ಬೆಂಗಳೂರು,ಮಾರ್ಚ್,10,2025 (www.justkannada.in): ರಾಜ್ಯದ ಪುಣ್ಯಕ್ಷೇತ್ರಗಳ ನದಿಗಳು ಮತ್ತು ಕಲ್ಯಾಣಿ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಸೋಪ್ ಮತ್ತು ಶಾಂಪೂ ಮಾರಾಟವನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಸೋಪು, ಶಾಂಪು ಮಾರಾಟ ಮಾಡುವ ಹಾಗಿಲ್ಲ. ಭಕ್ತರು ನದಿಯಲ್ಲಿ ಯಾವುದೇ ವಸ್ತುಗಳನ್ನು ಬಿಸಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಪರಿಸರ ಸ್ನೇಹಿ ಕ್ರಮವಾಗಿ, ಪುಣ್ಯಕ್ಷೇತ್ರಗಳ ನದಿಗಳು ಮತ್ತು ಕಲ್ಯಾಣಿ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಸೋಪ್ ಮತ್ತು ಶಾಂಪೂ ಮಾರಾಟವನ್ನು ನಿಷೇಧಿಸಲು ನಾನು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನದಿಯಲ್ಲಿ ಸ್ನಾನ ಮಾಡುವ ಭಕ್ತರು ತ್ಯಜಿಸುವ ಶಾಂಪೂ ಪ್ಯಾಕೆಟ್ ಗಳು ಮತ್ತು ಸಣ್ಣ ಸೋಪ್ ಗಳು ನೀರನ್ನು ಮಾಲಿನ್ಯಗೊಳಿಸುತ್ತಿದ್ದು, ಇದು ಜನರ ಮತ್ತು ಜಲಚರ ಪ್ರಾಣಿಗಳ ಆರೋಗ್ಯಕ್ಕೆ ತೀವ್ರ ಹಾನಿಯನ್ನು ಉಂಟುಮಾಡುತ್ತಿದೆ. ಅಲ್ಲದೆ, ಯಾತ್ರಾಸ್ಥಳಗಳಲ್ಲಿ ಬಟ್ಟೆ ತ್ಯಜಿಸುವ ಪ್ರವೃತ್ತಿ ಗಮನಕ್ಕೆ ಬಂದಿರುವುದರಿಂದ, ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
Key words: Ban, sale, soap, shampoo, rivers, holy place