ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪತ್ತೆಯಾಯ್ತು 150 ವರ್ಷದ ಹಳೆಯ ತೆರೆದ ಬಾವಿ…!

 

– ಆಶಾ ಕೃಷ್ಣಸ್ವಾಮಿ
ಬೆಂಗಳೂರು, ಆ.18, 2021 : (www.justkannada.in news) ನಮ್ಮ ದಿನನಿತ್ಯದ ಬಳಕೆಗಾಗಿ ತೆರೆದಬಾವಿಗಳಿಗಿಂತ ಕೊಳವೆಬಾವಿಗಳನ್ನು ಇಷ್ಟಪಡುತ್ತೇವೆ/ಆಯ್ಕೆ ಮಾಡಿಕೊಳ್ಳುತ್ತೇವೆ. ನಾವು ಕೊಳವೆಬಾವಿಗಳ ನಿರ್ವಹಣೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸುತ್ತಿದ್ದೇವೆ, ಆದರೆ ಪಾರಂಪರಿಕವಾಗಿ ಉಪಯೋಗಿಸಿಕೊಂಡು ಬಂದಿರುವ ತೆರೆದ ಬಾವಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ, ಬೆಂಗಳೂರಿನ ಮಟ್ಟಿಗಂತೂ ಇದು ನಿಜ. ನಮ್ಮ ಈ ಆಯ್ಕೆ ಸರಿಯಾದುದಲ್ಲ. ರಾಜಧಾನಿಯ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿರುವ ದಶಕಗಳಷ್ಟು ಹಳೆಯದಾದ ತೆರೆದ ಬಾವಿಗಳು ಈಗ ಪುನಶ್ಚೇತನದ ಕಾಯಕಲ್ಪವನ್ನು ಕಾಣುತ್ತಿವೆ. ಇಲ್ಲಿ ಐದು ತೆರೆದ ಬಾವಿಗಳಿವೆ. ಪ್ರತಿಯೊಂದೂ ಸುಮಾರು 60-70 ವರ್ಷಗಳಷ್ಟು ಹಳೆಯದಿರಬಹುದು. ಅವುಗಳಲ್ಲಿ ಮೂರು ಬಾವಿಗಳು ಸುಸ್ಥಿತಿಯಲ್ಲಿದ್ದು ಅಂತರ್ಜಲ ಮರುಪೂರಣಕ್ಕೆ ಬಳಕೆಯಾಗುತ್ತಿವೆ.


