ಧಾರ್ಮಿಕ ಮಾಫಿಯಾ ಇಂದು ಶೇ. ೮೦ ರಷ್ಟಿರುವ ಹಿಂದೂಗಳ ಆಸ್ತಿ ಕಬಳಿಸಿ, 2-3 ಪರ್ಸೆಂಟ್ ಜನರ ಅಧೀನಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದೆ : ಸಿದ್ದರಾಮಯ್ಯ.

Bangalore-Karnataka-bjp-government-temple-congress-siddu-oppose

 

ಬೆಂಗಳೂರು, ಜ.02, 2022 : (www.justkannada.in news ) ದೇವಾಲಯಗಳನ್ನು ಸ್ವತಂತ್ರಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಖಂಡಿಸಿದ್ದು, ಬಿಜೆಪಿಯ ಸುಳ್ಳಿನ ಫ್ಯಾಕ್ಟರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ, ರಾಜ್ಯ ಸರಕಾರದ ಈ ನಿರ್ಧಾರದ ಹಿಂದಿನ ಹುನ್ನಾರದ ಬಗ್ಗೆ ಸುದೀರ್ಘ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ ವಿವರ ಹೀಗಿದೆ…..

ಸರ್ಕಾರವು ರಾಜ್ಯದ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವುದಾಗಿ, ಸ್ವಾಯತ್ತಗೊಳಿಸುವುದಾಗಿ ಹೇಳುತ್ತಿದೆ. ದೇವಸ್ಥಾನಗಳು ಈಗಲೂ ಸ್ವತಂತ್ರವಾಗಿಯೆ ಇವೆ. ಸರ್ಕಾರ ಅನೇಕ ದೇವಸ್ಥಾನಗಳಿಗೆ ನೆರವು ನೀಡುವುದರ ಮೂಲಕ ಅವುಗಳನ್ನು ಪೊರೆಯುತ್ತಿದೆ. ಮುಜರಾಯಿ ಇಲಾಖೆಯ ವಾರ್ಷಿಕ ಬಜೆಟ್ಟು ಸುಮಾರು ೩೫೦ ಕೋಟಿಗಳಷ್ಟಿದೆ.

ಸರ್ಕಾರವೇ ದೇವಸ್ಥಾನಗಳನ್ನು ನಡೆಸುವುದೆಂದರೆ ಸಮಾಜದ ಕಟ್ಟ ಕಡೆಯ ಮನುಷ್ಯರಿಗೂ ಅವುಗಳ ಮೇಲೆ ಹಕ್ಕುಗಳು ಇವೆಯೆಂದು ಅರ್ಥ. ಸರ್ಕಾರ ದೇವಸ್ಥಾನಗಳ ಮೇಲಿನ ಹಿಡಿತವನ್ನು ತಪ್ಪಿಸುವುದೆಂದರೆ ಜನ ಸಮುದಾಯಗಳಿಗೆ ಇರುವ ಅಧಿಕಾರವನ್ನು ತಪ್ಪಿಸುವುದೆಂದು ಅರ್ಥ.

ಈಗ ಸರ್ಕಾರ ಮಾಡ ಹೊರಟಿರುವುದೇನೆಂದರೆ ನಾಡಿನ ಐದೂವರೆ ಕೋಟಿ ಕನ್ನಡಿಗ ಹಿಂದೂಗಳ ಅಧಿಕಾರವನ್ನು ತಪ್ಪಿಸಿ ಕೇವಲ ಶೇ.ಎರಡರಷ್ಟು ಜನರ ಕೈಗೆ ಕೊಡಲು ಮುಂದಾಗಿರುವುದು. ಸರ್ಕಾರದ ಈ ನಿರ್ಧಾರದಿಂದ ಶೇ. ೮೦ ರಷ್ಟು ಜನ ಮತ್ತೆ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಅನುಭವಿಸಬೇಕೆಂದು ಸರ್ಕಾರ ತೀರ್ಮಾನಿಸಿದಂತೆ ಕಾಣುತ್ತಿದೆ.

