ಬೆಂಗಳೂರು, ಮಾರ್ಚ್,2,2024(www.justkannada.in): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೆ ಇದೀಗ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಎರಡೂ ಟರ್ಮಿನಲ್ ಒಳಗಡೆ ಪ್ರವೇಶಿಸುವವರ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೂ ನಿಗಾ ಇರಿಸಿದ್ದಾರೆ. ಊಟ ತಿಂಡಿ ಮಾಡುವವರ ಮತ್ತು ಜನರ ಲಗೇಜ್ ಮೇಲೆ ಪೊಲೀಸರ ಕಣ್ಗಾವಲಿದೆ.
ಹಾಗೆಯೇ ವಿಐಪಿ ಲೈನ್ನಲ್ಲಿ ಪಾರ್ಕಿಂಗ್ ಅವಧಿಯನ್ನು ಅರ್ಧ ಗಂಟೆಯಿಂದ 5 ರಿಂದ 10 ನಿಮಿಷಕ್ಕೆ ಇಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದ್ದು, ಮೂರು ಪಾಳಯದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Key words: Bangalore-High alert -Kempegowda Airport.