ಈ ಉದ್ಯಾನವನದ ತೆರೆದಬಾವಿಗಳಿಗೆ ಕ್ರಮಸಂಖ್ಯೆಗಳನ್ನು ನೀಡಲಾಗಿದೆ. ಸನ್ ಡಯಲ್ ಪಾರ್ಕ್ ಬಳಿ ಇರುವ ಎರಡನೆಯ ತೆರೆದ ಬಾವಿಯ ಕಸಕಡ್ಡಿ ತೆಗೆದು ಹೂಳೆತ್ತಲಾಗಿದೆ. ಮೂರನೆಯದನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಎರಡು ಸರ್ಕಾರೇತರ (NGO) ಸಂಸ್ಥೆಗಳ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆಯೆಂಬುದು ಗಮನಾರ್ಹವಾದುದು.
‘ಸೇ ಟ್ರೀಸ್’ ಮತ್ತು ‘ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್’ ಎಂಬವೇ ಆ ಎರಡು ಸರ್ಕಾರೇತರ ಸಂಸ್ಥೆಗಳು. ಪುನಶ್ಚೇತನಗೊಂಡ ಬಾವಿಯ ವ್ಯಾಸ/ಅಗಲ 10 ಅಡಿ ಮತ್ತು ಆಳ ಸುಮಾರು 30 ಅಡಿಯಷ್ಟು ಇದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿಯ ಅನುಸಾರ ಹಣವೆಚ್ಚಮಾಡದೇ ಇದ್ದಿದ್ದರೆ ಈ ಬಾವಿಗಳ ಹೂಳೆತ್ತುವುದು ಆಗುತ್ತಿರಲಿಲ್ಲ. ಈ ಕಲ್ಲಿನ ಗೋಡೆಯ ಬಾವಿಗಳಲ್ಲಿ ಬಹಳ ವರ್ಷಗಳ ಕಾಲ ಕಸಕಡ್ಡಿ ರಾಶಿ ಹಾಕಲಾಗುತ್ತಿತ್ತು. ಕಟ್ಟಡಗಳ ಅವಶೇಷಗಳು, ತಿಪ್ಪೆ, ಪ್ಲ್ಯಾಸ್ಟಿಕ್ ಬಾಟಲಿಗಳು ಮತ್ತು ಗಾಜಿನ ಬಾಟಲಿಗಳನ್ನು ಹಿಂದೆ ಮುಂದೆ ಯೋಚಿಸದೇ ಇಲ್ಲಿ ತಂದು ಎಸೆಯಲಾಗುತ್ತಿತ್ತು. ಇಲ್ಲಿ ಭೇಟಿ ನೀಡುವ ಯಾರ ಗಮನಕ್ಕೂ ಈ ಸುಂದರವಾದ ಬಾವಿ ಬಂದಿರಲಿಲ್ಲ. ಈಗ ಈ ಬಾವಿಯಲ್ಲಿದ್ದ ಟ್ರಕ್ಕುಗಟ್ಟಲೆ ಕೊಳಕು ಕಸಕಡ್ಡಿಗಳನ್ನು ತೆಗೆದು ಬೇರೆಡೆ ಸಾಗಿಸಲಾಗಿದೆ.

ಬಾವಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಪುನರಭಿವೃದ್ಧಿಗೊಳಿಸುವುದೇ ಮುಂತಾದ ಪ್ರಾಥಮಿಕ ಕೆಲಸಗಳನ್ನು ರಾಮಕೃಷ್ಣಪ್ಪ ಕೆ.ಆರ್. ಇವರ ತಂಡಕ್ಕೆ ವಹಿಸಲಾಗಿತ್ತು. ಬಾವಿಗಳನ್ನು ಸ್ವಚ್ಛಗೊಳಿಸುವುದು, ಕಲುಷಿತ ನೀರನ್ನು ಶುದ್ಧೀಕರಿಸುವುದು ಅವರ ಕೆಲಸವಾಗಿತ್ತು. ಹದಿನೈದು ದಿನಗಳ ಕಾಲ ಅವರು ತಮ್ಮ ತಂಡದೊಂದಿಗೆ ಹೂಳು ತೆಗೆಯುವುದು, ಒದ್ದೆ ಕಸ, ಕಟ್ಟಡಗಳ ಅವಶೇಷ, ಗಾಜಿನ ಮತ್ತು ಪ್ಲ್ಯಾಸ್ಟಿಕ್ ಬಾಟಲಿಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದರು. ಆಗ ನೀರಿನ ಮಟ್ಟ ಎಂಟು ಅಡಿಗಳಿಗೇರಿತು. “ ಈ ನೀರಿನ ಮಟ್ಟ ಮಳೆಗಾಲದ ಸೆಪ್ಟಂಬರ್ ಹೊತ್ತಿಗೆ ಇನ್ನೂ ಏರುತ್ತದೆ.” ಎಂದು ರಾಮಕೃಷ್ಣಪ್ಪ ಹೇಳಿದರು.

ಉದ್ಯಾನವನದ ಎಲ್ಲಾ ಐದು ಬಾವಿಗಳಲ್ಲಿ ನೀರಿನ ಉತ್ಪತ್ತಿಯಾಗುತ್ತಿದೆ. ದಿನವೊಂದಕ್ಕೆ ಸುಮಾರು 10000ದಿಂದ 50000 ಲೀಟರುಗಳಷ್ಟು ನೀರು ಬರುತ್ತಿದೆ. ಈ ಬಾವಿಗಳು ಬಹಳ ಹಳೆಯವು-ಬಹುಶಃ 150 ವರ್ಷಗಳಷ್ಟು ಹಳೆಯವು. “ ಈಗಾಗಲೇ ಇರುವಂತಹ ಬಾವಿಗಳನ್ನು ಹಾಳಾಗಲು ಬಿಟ್ಟು, ಕೊಳವೆ ಬಾವಿಗಳಿಗೆ ಆದ್ಯತೆ ನೀಡಿ ಅವುಗಳನ್ನು ಉಪಯೋಗಿಸುವುದು ಅಷ್ಟೊಂದು ವಿವೇಕದ ನಡೆಯಲ್ಲ” ಎಂದು ಅವರು ಹೇಳಿದರು. ಬಾವಿ ಸಂಖ್ಯೆ 2 ಅನ್ನು ಮರಳಿ ಹಿಂದಿನ ಸ್ಥಿತಿಗೆ ತಂದುದಕ್ಕಾಗಿ ಅವರಿಗೆ 3.5 ಲಕ್ಷ ಪಾವತಿಯಾಗಿದೆ ಎಂದು ಅವರೆಂದರು.

ಈ ಬಾವಿಯ ನೀರಿನ ಸ್ಥಿರ ಪರಿಮಾಣ 64000 ಲೀಟರುಗಳು ಎಂದು ‘ದಿ ಬಯೋಮ್ ಎನ್ವಿರಾನ್ಮೆಂಟ್’ ಟ್ರಸ್ಟಿನ ಜಾಲತಾಣ ಹೇಳುತ್ತಿದೆ. ಮುಚ್ಚಿಹೋಗಿದ್ದ ಈ ಬಾವಿಯನ್ನು ಪುನರುಜ್ಜೀವನಗೊಳಿಸಿದ ನಂತರ 5 ಅಡಿಯಷ್ಟು ನೀರಿನಲ್ಲಿ, ಹೆಚ್ಚು ಆಳವಿಲ್ಲದ ನೀರಿನ ಬಂಡೆ ಅಲ್ಲಿ ಇದ್ದಿತ್ತು ಎಂಬುದರ ಕುರುಹು ಕಂಡುಬಂದಿತು. ಈ ಟ್ರಸ್ಟ್ ಹೇಳುವಂತೆ ಇದರ ಉದ್ದೇಶ ಅಂತರ್ಜಲ, ಕಡಮೆ ಆಳದಲ್ಲಿನ ನೀರಿನ ಬಂಡೆ ಮತ್ತು ತೆರೆದ ಬಾವಿಗಳ ಪರಸ್ಪರ ಸಂಬಂಧದ ಬಗ್ಗೆ ಅರಿವು ಮೂಡಿಸುವುದೇ ಆಗಿದೆ.

ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ ಜಗದೀಶ್ ಅವರು ಲಾಲ್ ಬಾಗ್ ನಿರ್ವಹಣೆ ಮಾಡುವುದು ತಮ್ಮ ಅತ್ಯಂತ ಇಷ್ಟದ ಕೆಲಸವೂ ಹೌದು ತಮ್ಮ ಉದ್ಯೋಗವೂ ಆಗಿದೆ ಎಂದರು. 240 ಎಕರೆಗಳ ಈ ಹಸಿರು ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ. ಈ ಉದ್ಯಾನವನಕ್ಕೆ ಪ್ರತೀದಿನ ಸುಮಾರು 15 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ನೀರಿನ ಸಂರಕ್ಷಣೆಗಾಗಿ ಸ್ವಯಂಪ್ರೇರಿತ ವಿಧಾನಗಳಿಂದ ಸದ್ಯಕ್ಕೆ ಅಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಮೊದಲನೆಯದಾಗಿ, ಸಂಸ್ಕರಿಸಿದ ಕೊಳಚೆನೀರು ಬಳಸಲಾಗುತ್ತಿದೆ, ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಲಾಗಿದೆ, ಮತ್ತು ಮಳೆನೀರುಕೊಯ್ಲಿನ ಮೂಲಕ ಅಂತರ್ಜಲ ಮಟ್ಟ ಏರಿದ ಪರಿಣಾಮವೇ ಆ ವಿಧಾನಗಳು. 180 ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಮಳೆನೀರು ಸಂಗ್ರಹಿಸಿದ್ದರಿಂದ ಕಳೆದ 18 ತಿಂಗಳುಗಳಲ್ಲಿ ಮರಗಳ ಆರೋಗ್ಯ ಗಮನಾರ್ಹವಾಗಿ ಸುಧಾರಿಸಿದೆ. ಇನ್ನೂ 250 ಹೊಂಡಗಳನ್ನು ತೋಡಲಾಗುವುದು ಎಂದರು.