ಬಸವಣ್ಣನವರ ನೇತೃತ್ವದ ಶರಣ ಚಳುವಳಿಯನ್ನು ದಮನ ಮಾಡಿದ ಪುರೋಹಿತಶಾಹಿ ಶಕ್ತಿಗಳೆ ಇಂದು ತಮ್ಮ ಬಿಜೆಪಿ ಪಕ್ಷದಲ್ಲಿರುವ ಶೂದ್ರ ರಾಜಕಾರಣಿಗಳನ್ನು ಬಳಸಿಕೊಂಡು ದೇವಸ್ಥಾನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಐದೂವರೆ ಕೋಟಿ ಕನ್ನಡಿಗ ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯ ಕಡೆಗೆ ತಳ್ಳಲು ಪ್ರಯತ್ನಿಸುತ್ತಿವೆ.

ಈ ಪುರೋಹಿತ ಶಾಹಿ ವರ್ಗ ಸ್ವಾಯತ್ತತೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಲಕ್ಷಾಂತರ, ಕೋಟ್ಯಾಂತರ ಆದಾಯವಿರುವ ದೇವಸ್ಥಾನಗಳನ್ನು ತಾವು ತೆಗೆದುಕೊಂಡು ಆದಾಯವಿಲ್ಲದ ಕೆಲವು ದೇವಸ್ಥಾನಗಳನ್ನು ಉಳಿದವರಿಗೆ ಬಿಟ್ಟುಕೊಡಬಹುದು.
ಆದರೆ ಸರ್ಕಾರದ ಹಿಡಿತ ತಪ್ಪಿದ ಕೂಡಲೆ ಮನುವಾದಿ ನಿಯಮಗಳನ್ನು ಸಮಾಜದ ಮೇಲೆ ಹೇರಿಕೆ ಮಾಡಲು ಪ್ರಾರಂಭಿಸುತ್ತಾರೆ. ಈ ವಿಚಾರಗಳನ್ನು ಹೇಳಿದ ಕೂಡಲೆ ಸಂಘ ಪರಿವಾರದವರು ಇನ್ನಿಲ್ಲದಂತೆ ತೊಳಲಾಡುತ್ತಾರೆ.

ತಾವು ಮಾತನಾಡಲಾರದೆ ತಮ್ಮ ಪಕ್ಷದಲ್ಲಿರುವ ಶೂದ್ರಾದಿ ದಲಿತ ನಾಯಕರನ್ನು ಛೂ ಬಿಟ್ಟು ಬಾಯಿಗೆ ಬಂದಂತೆ ಮಾತನಾಡಲು ಸೂಚಿಸುತ್ತಾರೆ. ಈ ಧಾರ್ಮಿಕ ಅನ್ಯಾಯಗಳ ವಿರುದ್ಧ, ಶೋಷಣೆಯ ನೀತಿಗಳ ವಿರುದ್ಧ ಮಾತನಾಡಿದರೆ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳ ಬಗ್ಗೆ ಪ್ರಸ್ತಾಪಿಸಿದ ಕೂಡಲೆ ಹಾಗೆ ಪ್ರಸ್ತಾಪಿಸಿದವರನ್ನು ಹಿಂದೂ ವಿರೋಧ, ಪಾಕಿಸ್ತಾನ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ವಿಷಯಗಳನ್ನು ಮಾತನಾಡಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ.

