ಬೆಂಗಳೂರು,ಸೆಪ್ಟಂಬರ್,10,2020(www.justkannada.in): ಮಹಾಲಕ್ಷ್ಮೀ ಲೇ ಔಟ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 67 ನಾಗಪುರದ ಶಾಸಕರ ಭವನದಲ್ಲಿ ಬಿಬಿಎಂಪಿ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಮಹಾನಗರ ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಸಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡರ ಅಶ್ವಾರೂಢ ಕಂಚಿನ ಪ್ರತಿಮೆಗೆ ಸ್ಥಳೀಯ ಶಾಸಕ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ ಗೋಪಾಲಯ್ಯ ಅವರು ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಸಚಿವ ಗೋಪಾಲಯ್ಯ, ವಿಶ್ವಕ್ಕೆ ಐಟಿ ರಾಜಧಾನಿ, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದು ಕರೆಯುವ ಬೆಂಗಳೂರನ್ನ ಕಟ್ಟಿದ್ದು ನಮ್ಮ ಹೆಮ್ಮೆಯ ಪ್ರತೀಕ ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರ ಆಶಯದಂತೆ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಇಂದು ನಾವೆಲ್ಲ ಜೀವಿಸುವ ಈ ನೆಲದಲ್ಲಿ ದಿನವೂ ಜಯಂತಿ ಮಾಡಿದರೆ ತಪ್ಪಾಗಲಾರದು, ನಾವೆಲ್ಲ ಕೆಂಪೇಗೌಡರಿಗೆ ಇಂದು ಅಭಿವಂದನೆ ಸಲ್ಲಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಉಪ ಮಹಾಪೌರರಾದ ಎಸ್ ಹರೀಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಪಾಲಿಕೆ ಸದಸ್ಯರಾದ ಕೆ ವಿ ರಾಜೇಂದ್ರಕುಮಾರ್, ಬೆಂಗಳೂರು ಉತ್ತರ ಬಿಜೆಪಿ ಉಪಾಧ್ಯಕ್ಷರಾದ ಎನ್ ಜಯರಾಮ್, ಹನುಮಂತರಾಯಪ್ಪ, ನಿಸರ್ಗ ಜಗದೀಶ್, ಸ್ಥಳೀಯ ಮುಖಂಡರುಗಳು, ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.
Key words: Bangalore- kempegowda jayanthi-minister-gopalaiah