ಮೈಸೂರು, ಫೆ.28, 2023 : (www.justkannada.in) : ನಗರ ಪೊಲೀಸ್ ಉಪ ಆಯುಕ್ತ ಹಾಗೂ ಆಯುಕ್ತರಾಗಿ ಕೆಲಸ ಮಾಡಿದ್ದ ಪೊಲೀಸ್ ಮಹಾನಿರೀಕ್ಷಕ( ಐಜಿಪಿ) ಕೆ.ಟಿ.ಬಾಲಕೃಷ್ಣ ಮಂಗಳವಾರ ಸೇವೆಯಿಂದ ನಿವೃತ್ತರಾದರು.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕುಶಾವರ ಗ್ರಾಮದವರಾದ ಕೆ.ಟಿ.ಬಾಲಕೃಷ್ಣ ಇಲ್ಲಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಐದು ವರ್ಷ ಅಧ್ಯಾಪಕರಾಗಿದ್ದರು. ೧೯೯೭ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿವೈಎಸ್ಪಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಮೊದಲು ಚನ್ನಪಟ್ಟಣದಲ್ಲಿ ನಂತರ ಮಂಡ್ಯ ಡಿವೈಎಸ್ಪಿಯಾಗಿದ್ದರು. ಬಳಿಕ ಬಡ್ತಿ ಪಡೆದು ಚಾಮರಾಜನಗರ ಜಿಲ್ಲಾ ಹೆಚ್ಚುವರಿ ಎಸ್ಪಿ, ಮೈಸೂರು ನಗರ ಸಂಚಾರ ಹಾಗೂ ಅಪರಾಧ ಡಿಸಿಪಿ, ನಂತರ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು.
ಐಪಿಎಸ್‌ಗೆ ಬಡ್ತಿ ಪಡೆದ ನಂತರ ಕಾರವಾರ, ಗದಗ, ಉಡುಪಿ, ಇನ್‌ಟಲಿಜೆನ್ಸ್ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಡಿಐಜಿಯಾಗಿ ಬಡ್ತಿ ಪಡೆದ ಬಳಿಕ ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದರು.
ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಸೇವೆ ಸಲ್ಲಿಸುವಾಗ ೯ ವರ್ಷ ದಸರಾ ