ಚಾಮರಾಜನಗರ,ಮಾರ್ಚ್,28,2025 (www.justkannada.in) : ಬಂಡೀಪುರ ಅಭಯಾರಣ್ಯದಲ್ಲಿ ಹೊಸ ಹೋಮ್ ಸ್ಟೇಗಳನ್ನು ಪ್ರಾರಂಭಿಸಿಲು ನಿರಪೇಕ್ಷಣಾ ಪತ್ರವನ್ನು ನೀಡಲು ಅರಣ್ಯ ಇಲಾಖೆ ನಿರಾಕರಿಸಿದೆ.
ಬಂಡೀಪುರ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ಹೊಸದಾಗಿ ಹೋಂ ಸ್ಟೇ ಗಳನ್ನು ಪ್ರಾರಂಭಿಸಲು ಅನುಮತಿ ಕೋರಿ ಬರುವ ಪ್ರಸ್ತಾವನೆಗಳನ್ನು ತಿರಸ್ಕರಿಸುವಂತೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಪ್ರಭಾಕರ್ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಬಂಡೀಪುರ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಅಕ್ಟೋಬರ್ 2012ರಲ್ಲಿ ಹೊರಡಿಸಿರುವ ಅಧಿಸೂಚನೆಯಂತೆ ಹೊಟೇಲ್ ,ರೆಸಾರ್ಟ್ ಮತ್ತು ಇತರೆ ಪ್ರವಾಸೋದ್ಯಮಗಳ ಚಟುವಟಿಕೆಗಳನ್ನು ಶಾಶ್ವತ ಕಟ್ಟಡಗಳನ್ನು ಹೊರತುಪಡಿಸಿ ಬೇರೆ ಶಾಶ್ವತ ಕಟ್ಟಡಗಳಿಗೆ ಸದರಿ ಅಧಿಸೂಚನೆಯಲ್ಲಿ ಅವಕಾಶವಿಲ್ಲವೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರ ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಸಚಿವಾಲಯವು ದಿನಾಂಕ 04-12-2012ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ 123 ಗ್ರಾಮಗಳನ್ನು ಒಳಗೊಂಡಂತೆ ಸೂಕ್ಷ್ಮ ಪರಿಸರ ವಲಯ ಎಂದು ಆದೇಶ ಹೊರಡಿಸಲಾಗಿದೆ. ಈ ಪ್ರದೇಶದಲ್ಲಿ ನಿಷೇಧಿತ, ನಿಯಂತ್ರಿತ ಹಾಗೂ ಅನುಮತಿಸಲಾದ ಈ ಕೆಳಕಂಡ ಪ್ರವಾಸೋಧ್ಯಮ ಚಟುವಟಿಕೆ ಕೈಗೊಳ್ಳುವಂತೆ ಸೂಚಿಸಿದೆ.
ಪ್ರವಾಸೋದ್ಯಮ ಮಾಸ್ಟರ್ ಪ್ಲ್ಯಾನ್‌ಗೆ ಅನುಗುಣವಾಗಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅನುಮತಿಸಲಾಗುವುದು, ಪರಿಸರ-ಪ್ರವಾಸೋದ್ಯಮ, ಪರಿಸರ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಹೊಂದಿದ, ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರವಾಸೋದ್ಯಮ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅನುಮತಿ ನೀಡಿರುವ ಚಟುವಟಿಕೆಗಳಿಗೆ ಮಾತ್ರ ಅರಣ್ಯ ಇಲಾಖೆ ಅನುಮತಿ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶ ಸಂಖ್ಯೆ: IA No 131377 2022ರ ಪ್ರಕಾರ ಜೋನಲ್ ಮಾಸ್ಟರ್ ಪ್ಲಾನ್ ತಯಾರಿಸುವ ಹಂತದಲ್ಲಿದ್ದು, ಜೋನಲ್ ಮಾಸ್ಟರ್ ಪ್ಲಾನ್ ಅನುಮೋದನೆಗೊಂಡ ನಂತರವಷ್ಟೆ ಜಿಲ್ಲಾಧಿಕಾರಿಗಳಿಂದ ಟೂರಿಸಮ್ ಮಾಸ್ಟರ್ ಪ್ಲಾನ್ ತಯಾರಿಸಿ ನಂತರ ಪ್ರಸ್ತಾವಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಳವಡಿಸಬೇಕಾಗಿರುತ್ತದೆ ಹಾಗೂ ಯಾವುದೇ ಹೊಸ ಪ್ರವಾಸೋಧ್ಯಮ ಚಟುವಟಿಕೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಮತ್ತು ಯಾವುದೇ ನಿಯಂತ್ರಿತ (Regulated) ಪ್ರವಾಸೋಧ್ಯಮ ಚಟುವಟಿಕೆಗಳಿಗೆ ಈಗಾಗಲೇ ಚಾಲ್ತಿಯಲ್ಲಿರುವ ಮೈಸೂರು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಬಂಡೀಪುರ ಸೂಕ್ಷ್ಮ ಪರಿಸರ ವಲಯದ ಮಾನಿಟರಿಂಗ್ ಸಮಿತಿ ಮುಂದೆ ಮಂಡಿಸಿ ಅನುಮತಿ ಪಡೆಯಲೇಬೇಕಾಗಿರುತ್ತದೆ. ಎಂಬುದಾಗಿ ಈಗಾಗಲೇ ತಿಳಿಸಲಾಗಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಪ್ರಭಾಕರ್ ಮಾಹಿತಿ ನೀಡಿದ್ದಾರೆ.
Key words: No permission, new homestays, Bandipur Sanctuary