ಬೆಂಗಳೂರು, ಆಗಸ್ಟ್ 20, 2022 (www.justkannada.in): 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬೆಂಗಳೂರು ನಗರದ ಎಲ್ಲಾ ನಾಗರಿಕರಿಗೂ ಬಿಎಂಟಿಸಿ ಬಸ್ಸುಗಳಲ್ಲಿ ಒಂದು ದಿನದ ಮಟ್ಟಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿತು. ಇದಕ್ಕೆ ದೊರೆತಂತಹ ಪ್ರತಿಕ್ರಿಯೆ ಅದ್ವಿತೀಯವಾಗಿತ್ತು – ಪ್ರತಿ ದಿನ ಸರಾಸರಿ ೨.೮ ದಶಲಕ್ಷದಷ್ಟಿರುವಂತಹ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಅಂದು ೬.೧೫ ದಶಲಕ್ಷ ತಲುಪಿತು. ಸಾರ್ವಜನಿಕ ಸಾರಿಗೆ ಲಭ್ಯವಾದರೆ, ಕೈಗೆಟಕುವಂತಿದ್ದರೆ ಹಾಗೂ ಅನುಕೂಲಕರವಾಗಿದ್ದರೆ ಜನರು ಅದರ ಸೇವೆಗಳನ್ನು ಪಡೆಯಲು ಕಾತುರರಾಗಿರುವುದು ಇದರಿಂದ ತಿಳಿದು ಬಂದಿದೆ.
ಸರ್ಕಾರ ಆ ದಿನದಂದು ನಗರ ಸಂಚಾರ ವಲಯದಲ್ಲಿ ಗೋಚರಿಸಿದಂತಹ ಬೃಹತ್ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ, ಜನರನ್ನು ಸಾರ್ವಜನಿಕ ಸಾರಿಗೆಯ ಕಡೆಗೆ ಆಕರ್ಷಿಸಲು ಎಲ್ಲಾ ಕ್ರಮಗಳನ್ನೂ ಕೈಗೊಂಡು ಆ ಮೂಲಕ ಜನರ ಹಾಗೂ ರಾಷ್ಟ್ರದ ಇಂಧನ ವೆಚ್ಚಗಳಿಗೆ ಕಡಿವಾಣ ಹಾಕುವುದರ ಜೊತೆಗೆ, ನಗರದ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಿ, ಪರಿಸರ ಸಂರಕ್ಷಣೆಯ ಕಡೆಗೂ ಗಮನ ನೀಡುವಂತಾಗಬೇಕು. ಹಿಂದೆ ಬಿಟಿಎಸ್ ಆಗಿದ್ದಂತಹ ಸಾರ್ವಜನಿಕ ಬಸ್ ಸೇವೆ ಸಮಾಜಮುಖಿಯ ರೀತಿಯಲ್ಲಿ ಕಾರ್ಯನಿರ್ವಹಿಸುತಿತ್ತು. ಆದರೆ ಪ್ರಸ್ತುತ ಬಿಎಂಟಿಸಿ ಕಾರ್ಪೊರೇಟ್ ಸಂಸ್ಥೆಯ ರೀತಿಯಂತಾಗಿದೆ. ಈ ಪರಿವರ್ತನೆಯ ಅವಧಿಯಲ್ಲಿ, ೨೦೦೦ರ ದಶಕದ ಆರಂಭದಲ್ಲಿ ಬಸ್ ಸೇವೆಗಳನ್ನು ಒಂದು ಸಾರ್ವಜನಿಕ ಉಪಯೋಗಕ್ಕಾಗಿ ಒದಗಿಸುವ ಸೇವೆಯ ಉದ್ದೇಶ, ಸಾರಿಗೆ ನಿಗಮಗಳಿಗೆ ಲಾಭಗಳಿಸುವ ಉದ್ದೇಶವಾಗಿ ಬದಲಾಯಿತು. ಆದರೆ ಅದು ಯಶಸ್ವಿಯೂ ಆಗಲಿಲ್ಲ ಎನ್ನುವುದು ಬೇರೆ ವಿಷಯ. ಆದರೆ ಕಳೆದ ಒಂದು ದಶಕದಲ್ಲಿ ನಗರ ಸಾರಿಗೆಯೆಡೆಗಿನ ಮನೋಭಾವವೂ ಸಹ ಬದಲಾಗಿದೆ.
