ಬೆಂಗಳೂರು,ಮಾರ್ಚ್,19,2024(www.justkannada.in): ಬೆಂಗಳೂರಿನ ನಗರತ್ ಪೇಟೆಯಲ್ಲಿ ಯುವಕ ಮುಕೇಶ್ ಎಂಬುವವರ ಮೇಲೆ ಅನ್ಯಕೋಮಿನ ಯುವಕರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರೆ ನೀಡಲಾಗಿದ್ದ ಹನುಮಾನ್ ಚಲೀಸಾ ಮೆರವಣಿಗೆ ವೇಳೆ ಹೈಡ್ರಾಮಾ ನಡೆದಿದೆ.
ನಗರತ್ ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕ ಮುಕೇಶ್ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಹಿನ್ನೆಲೆ ಹನುಮಾನ್ ಚಾಲೀಸಾಗೆ ಯುವ ಮುಕೇಶ್ ಕರೆ ನೀಡಿದ್ದು ಈ ವೇಳೆ ಹನುಮಾನ್ ಚಾಲೀಸಾ ಮೆರವಣಿಗೆಗೆ ಮುಂದಾದ ಮುಕೇಶ್ ಸೇರಿ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಈ ಸಮಯದಲ್ಲಿ ಸ್ಥಳಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದು ಪೊಲೀಸರ ನಡುವೆ ವಾಗ್ವಾದ ನಡೆಸಿದರು. ಪೊಲೀಸ್ ಜೀಪ್ ಮುಂದೆ ನಿಂತು ಪ್ರತಿಭಟನೆಗೆ ಮುಂದಾದರು.
ಈ ನಡುವೆ ಕೇಂದ್ರ ಸಚಿವ ಶೋಭಾ ಕರಂಧ್ಲಾಜೆ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಹಿಂದೂ ಕಾರ್ಯಕರ್ತರ ಪ್ರತಿಭಟನೆಗೆ ಸಾಥ್ ನೀಡಿದರು. ಈ ವೇಳೆ ಪ್ರತಿಭಟನೆಗೆ ಮುಂದಾದ ಶೋಭಾ ಕರಂದ್ಲಾಜೆ ಅವರು ಸೇರಿ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
Key words: Bangalore-Hanuman Chalisa – Union Minister- Shobha Karandhlaje – Hindu activists