ಬೆಂಗಳೂರು, ಅಕ್ಟೋಬರ್ ೨೫, ೨೦೨೧ (www.justkannada.in): ಬೆಂಗಳೂರು ನಗರದ ಬಹುಪಾಲು ರಸ್ತೆಗಳು ಗುಂಡಿಗಳಿಂದ ತುಂಬಿದ್ದು ಈಗಾಗಲೇ ವಾಹನ ಚಾಲಕರು ಬೇಸತ್ತು ಹೋಗಿದ್ದಾರೆ. ಎಲ್ಲೆಂದರಲ್ಲಿ ಹೆಲ್ಮೆಟ್ ಇಲ್ಲ, ಲೈಸೆನ್ಸ್ ಇಲ್ಲ, ಅದಿಲ್ಲ, ಇದಿಲ್ಲ ಎಂದು ರಸ್ತೆ ಮಧ್ಯದಲ್ಲಿ ವಾಹನಗಳನ್ನು ತಡೆದು ಹಿಂಸಿಸುವ ಸಂಚಾರಿ ಪೊಲೀಸರ ಕಾಟ ಒಂದುಕಡೆಯಾದರೆ, ಮಳೆಯಿಂದಾಗಿ ಮಹಾನಗರದ ಅನೇಕ ರಸ್ತೆಗಳು ಕೊಚ್ಚೆಯಿಂದ ತುಂಬಿ ಹೋಗಿವೆ.
ಬೆಂಗಳೂರು ನಗರದ ಅನೇಕ ರಸ್ತೆಗಳನ್ನು ಒಂದಿಲ್ಲ ಒಂದು ಕಾರಣ ನೀಡಿ ನಾಗರಿಕ ಏಜೆನ್ಸಿಗಳವರು ಎರಡುಮೂರು ತಿಂಗಳಿಗೊಮ್ಮೆ ಅಗೆಯವುದು ಸಾಮಾನ್ಯವಾಗಿದೆ. ಅದನ್ನು ದುರಸ್ಥಿ ಪಡಿಸುವುದೂ ಸಹ ವಿಳಂಬವೇ. ಇದರಿಂದಾಗಿ ವಾಹನ ಚಾಲಕರು ಪರದಾಟ ಎಂದಿನಂತೆ ಮುಂದುವರೆದಿದೆ.
ದ್ವಿಚಕ್ರ ಅಥವಾ ನಾಲ್ಕು ಚಕ್ರಗಳ ವಾಹನದಲ್ಲಿ ಓಡಾಡುವಾಗ ಇಂತಹ ಕೊಚ್ಚೆ ತುಂಬಿದ ರಸ್ತೆಯಲ್ಲಿ ವಾಹನ ಸಿಲುಕಿಕೊಂಡರೆ ಆ ವಾಹನವನ್ನು ರಕ್ಷಿಸಿ, ಹೊರಕ್ಕೆ ತೆಗೆಯಲು ಸ್ವಾಭಾವಿಕವಾಗಿ ಮತ್ತೊಬ್ಬರ ಸಹಾಯ ಅಗತ್ಯವಾಗಿ ಬೇಕಾಗುತ್ತದೆ. ಹೀಗೆ ರಸ್ತೆಗಳ ನಡುವೆ, ಕೊಚ್ಚೆಯ ನಡುವೆ ಸಿಲುಕಿಕೊಂಡ ತಮ್ಮ ವಾಹನಗಳನ್ನು ರಕ್ಷಿಸಲು ರಾಜ್ಯ ರಾಜಧಾನಿಯ ವಾಹನ ಚಾಲಕರು ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತಿದೆ.
