ಚಿರತೆಯನ್ನು ಮನೆಯಲ್ಲಿ ಕೂಡಿ ಹಾಕಿದ ಭೂಪ..!

 

ರಾಮನಗರ, ಅಕ್ಟೋಬರ್ ೨೫, ೨೦೨೧ (www.justkannada.in): ನಿಮಗೆ ಯಾವುದಾದರೂ ಗಂಭೀರವಾದ ಗಂಡಾಂತರವೊಂದು ಎದುರಾದಾಗ ಧೃತಿಗೆಡದೆ ಆ ಗಂಡಾಂತರವನ್ನು ಎದುರಿಸಿದರೆ ಹೇಗೆ ಪಾರಾಗಬಹುದು ಎನ್ನವುದಕ್ಕೆ ರಾಮನಗರದ ಜಾಲಮಂಗಲದಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಮಾದರಿಯಾಗಿದೆ.

ಹೇಗೆ ಎಂದಿರಾ? ಇತ್ತೀಚೆಗೆ ಅವರ ಮನೆಗೆ ಆಹ್ವಾನಿವಲ್ಲದ ಒಂದು ಪ್ರಾಣಿ ಪ್ರವೇಶಿಸಿತು. ಯಾವ ಪ್ರಾಣಿ ಎಂದಿರಾ? ಚಿರತೆ! ಹೌದು. ಇತ್ತೀಚೆಗೆ ಬೇಟೆಯನ್ನು ಹುಡುಕಿಕೊಂಡು ಓಡಾಡುತ್ತಿದ್ದ ಚಿರತೆಯೊಂದು ಜಾಲಮಂಗಲದ ಮನೆಯೊಳಗೆ ನುಸುಳಿತು. ಆದರೆ ಅದರಿಂದ ಧೃತಿಗಡೆದೆ ಸಮಯಪ್ರಜ್ಞೆಯನ್ನು ಪ್ರದರ್ಶಿಸುವ ಮೂಲಕ, ಕುಟುಂಬದ ಸದಸ್ಯರ ಬುದ್ಧಿವಂತಿಕೆಯಿಂದಾಗಿ ಚಿರತೆಯನ್ನು ಸೆರೆ ಹಿಡಿಯಲಾಯಿತು.

ಈ ಘಟನೆ ರಾಮನಗರ ಜಿಲ್ಲೆ, ರಾಮನಗರದ ಜಾಲಮಂಗಲದಲ್ಲಿ ವಾಸಿಸುತ್ತಿರುವ ನಾಗರಾಜ್ ರೇವಣ್ಣ ಎಂಬುವವರ ಮನೆಯಲ್ಲಿ ನಡೆದಿದೆ. ಶನಿವಾರ, ಕುಟುಂಬದ ಸದಸ್ಯರು ಮೀನಿನ ಸಾರಿನೊಂದಿಗೆ ಭರ್ಜರಿ ಊಟವನ್ನು ಮುಗಿಸಿ ಮಲಗಲು ಸಿದ್ಧವಾಗುತ್ತಿದ್ದರು. ಉಳಿದ ಸ್ವಲ್ಪ ಮೀನಿನ ಸಾರನ್ನು ಹೊರಗೆ ಚೆಲ್ಲಿದ್ದರು.

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ರಾತ್ರಿ ಸುಮಾರು ೧೧.೩೦ರ ಸಮಯದಲ್ಲಿ ಆ ಪ್ರದೇಶದಲ್ಲಿ ಒಂದು ಹೆಣ್ಣು ಚಿರತೆ ಬೇಟೆಯನ್ನು ಹುಡುಕಿಕೊಂಡ ಓಡಾಡುತ್ತಿತ್ತು. ಮೇಲೆ ತಿಳಿಸಿದಂತಹ ಮನೆಗೆ ಕಾಂಪೌಂಡ್ ಇಲ್ಲದ ಕಾರಣ ಆ ಚಿರತೆ ಸುಲಭವಾಗಿ ಮನೆಯ ಮೊದಲ ಮಹಡಿಗೆ ಎಗರಿ ಮನೆಯನ್ನು ಹೊಕ್ಕಿದೆ. ಅಲ್ಲಿಯೇ ಇದ್ದಂತಹ ಕುಟುಂಬದ ಸದಸ್ಯರೊಬ್ಬರು ಆ ಚಿರತೆಯನ್ನು ನೋಡಿ ಗಾಬರಿಯಾದರೂ, ಅತ್ಯಂತ ಸಮಯಪ್ರಜ್ಞೆಯನ್ನು ಮೆರೆದು ಧೃತಿಗೆಡದೆ ಆ ಚಿರತೆ ಮನೆಯ ರೂಮಿನೊಳಗೆ ಹೋಗುವವರೆಗೆ ಉಸಿರು ಬಿಗಿಹಿಡಿದು ಮರೆಯಾಗಿ ನಿಂತು ನೋಡುತ್ತಿದ್ದರು. ಚಿರತೆ ರೂಮನ್ನು ಹೊಕ್ಕಿದ ಕೂಡಲೇ ಹೊರಗಿನಿಂದ ಬಾಗಿಲನ್ನು ಹಾಕಿ ಮನೆಯ ಇತರರಿಗೆ ಸುದ್ದಿ ತಿಳಿಸಿದ್ದಾರೆ.
ಕೂಡಲೇ ಕುಟುಂಬದ ಸದಸ್ಯರು ದೂರವಾಣಿ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಆದರೆ ಅದಾಗಲೇ ಮಧ್ಯರಾತ್ರಿಯಾಗಿದ್ದ ಕಾರಣ ಕೂಡಲೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವುದು ಸಾಧ್ಯವಾಗಿಲ್ಲ.

