ನಿವೃತ್ತ ಪೊಲೀಸ್ ಅಧಿಕಾರಿಯಿಂದ ‘ಖಾಕಿ ಪವರ್ ‘ ಮಿಸ್ ಯೂಸ್ : ಪೊಲೀಸ್ ಆಯುಕ್ತರಿಗೆ ಉದ್ಯಮಿಯಿಂದ ದೂರು.

Bangalore-police-complaint

 

ಬೆಂಗಳೂರು, ಜು.24, 2022 : (www.justkannada.in news) ಉದ್ಯಮಿಯೊಬ್ಬರು ಇತ್ತೀಚೆಗೆ ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದು, ಶಿವಪ್ರಕಾಶ್ ಎಂಬ ವ್ಯಕ್ತಿಯೊಬ್ಬರು ತಾನು ಪೊಲೀಸ್ ಠಾಣಾಧಿಕಾರಿ ಎಂದು ಹೇಳಿಕೊಂಡು ಖಾಸಗಿ ಫೈನಾನ್ಸ್ ಸಂಸ್ಥೆ ನಿಯೋಗ್ರೋತ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ನಿಂದ ಪಡೆದುಕೊಂಡಿರುವ ಸಾಲವನ್ನು ತಕ್ಷಣವೇ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಶಿವಪ್ರಕಾಶ್, ಪೊಲೀಸ್ ಸೇವೆಯಿಂದ ನಿವೃತ್ತರಾಗಿದ್ದು, ನಿವೃತ್ತಿ ಬಳಿಕ ಅವರು ಒಂದು ಖಾಸಗಿ ಫೈನಾನ್ಸ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಮುಂದೆ ತಾನಿನ್ನೂ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದೇನೆ ಎಂಬಂತೆ ತೋರಿಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸ್ ಕಮಿಷನರ್ ಅವರಿಗೆ ಬರೆದಿರುವ ದೂರಿನಲ್ಲಿ ದೂರುದಾರ ಉದ್ಯಮಿ ನಿವೃತ್ತ ಪೊಲೀಸ್ ಶಿವಪ್ರಕಾಶ್ ಪ್ರತಿದಿನ ಉದ್ಯಮಿ ಇರದ ಸಮಯದಲ್ಲಿ ಅವರ ಮನೆಗೆ ಬಂದು, ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಬೆದರಿಸುತ್ತಾರೆ. ಒಂದು ವೇಳೆ ಬಾಕಿ ಸಾಲವನ್ನು ಈ ಕೂಡಲೇ ಪಾವತಿಸದಿದ್ದರೆ ಮನೆಯ ಮಹಿಳೆಯರನ್ನು ಬಂಧಿಸಿ, ಕೈಕೋಳ ತೊಡಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದ್ದಾರೆ.

ಇಮೇಲ್ ಮೂಲಕ ಕಮಿಷನರ್ ಅವರಿಗೆ ದೂರು ದಾಖಲಿಸಿರುವ ಉದ್ಯಮಿ, ಶಿವಪ್ರಕಾಶ್ ಅವರು ತನಗೆ ಅವರ ವಾಟ್ಸಾಪ್ ನಂಬರ್ ಮೂಲಕ ಕರೆ ಮಾಡುತ್ತಾರೆ ಹಾಗೂ ವಾಟ್ಸಾಪ್‌ನಲ್ಲಿ ಇಂದಿಗೂ ತಾನು ಪೊಲೀಸ್ ಸಮವಸ್ತ್ರ ಧರಿಸಿರುವ ಡಿಸ್‌ಪ್ಲೇ ಪಿಕ್ಚರ್ ಬಳಸುತ್ತಿದ್ದು, ಇದು ಪೊಲೀಸ್ ಸಮವಸ್ತ್ರದ ದುರುಪಯೋಗ ಎಂದು ಆರೋಪಿಸಿದ್ದಾರೆ. ಸಾರ್ವಜನಿಕರನ್ನು ದಬ್ಬಾಳಿಕೆಗಾರರು ಮತ್ತು ಅಪರಾಧಿಗಳಿಂದ ರಕ್ಷಿಸಬೇಕಾದ ಪೊಲೀಸ್ ಸಮವಸ್ತ್ರ ಈ ರೀತಿ ದುರುಪಯೋಗವಾಗುತ್ತಿದೆ.

ಉದ್ಯಮಿ ಈಗ ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಪ್ರಸ್ತುತ ದೂರಿನೊಂದಿಗೆ ದೂರುದಾರ ಉದ್ಯಮಿ, ಶಿವಪ್ರಕಾಶ್ ಪ್ರತಿದಿನವೂ ತನ್ನ ಮನೆಗೆ ಬಂದು, ಮಹಿಳೆಯರೊಡನೆ ಮಾತನಾಡುವ ಸಿಸಿಟಿವಿ ಚಿತ್ರ ಮತ್ತು ದೂರುದಾರರೊಡನೆ ಶಿವಪ್ರಕಾಶ್ ನಡೆಸಿರುವ ವಾಟ್ಸಾಪ್ ಮಾತುಕತೆಯನ್ನೂ ದಾಖಲಿಸಿದ್ದಾರೆ.

ಈ ದೂರನ್ನು ಪರಿಶೀಲಿಸಿದ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಯವರು ಕೆಂಗೇರಿ ಗೇಟ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಅವರಿಗೆ ಈ ವಿಚಾರವನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

key words : Bangalore-police-complaint