ಇದು ಮನುವಾದಿಗಳ ಪುರಾತನ ಅಜೆಂಡ. ಹಾಗಾಗಿ ಜನರು ಇವರ ದುಷ್ಟ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮ, ದೇವರು, ದೇವಸ್ಥಾನ, ಮಸೀದಿ, ಚರ್ಚುಗಳ ವಿಷಯದಲ್ಲಿ ರಾಜಕೀಯ ಮಾಡಿಕೊಂಡು ದೇಶವನ್ನು ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಒತ್ತೆ ಇಡುತ್ತಿರುವ ಬಿಜೆಪಿಯು ಆರಂಭದಿಂದಲೂ ಸುಳ್ಳುಗಳ ಫ್ಯಾಕ್ಟರಿ ಇಟ್ಟುಕೊಂಡು ಸುಳ್ಳುಗಳನ್ನೆ ಉತ್ಪಾದಿಸಿ ಜನರಿಗೆ ಮಾರಿ ರಾಜಕಾರಣ ಮಾಡುತ್ತಿದ್ದಾರೆ.

ಅಂಥ ಹಲವು ಸುಳ್ಳುಗಳಲ್ಲಿ, ದೇವಸ್ಥಾನಗಳ ಹಣವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂಬುದೂ ಒಂದು. ಆದರೆ ವಾಸ್ತವವಾಗಿ ದೇವಸ್ಥಾನಗಳ ಒಂದೇ ಒಂದು ರೂಪಾಯಿ ಹಣವನ್ನೂ ಮಸೀದಿಗಾಗಲಿ, ಚರ್ಚುಗಳಿಗಾಗಲಿ ಬಳಸಿಲ್ಲವೆಂದು ಇಲಾಖೆ ಉತ್ತರ ನೀಡಿದೆ.

ಇಲಾಖೆಯ ಉತ್ತರ ಈ ರೀತಿ ಇದೆ, “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-೧೯೯೭ ಮತ್ತು ನಿಯಮಗಳು-೨೦೦೨ ರಡಿ ಸದರಿ ಅನುದಾನಗಳನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಯಾವುದೇ ದೇವಾಲಯದ ಆದಾಯದಿಂದ / ನಿಧಿಯಿಂದ ಬಿಡುಗಡೆ/ ಮಂಜೂರು ಮಾಡುತ್ತಿರುವುದಿಲ್ಲ” ಎಂದು ಹೇಳಲಾಗಿದೆ.

ಆದರೂ ಬಿಜೆಪಿಯ ಕೆಲವು ಸುಳ್ಳಿನ ಉತ್ಪಾದಕರು ಅಪಪ್ರಚಾರ ಮಾಡುತ್ತಲೆ ಇದ್ದಾರೆ. ದೇವರ ಹೆಸರಿನಲ್ಲಿ ಸುಳ್ಳು ಹೇಳುವ, ಅಪಚಾರ ಎಸಗುವ ಈ ಜನ ಎಷ್ಟು ಕೆಟ್ಟವರು, ಅಮಾನವೀಯ ವ್ಯಕ್ತಿಗಳು ಎಂಬುದಕ್ಕೆ ಇದು ಸಾಕ್ಷಿ.

ಹಾಗಿದ್ದರೆ ಹಿಂದೂ ಮತ್ತು ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ವರ್ಷಾಸನ ಮತ್ತು ತಸ್ತೀಕ್ ನೀಡುತ್ತಿಲ್ಲವೆ? ಖಂಡಿತ ನೀಡುತ್ತಿದೆ. ಅದರೆ ಅದು ದೇವಸ್ಥಾನಗಳ ಆದಾಯವಲ್ಲ. ಅದು ಸರ್ಕಾರದ ಹಣ.

corona-restriction-public-access-srikantheshwara-temple-nanjangud

ರಾಜ್ಯದಲ್ಲಿ ತಸ್ತೀಕ್ ಮತ್ತು ವರ್ಷಾಸನಗಳನ್ನು ಪಡೆಯುತ್ತಿರುವ ಹಿಂದೂ ಮತ್ತು ಹಿಂದೂಯೇತರ ಒಟ್ಟು ಸಂಸ್ಥೆಗಳು ೩೦೩೬೩. ಈ ಸಂಸ್ಥೆಗಳಿಗೆ ಒಟ್ಟಾರೆ ಒಂದು ವರ್ಷಕ್ಕೆ ೧೫೦.೯೨ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ೮೭೫ ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ೪.೨೦ ಕೋಟಿ ರೂಗಳನ್ನು ನೀಡಲಾಗುತ್ತಿದೆ. ಉಳಿದ ೧೪೬.೭೨ ಕೋಟಿ ರೂಪಾಯಿಗಳನ್ನು ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಈ ಹಣವೂ ದೇವಾಲಯಗಳ ಹಣವಲ್ಲ. ಇದು ಸರ್ಕಾರ ನೀಡುತ್ತಿರುವ ಪರಿಹಾರದ ಹಣ.

