ಸೋಷಿಯಲ್ ಮೀಡಿಯಾದಲ್ಲಿ ಸರ್ವೆ ಕಮಿಷನರ್ ಮನಿಷ್ ಪರ ಹಿರಿಯ ಐಪಿಎಸ್ ಅಧಿಕಾರಿ ರೂಪ ಬ್ಯಾಟಿಂಗ್.

Bangalore-Karnataka-ips-ias-roopa-manish-mla-jds-sa.ra.mahesh-Mysore

 

ಬೆಂಗಳೂರು, ಸೆ.07, 2021 : (www.justkannada.in news) : ಸರಕಾರಿ ಜಮೀನಿನ ಅಕ್ರಮ ಒತ್ತುವರಿ ಆರೋಪ ಎದುರಿಸುತ್ತಿರುವ ಜೆಡಿಎಸ್ ಶಾಸಕ ಸಾ.ರ.ಮಹೇಶ್ ಮಾಲಿಕತ್ವದ ‘ ಸಾ.ರಾ. ಚೌಲ್ಟ್ರಿ’ ಜಾಗದ ಸರ್ವೆಗೆ ಆದೇಶಿಸಿದ್ದ ಐಎಎಸ್ ಅಧಿಕಾರಿ ಮನಿಷ್ ಮೌದ್ಗಿಲ್ ಪರ ಮಡದಿ, ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ಬ್ಯಾಟ್ ಬೀಸಿದ್ದಾರೆ.

ಈ ಸಂಬಂಧ ಸೋಮವಾರ ರಾತ್ರಿ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವ ರೂಪ ಅವರು ಹೇಳಿರುವುದಿಷ್ಟು..

‘ ದೂರು ಕೊಟ್ಟಾಗ ಅಧಿಕಾರಿಗಳು ಅದರ ತನಿಖೆಯೇ ಮಾಡುವುದಿಲ್ಲ ಎಂದು ಸಾರ್ವಜನಿಕರ ಅಳಲು ಇರುವ ಕಾಲದಲ್ಲಿ, ದೂರು ಬಂದಿದ್ದ ಅರ್ಜಿಯ ಮೇಲೆ ತನಿಖೆ/ ಕಾರ್ಯ ನಿರ್ವಹಿಸುವುದು ಅಧಿಕಾರಿಯ ತಪ್ಪು ಎಂದರೆ ಹೇಗೆ.
ಅವರ ಗಮನಕ್ಕೆ ಬಂದ ಯಾವುದೇ ಅರ್ಜಿಯ ಮೇಲೂ action ತಗೋತಾರೆ Munish Moudgil . ಇವತ್ತು ಈ ಪ್ರಕರಣ ಚರ್ಚೆಯಲ್ಲಿದೆ. ಇದೇ ರೀತಿ ದೂರು ಬಂದ ಪ್ರತಿ ಅರ್ಜಿಯ ಮೇಲೂ, ಯಾರೇ ಅಹವಾಲು ಕೊಟ್ಟರೂ ಅದೆಲ್ಲವನ್ನೂ ಅವರು ತನಿಖೆಗೆ ಆದೇಶಿಸಿದ್ದಾರೆ. ಅದರ ಮಾಹಿತಿ ಯಾರೂ ಕೂಡ RTI ಅಡಿಯಲ್ಲಿ ಪಡೆದು ಕೊಳ್ಳ ಬಹುದು. ಅವರು ಸರ್ವೆ ಕಮಿಷನರ್ ಆಗಿ ಒಂದು ತಿಂಗಳು ಆಯಿತು ಅಷ್ಟೇ. ಅದಕ್ಕೆ ಮುಂಚೆ ಎರಡು ವರ್ಷ ಹಿಂದೆ ಅಲ್ಲಿ ಇದ್ದಾಗ ದಿಶಾಂಕ್ app ಸಮೇತ ಅನೇಕ digitisation ಮಾಡಿದ್ದರು. He neither favours nor disfavours anyone. ಕಾನೂನು ಪರ ಅಧಿಕಾರಿಗಳು ಕೆಲಸ ಮಾಡಬೇಕು. ಮಾಡಿದ್ದಾರೆ.’