ತೆರೆದ ಬಾವಿಗಳ ಸಂರಕ್ಷಣೆಯ ಬಗ್ಗೆ ಜಗದೀಶ್ ಅವರು ಹೇಳುವುದೇನೆಂದರೆ “ ಸೇ ಟ್ರೀಸ್ ಮತ್ತು ಬಯೋಮ್ ಇವೆರಡೂ ಸಂಸ್ಥೆಗಳು ತೆರೆದ ಬಾವಿಗಳನ್ನು ಪುನರುಜ್ಜಿವನಗೊಳಿಸಲು ಒಟ್ಟಾಗಿ ಕೆಲಸ ಮಾಡಿವೆ. BOSCH, ಯುನೈಟೆಡ್ ವೇ ( NGO) ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ, ಕೆಂಗಲ್ ಹನುಮಂತಯ್ಯ ಮತ್ತು ಎಂ ಎಚ್, ಮರಿಗೌಡರ ಅವಧಿಯಲ್ಲಿ ಅಂದಾಜು 140 ಎಕರೆ ಪ್ರದೇಶವನ್ನು ಲಾಲ್ ಬಾಗ್ ಗೆ ಸೇರಿಸಲಾಗಿದೆ. ಸಿದ್ಧಾಪುರದ ತೆರೆದ ಬಾವಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಲಾಲ್ ಬಾಗ್ ವ್ಯಾಪ್ತಿಯಲ್ಲಿ ಬರುತ್ತವೆ. ಮೂರು ಬಾವಿಗಳು ಇನ್ನೂ ಉಪಯೋಗಿಸಲ್ಪಡುತ್ತಿವೆ. ಉಳಿದ ಎರಡನ್ನು ಪುನರುಜ್ಜೀವನಗೊಳಿಸಲಾಗಿದೆ. ಅವು ಅಂತರ್ಜಲ ಮರುಪೂರಣ ಮಾಡುವುದಕ್ಕೆ ಬಳಕೆಯಾಗುತ್ತವೆ. ಬಹುಆಯಾಮಗಳ ವಿಧಾನಗಳಿಂದ ಜಲಮೂಲಗಳನ್ನು ಸಂರಕ್ಷಿಸುವುದಕ್ಕೆ ಸಹಾಯವಾಗುತ್ತದೆ ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸುತ್ತಾರೆ.

ಈಗ ಜಗದೀಶ್ ಅವರು ಮರು ನಿರ್ಮಾಣಗೊಂಡ ‘ ಕೃಂಬಿಗಲ್ ಹೌಸ್’ ಗೆ ಅಂತಿಮ ಮೆರುಗು/ರೂಪು ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲಿ ಲಾಲ್ ಬಾಗ್ ನ ವರ್ಚ್ಯುಯಲ್ ವಸ್ತುಸಂಗ್ರಹಾಲಯ ಬರಲಿದೆ, ಉದ್ಯಾನವನಕ್ಕೆ ಭೇಟಿ ನೀಡುವವರಿಗಾಗಿ ಒಂದು ಆಡಿಯೋ ವಿಶ್ಯುವಲ್ ಸಾಕ್ಷ್ಯಚಿತ್ರವೂ ತಯಾರಾಗುತ್ತಿದೆ.

