ಮೈಸೂರು, ಅ.09, 2021 : (www.justkannada.in news) : ವಿಧಾನ ಮಂಡಲದ ಸಮಿತಿಗಳು ಭೇಟಿ/ಅಧ್ಯಯನ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಂಥಹ ಸಮಿತಿಗಳನ್ನು ಸ್ವಾಗತಿಸುವ ಸಂಬಂಧ ಕೂಡಲೇ ಸರಕಾರ ಶಿಷ್ಠಾಚಾರ ಕ್ರಮಗಳ ಬಗ್ಗೆ ಸುತ್ತೂಲೆ ಹೊರಡಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
ಹಕ್ಕು ಬಾಧ್ಯತೆ ಗಳ ಸಮಿತಿ ಎದುರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿ ವಿಚಾರಣೆ ನಡೆಸಿದ ವೇಳೆ ಸರಕಾರದ ಶಿಷ್ಠಾಚಾರ ಕ್ರಮಗಳೇ ಇಲ್ಲದಿರುವುದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸಮಿತಿ ಶಿಷ್ಠಾಚಾರ ಕ್ರಮಗಳ ಬಗ್ಗೆ ಸುತ್ತೂಲೆ ಹೊರಡಿಸಲು ಶಿಫಾರಸ್ಸು ಮಾಡಿದೆ.
ವಿಧಾನ ಮಂಡಲದ ಸಮಿತಿಗಳು ಭೇಟಿ/ಅಧ್ಯಯನ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಯಾವ ಹಂತದ ಅಧಿಕಾರಿಗಳು ಸ್ವಾಗತಿಸಬೇಕೆಂಬುದರ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಶಿಷ್ಠಾಚಾರ ಕ್ರಮಗಳ ಬಗ್ಗೆ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಮೂದಿಸಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸಮಿತಿ, ಆದುದರಿಂದ ಈ ಬಗ್ಗೆ ಪರಿಶೀಲಿಸಿ, ಸ್ಪಷ್ಟ ಮಾರ್ಗಸೂಚಿಗಳನ್ನು ಕೂಡಲೇ ಹೊರಡಿಸುವಂತೆ ಸಮಿತಿಯು ಶಿಫಾರಸ್ಸು ಮಾಡಿದೆ.
ಜತೆಗೆ, ದಿನಾಂಕ:21.04,2021 ರಂದು ನಡೆದ ಹಕ್ಕುಬಾಧ್ಯತೆಗಳ ಸಮಿತಿ ಮುಂದೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ರವರು ಹಾಜರಾಗಿ ಯಾವುದೇ ಸಮಿತಿಗಾಗಲೇ, ಶಾಸಕರೊಂದಿಗೆ ಆಗಲೇ ಅಗೌರವ ತೋರುವ ಉದ್ದೇಶವಿಲ್ಲ, ಎಲ್ಲರೊಂದಿಗೂ ಗೌರವದೊಂದಿಗೆ ನಡೆದುಕೊಂಡು ಹೋಗುತ್ತೇನೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿಯಮದಂತ ಶಿಷ್ಠಾಚಾರ ಪಾಲಿಸುತ್ತೇನೆ ಎಂದು ಹೇಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಮುಕ್ತಾಯಗೊಳಿಸಲು ಸಮಿತಿ ಶಿಫಾರಸ್ಸು ಮಾಡಿತು.
key words : bangalore-mysore-rohini-sindoori-dc