ಇದನ್ನು ಪರಿಹಾರ ಅನ್ನುವುದು ಏಕೆ?

ತಸ್ತೀಕ್; ಅಂದರೆ ಮೈಸೂರು ಇನಾಂ ರದ್ದಿಯಾತಿ ಕಾಯ್ದೆ ೧೯೫೫ ರಂತೆ ೧-೭-೧೯೭೦ ರಿಂದ ಧರ್ಮಾದಾಯ ಮತ್ತು ದೇವಾದಾಯ ಇನಾಂ ಜಮೀನುಗಳ ಹಕ್ಕುಗಳನ್ನು ಸರ್ಕಾರವು ಕಾಯ್ದೆಯ ಕಲಂ ೧೭ ರಂತೆ ತನ್ನಲ್ಲಿ ನಿಹಿತಗೊಳಿಸಿಕೊಂಡಿತು. ಜಮೀನುಗಳನ್ನು ವಶಪಡಿಸಿಕೊಂಡ ಹಿಂದಿನ ೫ ವರ್ಷಗಳ ಬೆಳೆಯನ್ನು ಆಧರಿಸಿ ತಸ್ತೀಕ್ ಅನ್ನು ಜಿಲ್ಲಾಧಿಕಾರಿಗಳು/ ಉಪವಿಭಾಗಾಧಿಕಾರಿಗಳು ನಿಗಧಿಗೊಳಿಸುತ್ತಾರೆ. ಸಂಸ್ಥೆಯ/ ವ್ಯಕ್ತಿಯ ಜಮೀನುಗಳನ್ನು ನಿಹಿತಗೊಳಿಸಿಕೊಂಡದ್ದರಿಂದ ಅವರಿಗೆ ಪರಿಹಾರ ನೀಡುವ ಉದ್ದೇಶದಿಂದ ತಸ್ತೀಕ್ ನೀಡಲಾಗುತ್ತದೆ.

ವರ್ಷಾಸನ; ಅಂದರೆ, ಕರ್ನಾಟಕ ಭೂ ಸುಧಾರಣೆ ಕಾಯ್ದೆ- ೧೯೬೧ ರಂತೆ ೧-೩-೧೯೭೪ ರಂದು ಜಾರಿಗೆ ಬಂದ ಸರ್ಕಾರದಲ್ಲಿ ಜಮೀನುಗಳು ನಿಹಿತವಾದ ಜಮೀನುಗಳಿಗೆ ವರ್ಷಾಸನ ನಿಗಧಿಗೊಳಿಸಲಾಗುತ್ತದೆ. ದೇವರಾಜ ಅರಸು ಅವರ ಕಾಲದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟ ಸಂಸ್ಥೆಗಳ ನಿರ್ವಹಣೆಗಾಗಿ ಈ ತಸ್ತೀಕ್ ಮತ್ತು ವರ್ಷಾಸನಗಳನ್ನು ನೀಡಲಾಗುತ್ತಿದೆ.

