ಬೆಂಗಳೂರು,ಅ,12,2020(www.justkannada.in) : ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಪುಂಡಾಟ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರಕ್ಕೆ ಹೆಚ್,ಡಿಕೆ ಸಲಹೆ ನೀಡಿದ್ದಾರೆ.
ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ….
ಇನ್ನು ಘಟನೆ ಖಂಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ, ಆತನಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Key words: Bangalore-DJ halli-roit-case-former cm- HD Kumaraswamy-tweet