ಸರ್ವೆ ಕಮಿಷನರ್ ಮನೀಷ್ ಮೌದ್ಗಿಲ್ ಅವರು ಮೈಸೂರಿನ ದಟ್ಟಗಳ್ಳಿಯಲ್ಲಿರುವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾಲೀಕತ್ವದ ವಿವಾದಿತ ‘ ಸಾ.ರಾ.ಚೌಲ್ಟ್ರಿ’ ಜಾಗದ ಸರ್ವೆಗೆ ಆದೇಶಿಸಿದ ಬೆನ್ನಲ್ಲೇ ಶಾಸಕ ಮಹೇಶ್ ಪತ್ರಿಕಾಗೋಷ್ಠಿ ನಡೆಸಿ ಮನಿಷ್ ವಿರುದ್ಧ ಕಿಡಿ ಕಾರಿದ್ದರು. ಐಎಎಸ್ ಅಧಿಕಾರಿಯ ಸಾಮಾನ್ಯ ಜ್ಞಾನದ ಬಗ್ಗೆ ವ್ಯಂಗ್ಯವಾಡಿದ್ದರು. ಜತೆಗೆ ‘ ಕುಚುಕು ಶಿಷ್ಯೆ’ ರೋಹಿಣಿ ಸಿಂಧೂರಿ ಮಾತು ಕೇಳಿ ಈ ಆದೇಶ ಹೊರಡಿಸಿದ್ದಾರೆ ಎಂದು ಕುಹಕವಾಡಿದ್ದರು. ಇದೇ ವೇಳೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಹ ಸಾ.ರ.ಮಹೇಶ್ ಪರ ಬ್ಯಾಟಿಂಗ್ ಆಡಿ, ಸರ್ವೆ ಕಮಿಷನರ್ ಮನಿಷ್ ಮೌದ್ಗಿಲ್ ಗೆ ಸರ್ವೆ ನಡೆಸಲು ಆದೇಶ ಹೊರಡಿಸಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದರು.

ರಾಜಕಾರಣಿಗಳು ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲುತ್ತಿದ್ದಂತೆ, ಖುದ್ದು ಸರ್ವೆ ಕಮಿಷನರ್ ಮನಿಷ್ ಮೌದ್ಗಿಲ್ ಅವರೇ ತಮಗೆ ಸರ್ವೆ ನಡೆಸಲು ಇರುವ ಕಾನೂನಿನ ಅಧಿಕಾರದ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಿ ಟೀಕಕಾರರ ಬಾಯಿ ಮುಚ್ಚಿಸಿದ್ದರು.
ಇದೀಗ ಮನಿಷ್ ಮಡದಿ, ದಕ್ಷ ಐಪಿಎಸ್ ಅಧಿಕಾರಿ ಎಂದೆನಿಸಿಕೊಂಡಿರುವ ರೂಪ ಮೌದ್ಗಿಲ್, ಪತಿ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರೂಪ ಅವರ ಈ ಹೇಳಿಕೆಗೆ ನೆಟ್ಟಿಗರು ಬೆಂಬಲಿಸಿ ಕಮೆಂಟ್ಸ್ ಮಾಡುತ್ತಿದ್ದಾರೆ.

ಚಾಟಿ ಬೀಸಿದ ನೆಟ್ಟಿಗರು :

ಐಪಿಎಸ್ ರೂಪ ಅವರ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಗೆ ಪೂರಕವಾಗಿ ನೆಟ್ಟಿಗರು ಹಲವಾರು ರೀತಿ ಕಮೆಂಟ್ಸ್ ಮಾಡುತ್ತಿದ್ದಾರೆ. ಜತೆಗೆ ಮನಿಷ್ ಮೌದ್ಗಿಲ್ ಅವರ ಕಾರ್ಯಕ್ಷಮತೆ, ದಕ್ಷತೆ ಬಗೆಗೆ ಉದಾಹರಣೆ ಸಮೇತ ವಿವರಣೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದಾಗ ಸಾರ್ವಜನಿಕರ ಸಂಕಷ್ಠಗಳಿಗೆ ಸ್ಪಂಧಿಸಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ್ಯಪ್ ಅಭಿವೃದ್ಧಿಪಡಿಸಿದ್ದು, ಕೋವಿಡ್ ವೇಳೆ ಸಮರ್ಥವಾಗಿ ನಿರ್ವಹಣೆ ಹೊತ್ತಿದ್ದು ಹೀಗೆ ಹಲವಾರು ಘಟನೆಗಳನ್ನು ಉದಾಹರಣೆ ಸಮೇತ ವಿವರಿಸಿ ಮನಿಷ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಜತೆಗೆ, ಮನಿಷ್ ಮೌದ್ಗಿಲ್ ಅವರನ್ನು ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟ ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದ್ದಾರೆ. ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿಲ್ಲದಿದ್ದರೆ ಸರ್ವೆಗೆ ಯಾಕೆ ಅಂಜಿಕೆ..? ಎಂದು ಪ್ರಶ್ನಿಸಿದ್ದಾರೆ. ಜನಪ್ರತಿನಿಧಿಗಳು ಜನರ ಕಷ್ಟಗಳನ್ನು ಪ್ರತಿನಿಧಿಸಬೇಕೇ ವಿನಃ, ನಿರಂತರವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಸ್ವಂತ ಕಷ್ಟಗಳನ್ನ ಪ್ರತಿನಿಧಿಸುವುದಲ್ಲ ಎಂದು ಕಾಲೆಳೆದಿದ್ದಾರೆ.

key words : Bangalore-Karnataka-ips-ias-roopa-manish-mla-jds-sa.ra.mahesh-Mysore