ಬೆಂಗಳೂರು, ಸೆ.09, 2021 : (www.justkannada.in news): ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA) ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಡಾ.ಗಿರೀಶ್ ಅವರನ್ನು ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಜಡಿಯಪ್ಪ ಗೆದ್ಲಗಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಕೇಂದ್ರ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಗೊಂಡಿರುವ ಡಾ.ಗಿರೀಶ್ ಅವರಿಗೆ ಪತ್ರಕರ್ತ ಮಿತ್ರರು ಶುಭಕೋರಿದ್ದು, ಇದೇ ವೇಳೆ ಬಿಡಿಎಯಲ್ಲಿ ತಾವು ನಿರ್ವಹಿಸಿದ ಕೆಲಸದ ಬಗ್ಗೆ ಡಾ.ಗಿರೀಶ್ ಬರೆದ ಆಪ್ತ ಬರಹ ಹೀಗಿದೆ…
ಬಿಡಿಎ ಗೆ ವರ್ಗವಾದಾಗ ನೀನ್ಯಾಕೆ ಬಂದಪ್ಪ ಬಿಡಿಎ ಗೆ ? ಇಲ್ಲೇನಿದೆ ಕೆಲಸ ? ಎಂದು ಕೇಳಿದವರ ಸಂಖ್ಯೆ ಶೇಕಡಾ 90%. ಸ್ನೇಹಿತರ – ಪತ್ರಕರ್ತ ಮಿತ್ರರ ಅಭಿಪ್ರಾಯ ಕೇಳಿದಾಗ ಹೌದು ಕೆಲಸವಿಲ್ಲದ ಜಾಗಕ್ಕೆ ನಾನೇಕೆ ಬಂದೆ ? ಎಂಬ ಪ್ರಶ್ನೆ ನನ್ನಲ್ಲೂ ಮೂಡಿತ್ತು.
ಇರೋ ಕೆಲಸವನ್ನು ಎಲ್ಲರೂ ಮಾಡ್ತಾರೆ. ಕೆಲಸವಿಲ್ಲದ ಸ್ಥಳದಲ್ಲಿ ಕೆಲಸವನ್ನು ಕ್ರಿಯಾಶೀಲವಾಗಿ ಸೃಷ್ಟಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ನಿರ್ವಹಣೆ ಮಾಡೋದು ಕಲಿಯಬೇಕು ಎಂಬುದನ್ನು ನಾ ನಡೆದು ಬಂದ ದಾರಿಯಲ್ಲಿ ನನ್ನ ಗುರುಗಳು – ಹಿತೈಷಿಗಳು ಹೇಳಿದ್ದ ಅಂಶ ತಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿತು.
ನನ್ನ ಅದೃಷ್ಟವೋ ಏನೋ ಬಿಡಿಎ ಇತಿಹಾಸದಲ್ಲೇ ಮೊದಲ ಬಾರಿಗೆ 7000 ಸಾವಿರಕ್ಕೂ ಅಧಿಕ ಮೂಲೆ ನಿವೇಶನಗಳನ್ನು ( ಕರ್ನಾರ್ ಸೈಟ್) ಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಯಿತು.
ಕೊರೊನ ಸಮಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ನಿವೇಶನಗಳನ್ನು ಹರಾಜು ಹಾಕೋದು ಎಷ್ಟು ಸರಿ ? ನಿವೇಶನಗಳಿಗೆ ಉತ್ತಮ ಬೆಲೆ ಬರಲ್ಲ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳು, ಲಕ್ಷಾಂತರ ರೂಪಾಯಿಯಲ್ಲಿ ಬ್ರೋಕರ್ ಗಳ ಪಾಲಾಗಲಿವೆ ಎಂಬ ಟೀಕೆಗಳು ಮಾಧ್ಯಮಗಳಿಂದ – ಸಾರ್ವಜನಿಕ ವಲಯದಿಂದ ವ್ಯಕ್ತವಾದವು.
