ಬೆಂಗಳೂರು:ಜೂ-22:(www.justkannada.in) ಪೈಲಟ್ ಉದ್ಯೋಗ ಕೊಡಿಸುವುದಾಗಿ ಹೇಳಿ 12 ಮಂದಿಯಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಮೂವರನ್ನು ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಶಿಖಾ ಡೆವಲಪರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಇಬ್ರಾಹಿಂ, ಚೇರ್ಮನ್ಗಳಾದ ಅಜೀಂ ಬೇಗಂ ಹಾಗೂ ಜುಫೀಕರ್ ಅಹಮದ್ ಬಂಧಿತರು.
2015 ರಲ್ಲಿ ಸೇಂಟ್ವಾರ್ಕ್ಸ್ ರಸ್ತೆಯಲ್ಲಿ ಶಿಖಾ ಡೆವಲಪರ್ಸ್ ಹೆಸರಿನ ಕಂಪನಿಯನ್ನು ಆರೋಪಿ ರಾಜೇಶ್ ಆರಂಭಿಸಿದ್ದ. ಕೆಲ ಪ್ರಸಿದ್ಧ ಕಂಪನಿಗಳ ಜತೆ ಶಿಖಾ ಡೆವಲಪರ್ಸ್ ಒಡಂಬಡಿಕೆ ಮಾಡಿಕೊಂಡಿದೆ. ನಮ್ಮ ಸಂಸ್ಥೆಯಲ್ಲಿ ಪೈಲಟ್ ತರಬೇತಿ ನೀಡಿ ಪ್ರತಿಷ್ಠಿತ ಕಂಪನಿಯಲ್ಲಿ ಪೈಲಟ್ ಉದ್ಯೋಗ ಕೊಡಿಸಲಾಗುತ್ತದೆ ಎಂದು ಜಾಹೀರಾತು ಹಾಕಿದ್ದ. ಈ ಜಾಹೀರಾತು ನೋಡಿ ಕೆಲ ಉದ್ಯೋಗಾಂಕ್ಷಿಗಳು ರಾಜೇಶ್ ನನ್ನು ಸಂಪರ್ಕಿಸಿದ್ದರು.
ಹೀಗೆ ಬಂದ ಉದ್ಯೋಗಾಕಾಂಕ್ಷಿಗಳಿಂದ ರಾಜೇಶ್ 30 ರಿಂದ 37 ಲಕ್ಷ ರೂ.ವರೆಗೆ ತನ್ನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದ. ಆದರೆ, ಕೆಲ ತಿಂಗಳು ಕಳೆದರೂ ತರಬೇತಿಯನ್ನೂ ನೀಡದೆ, ಹಣವನ್ನೂ ಹಿಂದಿರುಗಿಸದೆ ವಂಚಿಸುತ್ತಿದ್ದ. ಈತನಿಂದ ವಂಚನೆಗೊಳಗಾದ 12 ಮಂದಿ, ರಾಜೇಶ್ ಹಾಗೂ ಆತನಿಗೆ ಸಹಕರಿಸುತ್ತಿದ್ದ ಅಜೀಂ ಬೇಗಂ, ಜುಫೀಕರ್ ವಿರುದ್ಧ ಕಬ್ಬನ್ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಮುಖವಾಗಿ ತಮಿಳುನಾಡು ಕಾಂಚಿವರಮ್ ಮೂಲದ ಸುಕೇಶ್ ರೋಜರ್ ಎಂಬಾತ ಜೂ.18ರಂದು ನೀಡಿದ ದೂರಿನ ಆಧಾರದ ಮೇರೆಗೆ ಕಬ್ಬನ್ಪಾರ್ಕ್ ಪೊಲೀಸರು ರಾಜೇಶ್ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಸುಕೇಶ್ 2017 ಜ. 28 ರಿಂದ 2017 ಜ.29ರ ವರೆಗೆ ಆರೋಪಿಗಳ ಖಾತೆಗೆ ಒಟ್ಟು 39 ಲಕ್ಷ ರೂ. ಜಮೆ ಮಾಡಿದ್ದ. ಆದರೆ, ಹಣ ಜಮೆ ಮಾಡಿ ವರ್ಷ ಕಳೆದರೂ ತರಬೇತಿ ನೀಡದಿದ್ದಾಗ ಸುಕೇಶ್ಗೆ ಆರೋಪಿಗಳಿಂದ ತಾನು ಮೋಸ ಹೋಗಿದ್ದಾಗಿ ತಿಳಿದಿದ್ದ.