ಹಿಂದೆ ರಾಜ ಮಹಾರಾಜರು ಈ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗೆಂದು ಜಮೀನುಗಳನ್ನು ಇನಾಂ ನೀಡಿದ್ದರು. ಆ ಜಮೀನುಗಳಿಂದ ಬರುವ ಆದಾಯದ ಮೇಲೆ ಆ ಸಂಸ್ಥೆಗಳ ನಿರ್ವಹಣೆ ನಡೆಯುತ್ತಿತ್ತು. ಸರ್ಕಾರ ಆ ಜಮೀನುಗಳನ್ನು ವಶಕ್ಕೆ ಪಡೆದು ಬಡ ರೈತರಿಗೆ ಮಂಜೂರು ಮಾಡಿತ್ತು. ಅದಕ್ಕಾಗಿ ಸರ್ಕಾರ ಈ ಸಂಸ್ಥೆಗಳು ಅಸ್ತಿತ್ವದಲ್ಲಿ ಇರುವವರೆಗೆ ಪರಿಹಾರ ನೀಡುತ್ತವೆ. ಇದು ಸರ್ಕಾರದಿಂದ ನೀಡುವ ಪರಿಹಾರವೇ ಹೊರತು ದೇವಾಲಯಗಳ ಹಣವನ್ನು ಹಂಚುವುದಲ್ಲ.

ದುಷ್ಟರು ಮಾತ್ರ ಈ ವಿಚಾರದಲ್ಲಿ ಜನರಿಗೆ ಸುಳ್ಳು ಹೇಳಿ ರಾಜಕೀಯ ಮಾಡುತ್ತಾರೆ. ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಲ್ಲಿ ಶೇ.೯೦ಕ್ಕಿಂತ ಹೆಚ್ಚು ದರ್ಗಾಗಳೇ ಇವೆ. ಈ ದರ್ಗಾಗಳು ಸಂತರುಗಳ ಸಮಾಧಿಗಳು. ಈ ದರ್ಗಾಗಳಿಗೆ ಹಿಂದೂ-ಮುಸ್ಲಿಂ ಮುಂತಾದ ಸಮುದಾಯಗಳ ಜನರು ಧರ್ಮಾತೀತವಾಗಿ ನಡೆದುಕೊಳ್ಳುತ್ತಾರೆ.


ದೇವಾಲಯಗಳನ್ನು ಸ್ವತಂತ್ರಗೊಳಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಏಕೆ?

ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿ ಒಟ್ಟಾರೆ ೩೪೫೫೮ ದೇವಾಲಯಗಳಿವೆ. ಅವುಗಳ ಆದಾಯವನ್ನು ಆಧರಿಸಿ ಎ,ಬಿ,ಸಿ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರ ಆಧಾರದಂತೆ ಎ ಗುಂಪಿನಲ್ಲಿ ೨೦೫, ಬಿ ಗುಂಪಿನಲ್ಲಿ ೧೩೯ ಮತ್ತು ಸಿ ಗುಂಪಿನಲ್ಲಿ ೩೪೨೧೪ ದೇವಸ್ಥಾನಗಳಿವೆ. ಕುತೂಹಲಕ್ಕೆ ಈ ದೇವಾಲಯಗಳ ಬಳಿ ಎಷ್ಟು ಹಣವಿದೆ ಎಂದು ನೋಡಿದರೆ, ಎ ಗುಂಪಿನ ದೇವಾಲಯಗಳ ಬಳಿ ಉಳಿತಾಯ ಠೇವಣಿ ಮತ್ತು ನಿಶ್ಚಿತ ಠೇವಣಿ ಹಣ ಎರಡೂ ಸೇರಿ ಸುಮಾರು ೧೫೮೦ ಕೋಟಿ ರೂಗಳಷ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಕೌಂಟಿನಲ್ಲಿಯೆ ಸುಮಾರು ರೂ.೪೦೦ ಕೋಟಿ ಹಣವಿದೆ. ಬಿ ಗುಂಪಿನ ದೇವಾಲಯಗಳ ಬಳಿ ೯೮.೬೭ ಕೋಟಿ ಹಣವಿದೆ. ಇದನ್ನು ಹೊರತುಪಡಿಸಿ ಈ ದೇವಾಲಯಗಳ ಬಳಿ ಇರುವ ಆಸ್ತಿ ಮೌಲ್ಯ ಬಹುಶಃ ೧ ಲಕ್ಷ ಕೋಟಿಗೂ ಅಧಿಕವಿರಬಹುದು. ಸಾವಿರಾರು ಎಕರೆ ಭೂಮಿ, ಸಾವಿರಾರು ಕಟ್ಟಡಗಳು ಈ ದೇವಾಲಯಗಳ ಸುಪರ್ದಿಯಲ್ಲಿವೆ. ಒಡವೆಗಳು, ವಸ್ತು, ವಾಹನಗಳು ಇದರಡಿ ಸೇರುತ್ತವೆ.