ಟೀಕೆಗಳು ಸಹಜವಾಗಿಯೇ ಇದ್ದವು, ಕಾರಣವೆಂದರೆ ಬಿಡಿಎ ವತಿಯಿಂದ ಪ್ರತಿ ತಿಂಗಳು 50 ಸೈಟ್ ಗಳನ್ನು ಹರಾಜು ಹಾಕಲಾಗುತ್ತಿತ್ತು. ಇ-ಹರಾಜಿನಲ್ಲಿ ಭಾಗವಹಿಸುತ್ತಿದ್ದವರ ಸಂಖ್ಯೆ 100 ದಾಟುತ್ತಿರಲಿಲ್ಲ, ಜೊತೆಗೆ ಮಾರಾಟವಾಗುತ್ತಿದ್ದ ನಿವೇಶನಗಳ ಸಂಖ್ಯೆ ಸರಾಸರಿ 17 ರಿಂದ 22 ನಿವೇಶನಗಳು ಮಾತ್ರ.
ಇಂತಹ ಸನ್ನಿವೇಶದಲ್ಲಿ, ಅದರಲ್ಲೂ ಕೊರೊನಾ ಸಮಯದಲ್ಲಿ ಜನರ ಆದಾಯ ಖೋತಾ ಅಗಿರುವ ಸಂದಿಗ್ಧ ಸ್ಥಿತಿಯಲ್ಲಿ 7000 ಕ್ಕೂ ಅಧಿಕ ಸೈಟ್ ಗಳನ್ನು ಹಾಕುತ್ತಿರುವುದು ಎಷ್ಟು ಸರಿ ? ಎಂಬ ಪ್ರಶ್ನೆಗಳು ಎದುರಾಗಿದ್ದು ಸಹಜವೇ.
ಇಂತಹ ಸಮಯದಲ್ಲಿ ಇ-ಹರಾಜಿನ ಸಂಪೂರ್ಣ ಉಸ್ತುವಾರಿಯನ್ನು ಅಂದಿನ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ಸರ್ ಅವರು PRO ವಿಭಾಗದ ಜೊತೆಗೆ ಹೆಚ್ಚುವರಿಯಾಗಿ ಪ್ರಾಧಿಕಾರದ EDP ವಿಭಾಗವನ್ನು ( Electronic Data Processing) ನನ್ನ ಹೆಗಲಿಗೆ ಹಾಕಿ, ಇ-ಹರಾಜಿನ ಸಂಪೂರ್ಣ ಜವಾಬ್ದಾರಿ ನಿನ್ನದೆ. ನೀನು ಯಶಸ್ವಿಗೊಳಿಸುತ್ತಿಯಾ ಎಂಬ ಭರವಸೆ ನನಗಿದೆ ಎಂದು ಪ್ರೋತ್ಸಾಹ ನೀಡಿದರು.
ಇ-ಹರಾಜು ಪ್ರಾರಂಭವಾಗುವ ಮೊದಲೇ ಡಾ.ಜಿ.ಸಿ.ಪ್ರಕಾಶ್ ಸರ್ ಅವರ ವರ್ಗಾವಣೆಯಾಗಿ ಆಯುಕ್ತರಾಗಿ ಡಾ.ಮಹಾದೇವ್ ಬಂದರು, ಅವರು ಸಹ ಸಂಪೂರ್ಣ ಬೆಂಬಲ ನೀಡಿ, ಇ-ಹರಾಜಿನ ಯಶಸ್ಸು ಅಥವಾ ವಿಫಲತೆ ನಿನ್ನದೆ ಎಂದು ಕೆಲಸಕ್ಕೆ ಉತ್ತೇಜನ ನೀಡಿದರು.
ಬಿಡಿಎ ನಿವೇಶನಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅದರೆ ಇ-ಹರಾಜಿನಲ್ಲಿ ನಿವೇಶನಗಳಿಗೆ ಬೆಲೆನೂ ಬರ್ತಿಲ್ಲ, ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವು ಸಹ ಅಗ್ತಿಲ್ಲ ಇದ್ಯಾಕಪ್ಪ ಎಂದು ಕಾರಣ ಹುಡುಕಿದಾಗ ಅನೇಕ ಕಾರಣಗಳು ಸಿಕ್ಕವು.