ಬೆಂಗಳೂರಿನ ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಕಷ್ಟವಾಗುತ್ತದೆ ಎಂಬ ಕಾರಣದಿಂದಾಗಿ ಕಾರುಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಕಾರಣಗಳಿಂದಾಗಿ ಹಲವಾರು ರಸ್ತೆಗಳನ್ನು ಅಗೆದು, ಮಣ್ಣನ್ನು ಅಕ್ಕಪಕ್ಕದಲ್ಲಿ ಹಾಗೇ ಬಿಟ್ಟಿರುವ ಕಾರಣದಿಂದಾಗಿ ಮಳೆಯಾದಾಗ ರಸ್ತೆ ಇಡೀ ಕೊಚ್ಚೆಯಾಗಿರುತ್ತದೆ. ಜೊತೆಗೆ ಗುಂಡಿಗಳಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನಾಲ್ಕು ಚಕ್ರಗಳ ವಾಹನಗಳು ಕೊಚ್ಚೆಯಲ್ಲಿ ಸಿಲುಕಿಕೊಳ್ಳುವುದು ಸ್ವಾಭಾವಿಕ. ಹೀಗಾದಾಗ ಒಮ್ಮೊಮ್ಮೆ ವಾಹನವನ್ನು ಕೊಚ್ಚೆಯಿಂದ ಹೊರಗೆಳೆಯಲು ಲಾರಿಗಳು ಹಾಗೂ ಕ್ರೇನ್‌ಗಳ ಸಹಾಯ ಬೇಕಾಗುತ್ತದೆ. ಈ ರೀತಿ ವಾಹನಗಳನ್ನು ಟೌ ಮಾಡುವ ಖಾಸಗಿ ವಾಹನಗಳು, ಕ್ರೇನ್‌ಗಳು ಹಾಗೂ ಸಿಬ್ಬಂದಿಗಳು ಸನ್ನಿವೇಶವನ್ನು ಬಳಸಿಕೊಂಡು ರೂ.೨,೦೦೦ದವರೆಗೂ ಹಣ ಪೀಕುತ್ತಾರೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರ ಗಮನಕ್ಕೆ ತಂದಾಗ ಅದರ ಬಗ್ಗೆ ಗಮನ ನೀಡುವುದಾಗಿ ತಿಳಿಸಿದ್ದಾರೆ. ಇಂತಹ ಸನ್ನಿವೇಶಗಳು ಎದುರಾದಾಗಿ ಸಾರ್ವಜನಿಕರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಬೇಕೆಂದು ತಿಳಿಸಿದ್ದಾರೆ. ” ನಾಗರಿಕ ಸೇವೆಗಳನ್ನು ಒದಗಿಸುವ ಏಜೆನ್ಸಿಗಳು ರಸ್ತೆಗಳನ್ನು ಹಲವು ಕಾರಣಗಳಿಗಾಗಿ ಅಗೆಯುತ್ತವೆ. ಕೆಲವು ಪ್ರದೇಶಗಳಲ್ಲಿ ಬಿಡಬ್ಲೂಎಸ್‌ಎಸ್‌ಬಿ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ನಾವು ಆದ್ಯತೆಯ ಮೇರಗೆ ಮಣ್ಣು ಹಾಗೂ ಕೊಚ್ಚೆಯಿಂದ ತುಂಬಿಕೊಳ್ಳುವ ರಸ್ತೆಗಳನ್ನು ಗುರುತಿಸಿ, ಸಾಧ್ಯವಾಷ್ಟೂ ಬೇಗ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ.
ಈ ಸಂಬಂಧ ಈಗಾಗಲೇ ಒಂದು ಯೋಜನೆಯನ್ನು ರೂಪಿಸಿದ್ದು, ನಮ್ಮ ಅಧಿಕಾರಿಗಳನ್ನು ಸ್ಥಳ ತಪಾಸಣೆಗೆ ಕಳುಹಿಸಲಿದ್ದೇವೆ. ಜೊತೆಗೆ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಎದುರಾಗದಿರುವಂತೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವಂತೆ ಸೂಚನೆ ನೀಡಿದ್ದೇವೆ. ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ಜೀವನಕ್ಕೆ ಅನಾನುಕೂಲವಾಗಿದೆ. ಉತ್ತಮ ರಸ್ತೆಗಳನ್ನು ಕಲ್ಪಿಸುವ ಮೂಲಕ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ಉತ್ತರಿಸಿದರು.
ಸುದ್ದಿ ಮೂಲ: ಬೆಂಗಳೂರು ಮಿರರ್
key words : Bangalore-heavy-rain-vehicle-stuck-quick-buck-of-the-muck