ಒಂದು ವರ್ಗದ ದುಷ್ಟ ಕಣ್ಣು ಇದರ ಮೇಲೆ ಬಿದ್ದಿದೆ. ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾ ಇಂದು ಶೇ. ೮೦ ರಷ್ಟು ಜನರಿರುವ ಹಿಂದೂಗಳ ಆಸ್ತಿಯನ್ನು ಕಬಳಿಸಿ ಎರಡು- ಮೂರು ಪರ್ಸೆಂಟ್ ಜನರ ಅಧೀನಕ್ಕೆ ತೆಗೆದುಕೊಳ್ಳುವ ಭೀಕರ ಹುನ್ನಾರವಿದು. ಸರ್ಕಾರ ಈ ಕೆಲಸವನ್ನು ಮಾಡಿದ್ದೆ ಆದರೆ ನಾಡಿನ ಒಂದು ಸಾವಿರ ವರ್ಷಗಳ ಜನರ ದೀರ್ಘ ಹೋರಾಟವನ್ನು ಅವಮಾನಿಸಿದಂತಾಗುತ್ತದೆ ಮತ್ತು ದಮನ ಮಾಡಿದಂತಾಗುತ್ತದೆ.

ಸರ್ಕಾರದ ಈ ಹಿಂದೂ ವಿರೋಧಿ, ಧಾರ್ಮಿಕ ಬಂಡವಾಳವಾದಿ ಪರ ಧೋರಣೆಯನ್ನು ಬುದ್ಧಿ, ಪ್ರಜ್ಞೆ ಇರುವ ಜನರೆಲ್ಲ ವಿರೋಧಿಸಬೇಕು.
ಈ ಬಿಜೆಪಿಯ ಮೂಲಭೂತ ಸ್ವಭಾವದಲ್ಲೆ ಸಮಾಜವನ್ನು ಹಿಂದಕ್ಕೆ ಕರೆದುಕೊಂಡು ಹೋಗುವ, ಸಾಮಾಜಿಕ ನ್ಯಾಯವನ್ನು ತೊತ್ತಳ ತುಳಿದು ಹಾಕುವ ದೇಶದ ಬಹುಸಂಖ್ಯಾತರಾದ ಶೂದ್ರರು, ದಲಿತರು, ಮಹಿಳೆಯರನ್ನು ಗುಲಾಮಗಿರಿಗೆ ತಳ್ಳುವ ಅತ್ಯಂತ ನೀಚ ಅಜೆಂಡಾ ಇವರದ್ದಾಗಿದೆ.

ಇದನ್ನು ಸಮಾಜ ಬೇಗ ಅರ್ಥಮಾಡಿಕೊಂಡು ಇವರನ್ನು ತಿಪ್ಪೆಗೆ ಎಸೆಯದಿದ್ದರೆ ಸಮಾಜವು ಶಾಶ್ವತ ಗುಲಾಮಗಿರಿಯ ಕಡೆಗೆ ನಡೆಯುತ್ತದೆ. ಇದರ ಭಾಗವಾಗಿಯೆ ಬಿಜೆಪಿಯವರು ಧರ್ಮವನ್ನು ಬಂಡವಾಳ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ರೂಪಿಸುತ್ತಿದ್ದಾರೆ.

