ಬೆಂಗಳೂರು, ಸೆಪ್ಟೆಂಬರ್ ೨೨, ೨೦೨೧ (www.justkannada.in): ಬೆಂಗಳೂರು ಮಹಾನಗರದಲ್ಲಿ ಕಾನೂನುಬಾಹಿರ ಹೊಸ ಬಡಾವಣೆಗಳು ಎಲ್ಲೆಂದರಲ್ಲಿ ತಲೆಎತ್ತುತ್ತಲೇ ಇವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಲಹಂಕದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಕಾನೂನುಬಾಹಿರ ಬಡಾವಣೆಗಳಿವೆ.
ಲಭ್ಯವಾಗಿರುವ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು ೬,೦೦೦ ಕಾನೂನುನಾಹಿರ ಬಡಾವಣೆಗಳು ತಲೆಎತ್ತಿದ್ದು, ಆ ಪೈಕಿ ಯಲಹಂಕದಲ್ಲಿ ಅತೀ ಹೆಚ್ಚು, ಅಂದರೆ ೩,೨೮೫ ಕಾನೂನುಬಾಹಿರ ಬಡಾವಣೆಗಳಿದ್ದು, ಇವುಗಳ ಒಟ್ಟು ವ್ಯಾಪ್ತಿ ಪ್ರದೇಶ ೩,೩೪೩ ಎಕರೆಗಳಂತೆ.
ಉತ್ತರ ಬೆಂಗಳೂರು ಭಾಗ ೧,೦೮೦ ಎಕರೆ ವ್ಯಾಪ್ತಿಯುಳ್ಳ ೯೦೦ ಕಾನೂನುಬಾಹಿರ ಬಡಾವಣೆಗಳೊಂದಿಗೆ ಪಟ್ಟಿಯ ಎರಡನೆಯ ಸ್ಥಾನದಲ್ಲಿದ್ದು, ದಕ್ಷಿಣ ಬೆಂಗಳೂರು ಭಾಗದಲ್ಲಿ ೧,೯೦೭ ಎಕರೆ ವ್ಯಾಪ್ತಿಯಷ್ಟು ಪ್ರದೇಶದಲ್ಲಿ ೭೭೮ ಕಾನೂನುಬಾಹಿರ ಬಡಾವಣೆಗಳಿವೆ ಹಾಗೂ ಆನೇಕಲ್‌ನಲ್ಲಿ ೬೪೩ ಎಕರೆ ಪ್ರದೇಶದಲ್ಲಿ ೫೦೧ ಬಡಾವಣೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾನೂನುಬಾಹಿರ ಬಡಾವಣೆಗಳ ನಿರ್ಮಾಣವೂ ಹೆಚ್ಚಾಗಿವೆ. ಬೆಂಗಳೂರು ಜಿಲ್ಲಾಡಳಿತದ ಪ್ರಕಾರ ಕೆಐಎ ಬಳಿ ಸುಮಾರು ೩,೨೮೫ ಕಾನೂನುಬಾಹಿರ ಬಡಾವಣೆಗಳು ತಲೆಎತ್ತಿವೆ. ಕೆಐಎ ಬಳಿ ಮನೆಗಳನ್ನು ನಿರ್ಮಿಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಅಧಿಕಾರಿಗಳು ಒದಗಿಸಿರುವ ಮಾಹಿತಿ ಪ್ರಕಾರ ಯಲಹಂಕದಲ್ಲಿ ಈಗಾಗಲೇ ಕಾನೂನುಬಾಹಿರ ಬಡಾವಣೆಗಳ ನಿರ್ಮಾಣಕ್ಕಾಗಿ ೧,೯೬೧ ಡೆವೆಲಪರ್‌ಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ, ಸುಮಾರು ೩೫೩ ಜನರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ಕೆಐಎ ಸುತ್ತಮುತ್ತಲಿನಲ್ಲಿ ಭೂಮಿಗೆ ಬೇಡಿಕೆ ಎಷ್ಟು ಹೆಚ್ಚಾಗಿದೆ ಎಂದರೆ, ಕೇವಲ ೧೦ ಅಥವಾ ೨೦ ಗುಂಟೆ ಜಮನೀನಿದ್ದರೂ ಅಲ್ಲೇ ಬಡಾವಣೆಗಳು ನಿರ್ಮಾಣವಾಗುತ್ತಿವೆ.
ಓರ್ವ ಹಿರಿಯ ಅಧಿಕಾರಿ ತಿಳಿಸಿರುವ ಪ್ರಕಾರ, “ಬಿಡಿಎ ಬಡಾವಣೆಗಳಲ್ಲಿ ನಿವೇಶನ ಖರೀದಿಸುವುದು ಬಹಳ ಕಷ್ಟ. ಹಾಗಾಗಿ ಸ್ವಂತ ನಿವೇಶನ ಅಥವಾ ಮನೆಗಳನ್ನು ಹೊಂದಲು ಬಯಸುವ ಜನರು, ಬಿಡಿಎ ನಿವೇಶನ ದರಗಳ ಹೋಲಿಕೆಯಲ್ಲಿ ಇಂತಹ ಕಾನೂನುಬಾಹಿರ ಬಡಾವಣೆಗಳಲ್ಲಿ ನಿವೇಶನ ದರ ಕಡಿಮೆ ಇರುವ ಕಾರಣದಿಂದಾಗಿ ಹಿಂದೂ ಮುಂದು ನೋಡದೆ, ಕೂಲಂಕುಷವಾಗಿ ವಿಚಾರಿಸದೆ ನಿವೇಶನಗಳನ್ನು ಖರೀದಿಸುತ್ತಾರೆ.
ಮೇಲಾಗಿ ಡೆವೆಲಪರ್‌ಗಳು ಗ್ರಾಹಕರನ್ನು ಆಕರ್ಷಿಸಲು ನಿವೇಶನ ಟೂರ್‌ಗಳು, ಇಎಂಐ ಯೋಜನೆಗಳಂತಹ ಹಲವಾರು ಫ್ಯಾನ್ಸಿ ಯೋಜನೆಗಳನ್ನು ಒದಗಿಸಲಾರಂಭಿಸಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬುಲ್‌ಡೋಜರ್‌ಗಳೊಂದಿಗೆ ಕಾನೂನುಬಾಹಿರವಾಗಿ ನಿರ್ಮಿಸಿರುವಂತಹ ಕಟ್ಟಡಗಳನ್ನು ನೆಲಸಮಗೊಳಿಸಲು ಆರಂಭಿಸಿದಾಗಷ್ಟೇ ನಿವೇಶನ ಖರೀದಿಸಿದವರಿಗೆ ಬಿಸಿ ತಟ್ಟುತ್ತದೆ. ಹಾಗಾಗಿ, ಯಾವುದೇ ಸ್ಥಳದಲ್ಲಾದರೂ ನಿವೇಶನ ಖರೀದಿಸುವುದಕ್ಕೆ ಮುಂಚೆ ಗ್ರಾಹಕರು ಅತ್ಯಂತ ಎಚ್ಚರವಹಿಸಬೇಕು,” ಎನ್ನುತ್ತಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
key words : Bangalore/civic/dont-fall-for-no-mans-lands-in-yelahanka