ಮೊದಲ ಕಾರಣ :
ಇ-ಹರಾಜಿಗೆ ಪ್ರಚಾರದ ಕೊರತೆ ಎದ್ದು ಕಾಣುತ್ತಿತ್ತು. ಈ ಮೊದಲು ಯಾವುದಾದರೂ ಒಂದು ಕನ್ನಡ & ಇಂಗ್ಲಿಷ್ ದಿನಪತ್ರಿಕೆಯಲ್ಲಿ ಒಂದು ದಿನ ಮಾತ್ರ ನೋಟಿಫಿಕೇಶನ್ ಜಾಹೀರಾತು ಕೊಡಲಾಗುತ್ತಿತ್ತು. ಇದನ್ನು ಹೊರತುಪಡಿಸಿದರೆ ಇ-ಹರಾಜು ಪ್ರಗತಿಯಲ್ಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಲಭಿಸುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಹೊಸ ಆಯಾಮ ನೀಡಬೇಕೆಂದು ನಿರ್ಧರಿಸಲಾಯಿತು. ಬಿಡಿಎ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ ದಿನಪತ್ರಿಕೆಗಳಿಗೂ ಕಾರ್ಪೋರೆಟ್ ಶೈಲಿಯ ಜಾಹೀರಾತು, ದೃಶ್ಯ ಮಾದ್ಯಮ – ರೇಡಿಯೋ & ಡಿಜಿಟಲ್ & ಸೋಷಿಯಲ್ ಮಿಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು.
ಸ್ನೇಹಿತರೊಂದಿಗೆ ಚರ್ಚಿಸಿ ,
ಪ್ರತಿ ಇ-ಹರಾಜಿನಲ್ಲೂ ಸಾರ್ವಜನಿಕರ ಗಮನ ಸೆಳೆಯುವಂತೆ ಹೊಸ – ಹೊಸ ಪರಿಕಲ್ಪನೆಯನ್ನು ಸ್ವತಃ ನೀಡಿ, ಸಾರ್ವಜನಿಕರ ಗಮನ ಸೆಳೆಯುವಂತೆ ಜಾಹೀರಾತುಗಳನ್ನು ನಿರ್ಮಿಸಲಾಯಿತು.
GPS ತಂತ್ರಜ್ಞಾನ ಅಳವಡಿಕೆ :
ಇ-ಹರಾಜು ಗೆ ಹಾಕಲಾದ ಸೈಟ್ ಗಳ ಸ್ಥಳವನ್ನು ನಾಗರಿಕರಿಗೆ ಅಯಾ-ಅಯಾ ವಿಭಾಗದ ಇಂಜಿನಿಯರ್ ಗಳು ತೋರಿಸಬೇಕಾಗಿತ್ತು. ಆದರೆ ಎಲ್ಲಾ ಸೈಟ್ ಗಳ ಲೋಕೆಶನ್ ಗಳನ್ನು ಇಂಜಿನಿಯರ್ ಗಳು ತೋರಿಸುವುದು ಕಷ್ಟಕರವಾಗಿತ್ತು. ಇದರಿಂದ ನಿವೇಶನ ಕೊಳ್ಳುವ ಆಸಕ್ತಿ ಇರುವ ಸಾರ್ವಜನಿಕರು, ನಿವೇಶನ ನೋಡಲಾಗದೆ, ಇ-ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು EIT Technology ಸಂಸ್ಥೆಯ ಸಹಯೋಗದಲ್ಲಿ ಹರಾಜು ಗೆ ಹಾಕಲ್ಪಟ್ಟ ಎಲ್ಲಾ ಸೈಟ್ ಗಳಿಗೂ GPS ಅಳವಡಿಸಲಾಯಿತು.