ಸಮಾಜವು ಕೂಡಲೆ ಎದ್ದು ನಿಂತು ಇದನ್ನು ವಿರೋಧಿಸಬೇಕು. ಬಿಜೆಪಿಯು ಬಹುಸಂಖ್ಯಾತ ಹಿಂದೂ ಸಮಾಜದ ಮೇಲೆ ಸಾರಿರುವ ಈ ಸಮರವನ್ನು ಸೋಲಿಸಿ ನಾವು ಜಯಗಳಿಸಬೇಕಾದರೆ, ಯುವಕ ಯುವತಿಯರಾದಿಯಾಗಿ ಪ್ರತಿಯೊಬ್ಬರೂ ಪ್ರಜ್ಞಾವಂತರಾಗಬೇಕು. ಸಾಧ್ಯವಾದ ರೀತಿಗಳಲ್ಲಿ ಪ್ರತಿಭಟಿಸಬೇಕು.

ಬಿಜೆಪಿಯೆಂಬ ಧಾರ್ಮಿಕ ಬಂಡವಾಳವಾದಿ ಹಾಗೂ ಕಾರ್ಪೊರೇಟ್ ಬಂಡವಾಳಿಗರ ಪಕ್ಷವನ್ನು ತಿರಸ್ಕರಿಸಿ ನಾಡು ಮತ್ತು ದೇಶವನ್ನು ಉಳಿಸಬೇಕು. ಹಾಗೆ ಮಾಡದೆ ಹೋದರೆ ಗುಲಾಮಗಿರಿಗೆ ಕೊರಳೊಡ್ಡಬೇಕಾಗುತ್ತದೆ. ಒಂದು ವೇಳೆ ಹಾಗೆ ಕೊರಳೊಡ್ಡಿದ್ದೆ ಆದರೆ ಶರಣರು, ದಾಸರು, ಸಂತರು, ಧಾರ್ಮಿಕ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಕರ್ತೃಗಳು, ದಾರ್ಶನಿಕರು ಮುಂತಾದ ಮನುಷ್ಯ ಪರ ಹೋರಾಟಗಾರರ ಆಶಯಗಳಿಗೆ ನಾವು ದ್ರೋಹ ಬಗೆದಂತಾಗುತ್ತದೆ.

ಕಳೆದ ಒಂದು ಸಾವಿರ ವರ್ಷಗಳಿಂದ ನಮ್ಮ ಹಿರಿಯರು ನಡೆಸಿದ ಹೋರಾಟದಿಂದಾಗಿ ಈ ಮನುವಾದಿ ವಿಷವೃಕ್ಷದ ಬೇರುಗಳು ದುರ್ಬಲವಾಗಿದ್ದವು, ಶಿಥಿಲಾವಸ್ಥೆಯ ಕಡೆಗೆ ತಲುಪಿದ್ದವು.

ಆದರೆ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಸ್ವಾಯತ್ತ ಮಾಡುವುದರ ಮೂಲಕ ಒಣಗಿ ಹೋಗುತ್ತಿದ್ದ ಬೇರುಗಳಿಗೆ ಟಾನಿಕ್ಕು ನೀಡಲು ಹೊರಟಿದೆ. ಮನುವಾದಿ ಸಿದ್ಧಾಂತ ಮತ್ತೆ ಜೀವ ಪಡೆದದ್ದೆ ಆದರೆ ಅದು ರಾಕ್ಷಸ ರೂಪಿಯಾಗುತ್ತದೆ.

ಆದ್ದರಿಂದ ಬಿಜೆಪಿಯ ಈ ಮಾನವ ವಿರೋಧಿ ಕೃತ್ಯವನ್ನು ಪಕ್ಷಾತೀತವಾಗಿ, ಪಂಥಾತೀತವಾಗಿ ಎಲ್ಲರೂ ವಿರೋಧಿಸಿ ನಮ್ಮ ಹಿರಿಯರ ಆಶಯಗಳನ್ನು ಜೀವಂತವಾಗಿ ಉಳಿಸಬೇಕೆಂದು ವಿನಂತಿಸುತ್ತೇನೆ.

key words : Bangalore-Karnataka-bjp-government-temple-congress-siddu-oppose