ಕನ್ನಡ ಅನುವಾದ: ಕೆ ಪದ್ಮಾಕ್ಷಿ

KEY WORDS : BANGALORE-LALBAGH-WELLS-150-YEARS-OLD-FOUND

 

ENGLISH SUMMARY : 

 

A rebirth for Lalbagh open wells

  • Asha Krishnaswamy
    Bengaluru

For our utilities, we prefer borewells over open wells. We spend lakhs of rupees on borewell maintenance while ignoring traditional open wells. This is particularly true in Bengaluru. Our preference is incorrect. Lalbagh Botanical Garden in the capital, on the other hand, is seeing the rejuvenation of decades-old open wells. There are five wells here, each of which could be 60 to 70 years old. Three of these are in good condition and serve as groundwater recharge points. The other two are witnessing rebirth.

The garden’s open wells have been given numbers. The second open well, near Sun Dial Park, has been unclogged, and the third is being resurrected. This has been made possible thanks to the efforts of two non-governmental organisations (NGOs): SayTrees and Biome Environmental Trust. The revitalised well has a diameter of 10 feet and a depth of nearly 30 feet. But for the funding under corporate social responsibility, the wells would not have been desilted. For many years, the stone wall well had turned into a dumping ground. Debris, wet garbage, plastic bottles, and glass bottles were dumped here thoughtlessly. This beautiful well was barely noticed by visitors. Truckloads of filth have been hauled away.

The groundwork, which included cleaning and redeveloping the wells, was entrusted to a team led by Ramakrishnappa K R. His area of work is to clean and decontaminate wells. He and his team worked for 15 days to remove the silt, wet trash, debris, glass, and plastic bottles. The water level has risen to 8 feet. “The level will rise during the September rainy season.” All five wells in the garden are producing a sufficient amount of water. It ranges from 10,000 to 50,000 liters per day. These are very old – possibly 150 years old. “It is not prudent to choose borewells while abandoning existing wells,” he says. He said nearly Rs 3.5 lakh was paid to him for restoring the well Nos 2.

The Biome Environment Trust website says that the static volume of the well is 64,000 liters. After the rejuvenation of the closed well, 5ft of water was seen indicating the presence of a shallow aquifer. The objective was to create awareness about the connection among groundwater, shallow aquifers, and open wells, the Trust says.

Dr. M Jagadeesh, Joint Director, Horticulture Department, considers maintaining Lalbagh to be a passion as well as a profession. Many steps are being taken to increase the availability of water in these 240 acres of greenery. Every day, the garden requires approximately 15 lakh lights. Because of a proactive method for water preservation, there is no water shortage at the present. This includes primarily using sewage-treated water, installing sprinkler systems, and increasing groundwater levels through rainwater harvesting. Besides that, the open wells are receiving attention. The health of the trees has improved significantly in the last 18 months as a result of rainwater percolation caused by the 180 pits dug. Another 250 pits would be added, he says.

When it comes to the preservation of open wells, Jagadeesh says, “SayTrees and Biome have worked together to resurrect the open wells. The pits were dug in collaboration with BOSCH, United Way (an NGO), and the horticulture department. Approximately 140 acres were added to the old Lalbagh during the tenures of Kengal Hanumanthaiah and M H Marigowda. Even the open wells of Siddapura and surrounding areas came under the ambit of Lalbagh. While three are still functional, the remaining two have been restored. They would serve as groundwater rechargers. A multidimensional approach would be helpful to enhance and conserve the water table,” he contends.

Jagadeesh is now giving final touches to the rebuilt Krumbiegel House which is going to house a virtual museum on Lalbagh. An audio-visual documentary is also getting ready to educate visitors to the Garden.