GPS ತಂತ್ರಜ್ಞಾನದ ಅಳವಡಿಕೆ ಇ-ಹರಾಜಿನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತು. ನಿವೇಶನ ಕೊಳ್ಳಲು ಆಸಕ್ತಿ ಇರುವ ಸಾರ್ವಜನಿಕರು ಇ-ಹರಾಜಿಗೆ ಹಾಕಿರುವ ನಿವೇಶನದ ಭೌಗೋಳಿಕ ಪ್ರದೇಶವನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ನೋಡುವಂತಾಯಿತು. ಇದರಿಂದಾಗಿ ಅನಿವಾಸಿ ಭಾರತೀಯರು ಇ-ಹರಾಜಿನಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು.
ಡೆಮೋ ವಿಡಿಯೋ :
ಸಾರ್ವಜನಿಕರಿಗೆ ಇ-ಹರಾಜಿನಲ್ಲಿ ನಿವೇಶನ ಖರೀದಿಸಬೇಕು ಎಂಬ ಇಚ್ಛೆ ಇರುತ್ತದೆ, ಆದರೆ ಬಹುತೇಕ ಜನರಿಗೆ ಇ-ಹರಾಜಿನ ಪ್ರಕ್ರಿಯೆಯಲ್ಲಿ ಯಾವ ರೀತಿ ಭಾಗವಹಿಸಬೇಕು ? EMD ಹಣವನ್ನು ಹೇಗೆ ಪಾವತಿಸ ಬೇಕು ? ನೋಂದಣಿ ಮಾಡಿಕೊಳ್ಳುವುದು ಹೇಗೆ ? ಬಿಡ್ಡಿಂಗ್ ಮಾಡುವುದು ಹೇಗೆ ? ಎಂಬ ಮಾಹಿತಿಯೇ ಲಭಿಸುತ್ತಿಲ್ಲ ಎಂಬ ಅಂಶ ಗಮನಕ್ಕೆ ಬಂದಿತು.
ತಕ್ಷಣವೇ ಇ-ಹರಾಜಿನ ಬಿಡ್ಡಿಂಗ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿವುಳ್ಳ ಕನ್ನಡ & ಇಂಗ್ಲಿಷ್ ಭಾಷೆಯ “ಡೆಮೋ” ವೀಡಿಯೋವನ್ನು ನಿರ್ಮಾಣ ಮಾಡಿ, ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಅಳವಡಿಸಲಾಯಿತು. ಇ ಹರಾಜಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪ್ರತಿದಿನ ವೆಬ್ಸೈಟ್ ಗೆ ಅಳವಡಿಸಲಾಯಿತು. ಇದರಿಂದ ಸಾಮಾನ್ಯ ಜನರಲ್ಲೂ ಸಹ ಇ-ಹರಾಜಿನಲ್ಲಿ ಭಾಗವಹಿಸಿ ಬಿಡಿಎ ನಿವೇಶನವನ್ನು ಖರೀದಿಸಬಹುದು ಎಂಬ ವಿಶ್ವಾಸ ಮೂಡಿತು.
ಪ್ರಸ್ತುತ 7ನೇ ಹಂತದ ಈ ಹರಾಜು ಮುಕ್ತಾಯವಾಗಿದ್ದು, ಸರಿಸುಮಾರು 2200 ನಿವೇಶನಗಳು ಮಾರಾಟವಾಗಿವೆ, ಆದರೆ 4 ಲಕ್ಷ ಪಾವತಿಸಿ ನೋಂದಣಿ ಮಾಡಿ ಇ-ಹರಾಜಿನಲ್ಲಿ ಭಾಗವಹಿಸಿದವರ ಸಂಖ್ಯೆ 11 ಸಾವಿರಕ್ಕೂ ಅಧಿಕ, ಉದಾಹರಣೆಗೆ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೊದಲ ಇ-ಹರಾಜಿನಲ್ಲಿ ಪ್ರತಿ ಚದರಡಿ 3.500 ಸಾವಿರದಿಂದ ನಾಲ್ಕು ಸಾವಿರಕ್ಕೆ ಮಾರಾಟವಾದರೆ, 7 ನೇ ಹಂತದ ಇ-ಹರಾಜಿನಲ್ಲಿ ಚದರಡಿ 6.500 ಸಾವಿರದಿಂದ 8 ಸಾವಿರಕ್ಕೆ ಬಿಡ್ಡಿಂಗ್ ಅಗಿದೆ. ಇದೇ ಬಡಾವಣೆಯ ನಿವೇಶನವೊಂದು ಪ್ರತಿಚದರಡಿಗೆ 18 ಸಾವಿರಕ್ಕೆ ಬಿಡ್ಡಿಂಗ್ ಅಗಿದೆ.
