ಬೆಂಗಳೂರು, ಅಕ್ಟೋಬರ್ 20, 2021 (www.justkannada.in): ಬೆಂಗಳೂರು ಮೂಲದ ಡಿಜಿಟಲ್ ಪಾವತಿಗಳ ವೇದಿಕೆ ‘ಫೋನ್‌ಪೇ,’ ಏಪ್ರಿಲ್-ಸೆಪ್ಟೆಂಬರ್ ೨೦೨೧ರ ಅವಧಿಯಲ್ಲಿ ಭಾರತದಲ್ಲಿ ನಡೆದಿರುವಂತಹ ಒಟ್ಟು ಯುಪಿಐ ಪಾವತಿಗಳ ಪೈಕಿ ಶೇ.೪೬.೭%ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ, ಇದೇ ಅವಧಿಯಲ್ಲಿ ಶೇ.೩೭.೬% ಮಾರುಕಟ್ಟೆ ಪಾಲನ್ನು ಹೊಂದಿದ ಗೂಗಲ್ ಪೇ ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ. ಗೂಗಲ್ ಪೇ ಏಪ್ರಿಲ್-ಸೆಪ್ಟೆಂಬರ್ ೨೦೨೦ರಲ್ಲಿ ಶೇ.೪೪.೩% ಅನ್ನು ಹೊಂದಿದ್ದು, ಈ ವರ್ಷ ೬೭೦ ಅಂಕಗಳಷ್ಟು ಇಳಿಕೆ ಕಂಡಿದೆ.
ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ-ಎನ್‌ಪಿಸಿಐನ (National Payments Corporation of India’s (NPCI)) ದತ್ತಾಂಶಗಳ ಪ್ರಕಾರ, ೨೦೨೧ರ ಹಣಕಾಸು ವರ್ಷದಲ್ಲಿ ಗೂಗಲ್ ಪೇ ಒಟ್ಟು ಯುಪಿಐ ಪಾವತಿಗಳ ಪೈಕಿ ಶೇ.೪೪%ರಷ್ಟು ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಂತಹ ‘ಫೋನ್‌ಪೇ’ಗಿಂತ ೨-೩ ಶೇಕಡವಾರು ಅಂಕಗಳೊಂದಿಗೆ ಮಾರುಕಟ್ಟೆ ಪಾಲಿನ ಪ್ರಕಾರ ಡಿಜಿಟಲ್ ವ್ಯಾಲೆಟ್ ವೇದಿಕೆಯಲ್ಲಿ ಮೊದಲ ಸ್ಥಾನದಲ್ಲಿತ್ತು.
ಆದರೆ ಫೋನ್ ಪೇ ಅಕ್ಟೋಬರ್ ೨೦೨೦ ರಿಂದ ಮಾರ್ಚ್ ೨೦೨೧ರ ಅವಧಿಯಲ್ಲಿ ಶೇ.೪೧.೨ ಮಾರುಕಟ್ಟೆ ಪಾಲನ್ನು ಹೊಂದಿದ್ದಂತಹ ಗೂಗಲ್ ಪೇ ಅನ್ನು ಹಿಂದಿಕ್ಕಿ ಶೇ.೪೪.೩ರಷ್ಟು ಮಾರುಕಟ್ಟೆ ಪಾಲನ್ನು ಕಬಳಿಸುವ ಮೂಲಕ ಭಾರತದ ಅತ್ಯಂತ ಆದ್ಯತೆಯ ಡಿಜಿಟಲ್ ಪಾವತಿ ವೇದಿಕೆಯಾಗಿ ಹೊರಹೊಮ್ಮಿದೆ.
ಫೋನ್ ಪೇ ಹಾಗೂ ಗೂಗಲ್ ಪೇಗಳು ಒಟ್ಟು ಯುಪಿಐ ಪಾವತಿಗಳ ಕ್ಷೇತ್ರದ ಪೈಕಿ ಶೇ.೮೪.೩%ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. H1FY22 ಅವಧಿಯಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇಗಳ ಮೂಲಕ ಭಾರತದಲ್ಲಿ ನಡೆದಿರುವಂತಹ ಒಟ್ಟು ಯುಪಿಐ ಪಾವತಿಗಳ ಮೌಲ್ಯ ರೂ.೨೩.೩೭ ಲಕ್ಷ ಕೋಟಿಗಳಾಗಿದ್ದು, ಇದು H1FY21 ಅವಧಿಯಲ್ಲಿ (ರೂ.೧೩.೩೩ ಲಕ್ಷ ಕೋಟಿ) ಎರಡೂ ಯುಪಿಐ ಪಾವತಿ ವೇದಿಕಗಳ ಮೂಲಕ ಮಾಡಿರುವಂತಹ ಒಟ್ಟು ಪಾವತಿಗಳ ಹೋಲಿಕೆಯಲ್ಲಿ ೨.೨ ಪಟ್ಟು ಹೆಚ್ಚಾಗಿದೆ.
ಸೆಪ್ಟೆಂಬರ್ ೨೦೨೧ರಲ್ಲಿ ಎಲ್ಲಾ ಒಟ್ಟು ಡಿಜಿಟಲ್ ಪಾವತಿಸುವ ವೇದಿಕೆಗಳ ಮೂಲಕ ಆಗಿರುವಂತಹ ಒಟ್ಟು ಯುಪಿಐ ಪಾವತಿಗಳ ಮೌಲ್ಯ ರೂ.೬.೬೪ ಕೋಟಿಗಳು, ಅಂದರೆ ಸೆಪ್ಟೆಂಬರ್ ೨೦೨೦ರ ಅವಧಿಯಲ್ಲಿ ಇದ್ದಂತಹ ಒಟ್ಟು ಮೌಲ್ಯಕ್ಕಿಂತ (ರೂ.೩.೨೯ ಲಕ್ಷ ಕೋಟಿ) ಎರಡು ಪಟ್ಟು ಹೆಚ್ಚಾಗಿದೆ.