ಬಿಎಂಟಿಸಿಯನ್ನು ಸಮರ್ಥವಾಗಿ ನಡೆಸುವುದು ಮುಖ್ಯ. ಆದರೆ ಬಿಎಂಟಿಸಿಯ ಸೇವೆಗಳನ್ನು ಹೆಚ್ಚಿನ ಜನರಿಗೆ ತಲುಪುವುದು ಹಾಗೂ ಆ ನಿಟ್ಟಿನಲ್ಲಿ ಹಿತಾಸಕ್ತಿಯನ್ನು ಹೊಂದಿ ಅದರಂತೆ ನಡೆಸಿಕೊಂಡು ಹೋಗುವುದು ಮುಖ್ಯ ಉದ್ದೇಶವಾಗಿರಬೇಕು. ಆದರೆ ಎಲ್ಲಾ ಸರ್ಕಾರಗಳೂ ಸಹ ಬೆಂಗಳೂರು ಮಹಾನಗರದ ಅಭಿವೃದ್ಧಿ ಯೋಜನೆಯಡಿ ಕೇವಲ ಶ್ರೀಮಂತರು ಹಾಗೂ ಉನ್ನತ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿಯೇ ಆಲೋಚಿಸಿ, ಆ ವರ್ಗಗಳ ಜನರಿಗೆ ಅನುಕೂಲ ಮಾಡುವಂತೆಯೇ ವರ್ತಿಸಿವೆ. ರಸ್ತೆಗಳ ಅಗಲೀಕರಣ, ಮೇಲ್ಸೇತುವೆಗಳು ಹಾಗೂ ಅಂಡರ್ ಪಾಸ್‌ಗಳ ನಿರ್ಮಾಣಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದೇ ಇದಕ್ಕೆ ಸಾಕ್ಷಿ. ಇದರಿಂದಾಗಿ ಕೇವಲ ಕಾರು ಬಳಸುವವರ ಸಂಖ್ಯೆ ಹೆಚ್ಚಾಗಿದೆಯೇ ಹೊರತು, ನಗರದ ವಾಹನ ದಟ್ಟಣೆಯ ಸಮಸ್ಯೆ ಯಾವುದೇ ರೀತಿಯಲ್ಲಿಯೂ ಕಡಿಮೆಯಾಗಲಿಲ್ಲ.
೨೦೨೦ರಲ್ಲಿ ಲಕ್ಸೆಂಬೊರ್ಗ್, ಬಸ್ಸುಗಳು, ರೈಲುಗಳು ಹಾಗೂ ಟ್ರ್ಯಾಮ್ ಗಳು ಒಳಗೊಂಡಂತೆ ಇಡೀ ಸಾರ್ವಜನಿಕ ಸಾರಿಗೆಯನ್ನು ಎಲ್ಲರಿಗೂ ಉಚಿತಗೊಳಿಸಿದ ವಿಶ್ವದ ಮೊದಲ ನಗರವಾಯಿತು. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಿಂದಾಗಿ ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾಗುವುದರ ಜೊತೆಗೆ ಇಂಧನ ಕೊರತೆ ಎದುರಾಯಿತು. ಆ ಹಿನ್ನೆಲೆಯಲ್ಲಿ ಜರ್ಮನಿ ಜೂನ್ ತಿಂಗಳಲ್ಲಿ ಅಲ್ಲಿನ ನಾಗರಿಕರ ಅನುಕೂಲಕ್ಕಾಗಿ ಬಹಳ ಅಗ್ಗವಾದ (೯ ಯೂರೊಗಳು) ಮಾಸಿಕ ಪಾಸ್ ವ್ಯವಸ್ಥೆ ಪರಿಚಯಿಸಿತು. ಜನರು ಈ ಪಾಸ್ ಬಳಸಿಕೊಂಡು ಯಾವುದೇ ರೀತಿಯ ಸಾರ್ವಜನಿಕ ಸಾರಿಗೆಯಲ್ಲಾದರೂ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿತು. ಅಂದಿನಿಂದ ಜರ್ಮನಿಗರು ಬಹಳ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸಲು ಆರಂಭಿಸಿದ್ದಾರೆ. ಕೆಲವು ರಾಷ್ಟ್ರಗಳಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ ಉಚಿತ ಅಥವಾ ಅಗ್ಗದ ಸಾರ್ವಜನಿಕ ಸಾರಿಗೆಯ ಲಾಭವನ್ನು ಬಳಸಿಕೊಳ್ಳುತ್ತಿರುವವರ ಪೈಕಿ ಬಹುಪಾಲು ಜನರು ಪಾದಚಾರಿಗಳು ಹಾಗೂ ಸೈಕಲ್ ಬಳಸುವವರಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಆಗಿರುವಂತೆ, ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡವರ ಪೈಕಿ ಕಾರುಬಳಕೆದಾರರ ಸಂಖ್ಯೆ ಬಹಳ ಕಡಿಮೆ. ಅದೂ ಸಹ ಖರ್ಚುಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದಾಗಿ.
ಆದ್ದರಿಂದ, ಬೆಂಗಳೂರಿಗೆ ಅಗತ್ಯವಿರುವುದೇನೆಂದರೆ, ಬಸ್ಸುಗಳು, ಮೆಟ್ರೊ ರೈಲು, ಆಟೊಗಳು ಹಾಗೂ ಟ್ಯಾಕ್ಸಿಗಳು ಒಳಗೊಂಡಿರುವಂತಹ ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಇದರ ಜೊತೆಗೆ ಈಗ ಆರಂಭವಾಗುತ್ತಿರುವ ಉಪ ನಗರ ರೈಲು ಸೇವೆಗಳು. ಇದರಿಂದ ಈ ಮೆಟ್ರೊ ನಗರದಾದ್ಯಂತ ಎಲ್ಲಿಂದ ಎಲ್ಲಿಗೆ ಬೇಕಾದರೂ ತಡೆರಹಿತವಾಗಿ ಓಡಾಡುವುದು ಸುಲಭವಾಗುತ್ತದೆ, ಜೊತೆಗೆ ಆರಂಭದಿಂದ ಕೊನೆಯವರೆಗೂ ಸಂಚರಿಸುವ ವಿಧಾನ ಸುಲಭವಾಗಿ ಲಭ್ಯವಾಗುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಜನರು ತಮ್ಮ ಕಾರುಗಳನ್ನು ಬಳಸುವುದು ಕಡಿಮೆಗೊಳಿಸುತ್ತದೆ. ಒಮ್ಮೆ ಇಂತಹ ಸಾರಿಗೆ ವ್ಯವಸ್ಥೆ ಪರಿಚಯಗೊಂಡರೆ, ಕ್ರಮೇಣ ದಟ್ಟಣೆ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ವಿಧಿಸುವ ಮೂಲಕ ನಿಧಾನವಾಗಿ ಕಾರುಗಳ ಬಳಕೆಗೆ ಕಡಿವಾಣ ಹಾಕುವ ಪ್ರಯತ್ನ ಕೈಗೊಳ್ಳಬಹುದು. ಇದು ಬಿಎಂಟಿಸಿಯ ಗುರಿಯಾಗಬೇಕು ಮತ್ತು ಇಡೀ ನಗರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಸಮಗ್ರ, ದೀರ್ಘ ಕಾಲ ಬಾಳಿಕೆ ಬರುವ ನಗರ ಸಂಚಾರ ನೀತಿ ರಚನೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗುತ್ತದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Bangalore-BMTC-BUS- Public -transport – best option.