ಬೆಂಗಳೂರು,ಡಿ,17,2019(www.justkannada.in): ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿ. ಎಲ್ ಸಂತೋಷ್ ಭೇಟಿ ಮಾಡಿದ ಬೆನ್ನಲ್ಲೇ ಇದೀಗ ಸಚಿವಾಕಾಂಕ್ಷಿ ಶಾಸಕರುಗಳು ಚುರುಕಾಗಿದ್ದು ಇಂದು ಸಿಎಂ ಬಿಎಸ್ ವೈ ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿದ್ದಾರೆ.
ನಿನ್ನೆ ಸಿಎಂ ಯಡಿಯೂರಪ್ಪ ಅವರನ್ನ ಬಿ ಎಲ್ ಸಂತೋಷ್ ಭೇಟಿ ಮಾಡಿ ಸಂಭಾವ್ಯ ಸಚಿವರ ಪಟ್ಟಿ ಸಿದ್ಧ ಮಾಡಿಕೊಂಡು ದೆಹಲಿಗೆ ಬರುವಂತೆ ಸೂಚಿಸಿದ್ದರು ಎನ್ನಲಾಗಿದ್ದು ಈ ಹಿನ್ನೆಲೆ ಇಂದು ಬಿಜೆಪಿ ಶಾಸಕರು ಸಿಎಂ ಬಿಎಸ್ ವೈ ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.
ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡುವಂತೆ ಶಾಸಕ ಸೋಮಶೇಖರ ರೆಡ್ಡಿ ಒತ್ತಾಯ..
ಈ ನಡುವೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಡ ಹಾಕಿದ್ದಾರೆ. ಚುನಾವಣಾ ಪೂರ್ವದಲ್ಲಿ ಮಾತು ಕೊಟ್ಟಂತೆ ಡಿಸಿಎಂ ಸ್ಥಾನ ಕೊಡುವಂತೆ ಆಗ್ರಹಿಸಿದ್ದಾರೆ.
ಸಿಎಂ ಭೇಟಿ ಮಾಡಿದ ಶಾಸಕ ರಮೇಶ್ ಜಾರಕಿಹೊಳಿ..
ಡಿಸಿಎಂ ಹುದ್ದೆಗೆ ಶ್ರೀರಾಮುಲು ಪಟ್ಟು ಹಿನ್ನೆಲೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸಹ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಡಿಸಿಎಂ ಹುದ್ದೆ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ವಿಳಂಬ ಕುರಿತೂ ಸಿಎಂ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಈನಡುವೆ ರಮೇಶ್ ಜಾರಕಿಹೊಳಿ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದು, ಮಾತು ಕೊಟ್ಟಂತೆ ತಮಗೇ ಡಿಸಿಎಂ ಕೊಡಬೇಕೆಂದು ಜಾರಕಿಹೊಳಿ ಒತ್ತಡ ಹಾಕಿದ್ದಾರೆ
ರಮೇಶ್ ಜಾರಕಿಹೊಳಿ ತೆರಳಿದ ಬಳಿಕ ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಬಿಎಸ್ ವೈ ಅವರನ್ನ ಭೇಟಿಯಾಗಿದ್ದಾರೆ. ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ್ ಸವದಿ ರಣತಂತ್ರ ನಡೆಸುತ್ತಿದ್ದು, ಕಳೆದ ವಾರ ದೆಹಲಿಗೆ ಹೋಗಿ ಡಿಸಿಎಂ ಹುದ್ದೆ ಉಳಿಸಿಕೊಳ್ಳುವ ಕುರಿತು ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿದ್ದರು. ಇದೀಗ ದೆಹಲಿಯಿಂದ ಬಂದ ಬಳಿಕ ಇಂದು ಸಿಎಂ ಬಿಎಸ್ ವೈ ಅವರನ್ನ ಭೇಟಿಯಾಗಿ ಲಕ್ಷ್ಮಣ್ ಸವದಿ ಚರ್ಚೆ ನಡೆಸಿದ್ದಾರೆ.
ಸಚಿವ ಆಕಾಂಕ್ಷಿ ಶಾಸಕ ಎಂ ಪಿ ರೇಣುಕಾಚಾರ್ಯರಿಂದ ಸಿಎಂ ಭೇಟಿ…
ಮತ್ತೊಬ್ಬ ಸಚಿವ ಆಕಾಂಕ್ಷಿ ಶಾಸಕ ಎಂ ಪಿ ರೇಣುಕಾಚಾರ್ಯ ಸಿಎಂ ಬಿಎಸ್ ವೈರನ್ನ ಭೇಟಿಯಾಗಿ ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಸಚಿವರಿಲ್ಲ. ಈ ಭಾಗಕ್ಕೆ ಒಂದು ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಭಾಗದಿಂದ ತಮಗೆ ಸಚಿವ ಸ್ಥಾನ ಕೊಡುವಂತೆ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ.
ಇನ್ನೊಂದೆಡೆ ರಮೇಶ್ ಜಾರಕಿಹೊಳಿ ತೆರಳಿದ ಬೆನ್ಮಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಾ ಸಿಎಂ ಭೇಟಿಯಾಗಿದ್ದು ತಮಗೆ ಜಲಸಂಪನ್ಮೂಲ ಖಾತೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಜಲಸಂಪನ್ಮೂಲ ಖಾತೆಗಾಗಿ ರಮೇಶ್ ಜಾರಕಿಹೊಳಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಒಟ್ಟಾರೇ ಸಚಿವ ಸ್ಥಾನ ಮತ್ತು ಡಿಸಿಎಂ ಪಟ್ಟಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು ಸಂಪುಟ ವಿಸ್ತರಣೆ ಮತ್ತು ಸಚಿವ ಸ್ಥಾನ ಹಂಚಿಕೆ ಸಿಎಂ ಬಿಎಸ್ ಯಡಿಯೂರಪ್ಪಗೆ ತಲೆನೋವಾಗಿ ಪರಿಣಮಿಸಿದೆ.
Key words: Bangalore-cm bs yeddyurappa –BJP mlas- meet- demand- minister -position