ಫೋನ್‌ಪೇ ಜೊತೆಗೆ, ‘ಪೇಟಿಎಂ ಪಾವತಿ ಬ್ಯಾಂಕ್ ಸಹ ಮಾರುಕಟ್ಟೆ ಪಾಲಿನಲ್ಲಿ, ಹಿಂದಿನ ವರ್ಷದ ಅವಧಿಯ ಹೋಲಿಕೆಯಲ್ಲಿ ಈ ಹಣಕಾಸು ವರ್ಷದ ಮೊದಲ ಅರ್ಧ ವಾರ್ಷಿಕ ಅವಧಿಯಲ್ಲಿ ಉತ್ತಮ ಸ್ಥಾನವನ್ನೇ ಪಡೆದಿದೆ. ಪೇಟಿಎಂನ ಯುಪಿಐ ಪಾವತಿಗಳ ಮಾರುಕಟ್ಟೆ ಪಾಲು ಏಪ್ರಿಲ್-ಸೆಪ್ಟೆಂಬರ್ ೨೦೨೧ರ ಅವಧಿಯಲ್ಲಿ ಸರಾಸರಿ ಶೇ.೮.೬ರಷ್ಟಿದ್ದರೆ, ಏಪ್ರಿಲ್-ಸೆಪ್ಟೆಂಬರ್ ೨೦೨೦ರಲ್ಲಿ ಅದು ಶೇ.೭.೨೫%ರಷ್ಟಿತ್ತು.
‘ಕ್ರೆಡ್’, ಎಂಬ ಹೆಸರಿನ ಫಿನ್ ಟೆಕ್ ಕಂಪನಿಯು ೨೦೨೧ರ ಹಣಕಾಸಿನ ವರ್ಷದ ಮೊದಲ ಅರ್ಧ ವಾರ್ಷಿಕ ಅವಧಿಯಲ್ಲಿ ಇದ್ದಂತಹ ಕೇವಲ ಶೇ.೦.೪೨%ರಷ್ಟು ಮಾರುಕಟ್ಟೆ ಪಾಲಿನ ಹೋಲಿಕೆಯಲ್ಲಿ ೨೦೨೧-೨೨ರ ಹಣಕಾಸು ವರ್ಷದದಲ್ಲಿ ಶೇ.೧.೨೬%ಕ್ಕೆ ಏರಿಕೆ ಕಾಣುವ ಮೂಲಕ ಮೂರುಪಟ್ಟು ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಂಡಿದೆ.
ಈ ಕ್ಷೇತ್ರದಲ್ಲಿ ಕಳಪೆ ಪ್ರದರ್ಶನ ನೀಡಿರುವ ವೇದಿಕೆಗಳೆಂದರೆ BHIM. ೨೦೨೨ರ ಹಣಕಾಸು ವರ್ಷದ ಮೊದಲ ಅರ್ಧ ವರ್ಷದ ಅವಧಿಯಲ್ಲಿ ಇದರ ಮಾರುಕಟ್ಟೆ ಪಾಲು ಹಿಂದಿನ ವರ್ಷದಲ್ಲಿದ್ದಂತಹ ಶೇ.೨.೫೫%ರಲ್ಲಿ ಅರ್ಧ, ಅಂದರೆ ಶೇ.೧.೨೭ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅರ್ಧಕ್ಕೆ ಇಳಿದಿದೆ.
ಸೆಪ್ಟೆಂಬರ್ ೨೦೨೧ರಲ್ಲಿ ಯುಪಿಐನಲ್ಲಿ ಲೈವ್ ಇದ್ದಂತಹ ಒಟ್ಟು ಬ್ಯಾಂಕುಗಳ ಸಂಖ್ಯೆ ೨೫೯, ಸೆಪ್ಟೆಂಬರ್ ೨೦೨೧ರಲ್ಲಿ ೩,೬೫೪.೩೦ ದಶಲಕ್ಷದಷ್ಟು ದಾಖಲೆ ವಹಿವಾಟುಗಳು ನಡೆದಿವೆ. ಆಗಸ್ಟ್ ೨೦೨೧ರಲ್ಲಿ ಒಟ್ಟು ೨೪೯ ಬ್ಯಾಂಕುಗಳ ಲೈವ್ ಇದ್ದು, ಆ ತಿಂಗಳ ಒಟ್ಟು ಯುಪಿಐ ವಹಿವಾಟುಗಳು ೩,೫೫೫.೫೫ ದಶಲಕ್ಷದಷ್ಟಿತ್ತು.
ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಈ ಮೂರು ಮೊದಲ ಅತ್ಯುತ್ತಮ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಹೊರತುಪಡಿಸಿದಂತೆ ಯುಪಿಐನಲ್ಲಿ ಲೈವ್ ಇರುವಂತಹ ಉಳಿದ ೨೫೬ ಬ್ಯಾಂಕುಗಳು, ಸೆಪ್ಟೆಂಬರ್ ೨೦೨೧ರಲ್ಲಿ ನಡೆದಿರುವಂತಹ ಒಟ್ಟು ಯುಪಿಐ ಪಾವತಿಗಳ ಪ್ರಮಾಣದ ಪೈಕಿ ಶೇ.೭%ರಷ್ಟು ಪಾಲನ್ನು ಹೊಂದಿವೆ.
Key words: Bangalore-Phone Pay – first -overtake -Google Pay – digital- payments sector.