ಬೆಂಗಳೂರು,ಮಾ,13,2020(www.justkannada.in0: ನಾಡ ಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಜೂನ್ ತಿಂಗಳಿಡೀ ‘ಬೆಂಗಳೂರು ಪೇಟೆ ಹಬ್ಬ’ ಆಯೋಜಿಸುವ ಸಂಬಂಧ ‘ಆರ್ಟ್ ಮಂತ್ರಂ’ ಸಂಸ್ಥೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಪ್ರಾತ್ಯಕ್ಷಿಕೆ ಮೂಲಕ ಶುಕ್ರವಾರ ಮಾಹಿತಿ ನೀಡಿತು.
ಐಟಿ -ಬಿಟಿ ಸಿಟಿ ಎಂದೇ ಹೆಸರು ಮಾಡಿರುವ ಬೆಂಗಳೂರಿನ ಐತಿಹಾಸಿಕ ಹಿನ್ನೆಲೆ ಹಾಗೂ ಅದರ ಸಂಸ್ಕೃತಿಯನ್ನು ಹೊಸಬರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪೇಟೆ ಹಬ್ಬ ಆಯೋಜಿಸುವ ಬಗ್ಗೆ ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಅವರಿಗೆ ಮಾಹಿತಿ ನೀಡಿರುವ ‘ಆರ್ಟ್ ಮಂತ್ರಂ’, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ ನಂತರ ಹಬ್ಬದ ರೂಪುರೇಷೆ ಅಂತಿಮಗೊಳಿಸಲಿದೆ.
ಬೆಂಗಳೂರಿನ ಹಳೆಯ ಪೇಟೆಗಳು, ಸಂಸ್ಕೃತಿಯನ್ನು ಹೊಸದಾಗಿ ಬೆಂಗಳೂರಿಗೆ ಬಂದವರು ಅದರಲ್ಲೂ ವಿಶೇಷವಾಗಿ ಟೆಕ್ಕಿಗಳಿಗೆ ಪರಿಚಯಿಸುವುದೇ ಈ ಬೆಂಗಳೂರು ಪೇಟೆ ಹಬ್ಬದ ಮುಖ್ಯ ಉದ್ದೇಶ. ಸ್ಥಳ ನಿಗದಿ, ಕಾರ್ಯಕ್ರಮಗಳು, ಅಗತ್ಯ ಸೌಕರ್ಯ ಹಾಗೂ ಇನ್ನಿತರ ವಿಷಯಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಮೇಯರ್, ಬಿಬಿಎಂಪಿಯ ಮುಖ್ಯಸ್ಥರು, ಮೆಟ್ರೊ ಅಧಿಕಾರಿಗಳ ಜತೆ ಆರ್ಟ್ ಮಂತ್ರಂ ಚರ್ಚೆ ನಡೆಸಲಿದೆ.
ಪೇಟೆಗಳಲ್ಲಿ ಸಂಭ್ರಮ
ಸುಮಾರು 500 ವರ್ಷಗಳ ಹಿಂದೆಯೇ ನಗರಕ್ಕೆ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟು ಅವರವರ ವೃತ್ತಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರ ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ವಾಣಿಜ್ಯ ವ್ಯವಹಾರದ ದೃಷ್ಠಿಯಿಂದ ಭಾರಿ ಮಹತ್ವ ಪಡೆದಿದ್ದ ಪೇಟೆಗಳನ್ನು ಇಂದಿನ ಯುವ ಜನರಿಗೆ ಪರಿಚಯಿಸಲಿದೆ ಈ ಪೇಟೆ ಹಬ್ಬ.
ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳರ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಕಬ್ಬನ್ ಪೇಟೆ, ಬಿನ್ನಿಪೇಟೆಗಳು ಈಗಲೂ ವ್ಯಾಪಾರ ವಹಿವಾಟಿನ ಕೇಂದ್ರಗಳಾಗಿದ್ದು, ಈ ಪೈಕಿ ಕೆಲವು ಪೇಟೆಗಳಲ್ಲಿ ಉತ್ಸವ ಆಯೋಜಿಸುವ ಬಗ್ಗೆ ಚರ್ಚೆ ನಡೆದಿದೆ.
ಈ ಬಾರಿಯ ಹಬ್ಬದಲ್ಲಿ ಅಕ್ಕಿ ಪೇಟೆಯಲ್ಲಿ ವಿವಿಧ ರೀತಿಯ ಅಕ್ಕಿ ಪ್ರದರ್ಶನ ಮತ್ತು ಮಾರಾಟ, ಕುಂಬಾರರ ಪೇಟೆಯಲ್ಲಿ ಮಡಿಕೆ, ಮಣ್ಣಿನಿಂದ ಮಾಡಿದ ವಸ್ತುಗಳ ಪ್ರದರ್ಶನ, ಮಾರಾಟ, ಮುತ್ಯಾಲಪೇಟೆಯಲ್ಲಿ ಆಭರಣಗಳ ಮಾರಾಟ, ತಿಗಳರ ಪೇಟೆಯಲ್ಲಿ ಉತ್ಸವ ಆಯೋಜಿಸುವ ಚಿಂತನೆ ಇದೆ.
ಸೆಲ್ಫಿ ಪಾಯಿಂಟ್
ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರಿನ 4 ಮುಖ್ಯ ಗಡಿ ಗೋಪುರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ‘ಸೆಲ್ಫಿ’ ಪಾಯಿಂಟ್ ಸ್ಥಾಪಿಸುವ ಉದ್ದೇಶವಿದೆ. ಮೊದಲಿಗೆ ಹಲಸೂರಿನ ಗಡಿ ಗೋಪುರದ ಬಳಿ ವಲಸಿಗರು, ಪ್ರವಾಸಿಗರಿಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸುವ ಮೂಲಕ ಸ್ಥಳದ ಇತಿಹಾಸ ತಿಳಿಸುವ ಕೆಲಸ ಆಗಲಿದೆ.
ಕೆಆರ್ ಮಾರುಕಟ್ಟೆಯಲ್ಲಿ ಸಂತೆ
ಕ ಆರ್ ಮಾರುಕಟ್ಟೆಯಲ್ಲಿ ವಾಣಿಜ್ಯ ಸಂಕೀರ್ಣದ ಮೇಲ್ಮಹಡಿಯಲ್ಲಿ ಗರಡಿ ಮನೆ, ಕರಕುಶಲ ವಸ್ತುಗಳ ಪ್ರದರ್ಶನ, ಚಿತ್ರ ಸಂತೆ ಏರ್ಪಡಿಸಲು ಉದ್ದೇಶಿಸಲಾಗಿದೆ. ಪೇಟೆ ಹಬ್ಬದ ಸಮಾರೋಪದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ಪ್ರಮುಖರು, ನಗರದ ಪೌರ ಕಾರ್ಮಿಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್, ಆರ್ಟ್ ಮಂತ್ರಂ ಸಂಸ್ಥಾಪಕಿ ಜೀಜಾ ಹರಿಸಿಂಗ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಸ್ಟಾರ್ಟ್‌ಅಪ್ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.
Key words: Bangalore- Kempegowda Jayanti –pete habba- festival.