ಬೆಂಗಳೂರು,ಮಾ,16,2020(www.justkannada.in): ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾದರಿ ಯೋಜನಡೆಯಡಿ ಪ್ರಾಯೋಗಿಕವಾಗಿ ಮತ್ತಿಕೆರೆ ವಾರ್ಡಿನಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಡಿಸಿಎಂ ಡಾ. ಅಶ್ವತ್ಥನಾರಾಯಣ್ ಮಾತನಾಡಿದರು.
ಸ್ವಚ್ಛತೆಯ ದೃಷ್ಟಿಯಿಂದ ಪ್ರಮುಖ ಕಾರ್ಯಕ್ರಮವಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದು ಸಾರ್ವಜನಿಕರು ಸೇರುವ ಕಾರ್ಯಕ್ರಮವಲ್ಲ ಎಂದು ಮೊದಲೇ ಸೂಚನೆ ನೀಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, “ಮುಖ್ಯವಾಗಿ ಸ್ವಚ್ಛತೆ ಗುಣಮಟ್ಟ ಹೆಚ್ಚಿಸುವುದು ನಮ್ಮ ಉದ್ದೇಶ. ಇದಕ್ಕೆ ಪೂರಕವಾಗಿ ಇಂದೋರ್ನ ಕನ್ಸಲ್ಟೆಂಟ್ ಸಂಸ್ಥೆ ಪ್ರಾಯೋಗಿಕವಾಗಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಮುಂದಾಗಿದೆ. ಈ ಮಾದರಿಗೆ ತಾಂತ್ರಿಕ ಸ್ಪರ್ಶ ನೀಡಿ, ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆರೋಗ್ಯ ಸಮಿತಿ ಅಧ್ಯಕ್ಷರು ಹಾಗೂ ಮಹಾಪೌರರು ನಿರ್ಧರಿಸಿದ್ದಾರೆ,”ಎಂದು ತಿಳಿಸಿದರು.
“ಇಡೀ ಭಾರತದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದು, ಸ್ವಚ್ಛತೆಗೆ ಬೆಂಗಳೂರು ಹೆಸರು ಮಾಡಿತ್ತು. ಈಗ ಕಸ ನಿರ್ವಹಣೆಯಲ್ಲಿ ಇಂದೋರ್ ನಂಬರ್ 1 ಸ್ಥಾನದ್ದಲ್ಲಿದ್ದು, ಎಲ್ಲರಿಗೂ ಮಾದರಿಯಾಗಿದೆ. ಅದೇ ಮಾದರಿಯನ್ನು ನಮ್ಮ ಭಾಗದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ಸ್ವಚ್ಛತೆ ನಿರ್ವಹಣೆಯಲ್ಲಿ ಕಸ ಸಂಗ್ರಹಣೆ ಒಂದು ಭಾಗವಾದರೆ, ಅದರ ವಿಂಗಡಣೆ ಅದಕ್ಕಿಂತಲೂ ಮುಖ್ಯವಾದ ಭಾಗ. ಹಸಿ, ಒಣ ಹಾಗೂ ಅಪಾಯಕಾರಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡಲು ತಂತ್ರಜ್ಞಾನದ ನೆರವು ಪಡೆಯುವ ಚಿಂತನೆ ಇದೆ. ಈ ಮೂಲಕ ಬೆಂಗಳೂರು ಮಾದರಿ ಆಗಲಿದೆ. ಇದಕ್ಕೆ ನಾಗರಿಕರ ಸಹಕಾರ ಅತ್ಯಗತ್ಯ,”ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಕೊರೊನಾ ಜಾಗೃತಿ ……
“ಕೊರೊನಾ ಬರದಂತೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಸ್ವಚ್ಛತೆ ಕಾಪಾಡುವ ಮೂಲಕ ನಾಗರಿಕರು ಸಮಾಜದ ಆರೋಗ್ಯ ರಕ್ಷಣೆ ಮಾಡಬಹುದು. ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಹೊರಗೆ ಬರದಿರುವುದು ಒಳಿತು. ಮನೆ ಮನೆಗೆ ತೆರಳಿ ವೃದ್ಧರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ನಮ್ಮ ಆರೋಗ್ಯ ಸೇವಾ ಸಿಬ್ಬಂದಿಗೆ ಸೂಚಿಸಲಾಗಿದೆ,”ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್, ಪಾಲಿಕೆಯ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ ರಾಜು ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
ಇಂದೋರ್ ಮಾದರಿ ಹೇಗೆ?
*ವಾರ್ಡ್ನ ಎಲ್ಲ ಮನೆಗಳಿಂದ ಹಾಗೂ ವಾಣಿಜ್ಯ ಮಳಿಗೆಗಳಿಂದ ಮೂಲದಲ್ಲೇ ಶೇ. 100 ರಷ್ಟು ವಿಂಗಡಿಸಿದ ತ್ಯಾಜ್ಯ ಸಂಗ್ರಹಣೆ ಮಾಡಿ, ಅದನ್ನು ತೆರೆದ ಆಟೋ ಟಿಪ್ಪರ್ ಬದಲು ಮುಚ್ಚಿದ ಕಂಪಾರ್ಟ್ಮೆಂಟ್ ಇರುವ ಆಟೊ ಟಿಪ್ಪರ್ಗಳಲ್ಲಿ ಸಾಗಿಸಲಾಗುವುದು.
*ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ನಿಂರಂತರ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು.
* ಮನೆಗಳಿಂದ ಬೆಳಗ್ಗೆ ಪಾಳಿಯಲ್ಲಿ ಹಾಗೂ ವಾಣಿಜ್ಯ ಮಳಿಗೆಗಳಿಂದ ರಾತ್ರಿ ಪಾಳಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡಲಾಗುವುದು ಮತ್ತು ವಾಣಿಜ್ಯ ಪ್ರದೇಶಗಳ ರಸ್ತೆ ಸ್ವಚ್ಛತೆ ಕಾರ್ಯ ಮಾಡಲಾಗುವುದು.
*ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಮೊದಲು ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು, ನಂತರದ ದಿನಗಳಲ್ಲಿ ದಂಡ ವಿಧಿಸಲಾಗುವುದು.
*ಸಾರ್ವಜನಿಕ ಸ್ಥಳಗಳಲ್ಲಿ ಕಸ ತೆರವುಗೊಳಿಸಿ ಸುಂದರಗೊಳಿಸಲಾಗುವುದು.
*ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲಿಕರಿಂದ ತೆರಿಗೆ ಜತೆ ದಂಡ ವಸೂಲಿ ಮಾಡಲಾಗುವುದು.
Key words: Bangalore- Cleanliness- Indore-DCM Dr. Ashwath narayan- confidence.