಹೆಮ್ಮೆಯ ಶಿಲ್ಪಿ ಕೆತ್ತನೆ ಮಾಡಿರುವ ಬಾಲ ರಾಮನಮೂರ್ತಿ  ಅನಾವರಣವಾಗುತ್ತಿರುವುದು ಸಂತಸದ ವಿಚಾರ ಎಂದು ಕಾಂಗ್ರೆಸ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.  ಈ ವೇಳೆ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸುಶ್ರುತ್ ಗೌಡ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

Key words: Balarama –statue- selected – Ram Mandir- Sculptor -Arun Yogiraj -celebrates