ಇದರಿಂದಾಗಿ ಆ ಕುಟುಂಬದ ಸದಸ್ಯರು ಹಾಗೂ ಸುತ್ತಮುತ್ತಲಿನ ಜನರು (ಈ ಮನೆ ಬಡಾವಣೆಯ ಮಧ್ಯ ಭಾಗದಲ್ಲಿ ಸುತ್ತಮುತ್ತಲೂ ಇನ್ನೂ ಅನೇಕ ಮನೆಗಳು ಹಾಗೂ ನೂರಾರು ಜನರು ವಾಸವಿರುವ ಸ್ಥಳದಲ್ಲಿದೆ) ಇಡೀ ರಾತ್ರಿ ಭಯದಿಂದ ಹೊರಗೆ ಕಾಯುತ್ತಾ ಕೂರಬೇಕಾಯಿತು.
ಭಾನುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪೊಲೀಸರೊಂದಿಗೆ ಅಲ್ಲಿಗೆ ಆಗಮಿಸಿದರು. ರೂಮಿನೊಗಳಗೆ ಚಿರತೆ ಇರುವುದು ಕಂಡು ಬಂತು. ಚಿರತೆಗೆ ಯಾವುದೇ ಹಾನಿಯಾಗದಿರುವಂತೆ ಅದನ್ನು ರಕ್ಷಿಸುವುದು ಹೇಗೆ ಎನ್ನುವುದು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸವಾಲಾಗಿತ್ತು. ಚಿರತೆಯ ಜೊತೆಗೆ ಅದನ್ನು ಸೆರೆ ಹಿಡಿಯಲು ಬಂದ ಸಿಬ್ಬಂದಿಗಳ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ರಕ್ಷಣಾ ತಂಡ, ಬೆಂಗಳೂರಿನ ಬನ್ನೇರುಘಟದಿಂದ ತಜ್ಞರನ್ನು ಬರುವಂತೆ ಕೋರಿದರು.

ತಜ್ಞರ ತಂಡ, ಚಿರತೆಗೆ ನೀಡಲು ಮತ್ತು ಬರುವ ಔಷಧ ಹಾಗೂ ಅಗತ್ಯ ಉಪಕರಣಗಳೊಂದಿಗೆ ಆಗಮಿಸಿತು. ಕೊನೆಗೂ ಆ ತಜ್ಞರ ತಂಡ ರೂಮಿನ ಕಿಟಕಿಯ ಮೂಲಕ ಚಿರತೆಗೆ ಜ್ಞಾನತಪ್ಪಿಸುವಲ್ಲಿ ಯಶಸ್ವಿಯಾಯಿತು. ನಂತರ ಅದನ್ನು ರಕ್ಷಿಸಿ ಬನ್ನೇರುಘಟ್ಟ ಕಾಡಿಗೆ ತೆಗೆದುಕೊಂಡು ಹೋದರು.

ಜಾಲಮಂಗಲ ಭಾಗದಲ್ಲಿ ಚಾರಣಕ್ಕೆ ಹೋಗುವವರು ಹಾಗೂ ಸುತ್ತಲಿನ ಪ್ರಯಾಣಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಸ್ಥಳಕ್ಕೆ ಹತ್ತಿರದಲ್ಲಿರುವ ಒಂದು ಬೆಟ್ಟಕ್ಕೆ ವಾರಾಂತ್ಯದಲ್ಲಿ ನೂರಾರು ಜನರು ಚಾರಣಕ್ಕೆ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರಾಂತ್ಯದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿ ಕಂಡು ಬಂದಿರುವ ಕಾರಣದಿಂದಾಗಿ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : Bangalore-cheetah-rescued-in-house-forest-police-Karnataka