ಇ-ಹರಾಜಿನ ಜೊತೆ ಅಪಾರ್ಟ್ಮೆಂಟ್ ಗಳನ್ನು Online ಗೆ ಅಳವಡಿಸಿ, ಪ್ರಚಾರ ಮಾಡಿದಾಗ ಒಂದೇ ವಾರದಲ್ಲಿ 100 Apartment ಗಳು ಮಾರಾಟವಾಗಿವೆ. ಆಡಳಿತವಾದಿಯಲ್ಲಿ ಮಾಡಿದ ಇಂತಹ ಹಲವು ಕೆಲಸಗಳು ಖುಷಿ ನೀಡಿವೆ.
ಈ ಕೆಲಸಗಳು ನನ್ನ ಒಬ್ಬನಿಂದ ಸಾಧ್ಯವಾಗಿದಲ್ಲ, ಮಾನ್ಯ ಆಯುಕ್ತರುಗಳಾದ ಜಿ.ಸಿ.ಪ್ರಕಾಶ್, ಡಾ.ಮಹಾದೇವ್, ರಾಜೇಶ್, ಮಾನ್ಯ ಅಧ್ಯಕ್ಷರಾದ ವಿಶ್ವನಾಥ್, ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಗಳು, ಇಡಿಪಿ & ಸಾರ್ವಜನಿಕ ಸಂಪರ್ಕ ವಿಭಾಗದ ಸಿಬ್ಬಂದಿಗಳು, ಮುಖ್ಯವಾಗಿ ಮಾಧ್ಯಮದ ಎಲ್ಲಾ ಮಿತ್ರರ ಸಹಕಾರ- ಸಲಹೆ & ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಸರ್ಕಾರ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ.
ಹೊಸದಾಗಿ ಬಿಡಿಎ ಪಿಆರ್ ಓ ಹುದ್ದೆ ವಹಿಸಿಕೊಂಡಿರುವ ನನ್ನ ಸಹದ್ಯೋಗಿ ಜಡಿಯಪ್ಪ ಗೆದ್ಲಗಟ್ಟಿ ಅವರಿಗೂ ನಿಮ್ಮ ಸಹಕಾರ ಇರಲಿ.
ನನಗೀಗ ಹೊಸದೊಂದು ಜವಾಬ್ದಾರಿ ನಿರ್ವಹಿಸುವ ಅವಕಾಶ ಒದಗಿ ಬಂದಿದೆ. ಜವಳಿ ಮತ್ತು ಸಕ್ಕರೆ ಸಚಿವರಾದ ಮಾನ್ಯ ಶಂಕರ ಪಾಟೀಲ ಮುನೇನಕೊಪ್ಪ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಆರಂಭಿಸಿದ್ದೇನೆ. ಈ ಜವಾಬ್ದಾರಿ ನಿಭಾಯಿಸಲೂ ನಿಮ್ಮ ಎಂದಿನ ಸಹಕಾರ ಸಿಗುತ್ತದೆ ಎಂಬ ನಂಬಿಕೆ ನನ್ನದು. ನನ್ನ ಒಂದುವರೆ ವರ್ಷದ ಬಿಡಿಎ ಪ್ರಯಾಣದಲ್ಲಿ ತಮ್ಮೆಲ್ಲಾರ ಸಹಕಾರದಿಂದ ಸಾಕಷ್ಟು ಆಡಳಿತದ ಅನುಭವ ಲಭಿಸಿದೆ. ಪ್ರತಿಯೊಬ್ಬರಿಗೂ ನಾನು ಈ ಸಮಯದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ
– ಡಾ.ಗಿರೀಶ್ ಎಲ್.ಪಿ
key words : bangalore-BDA-PRO-MYSORE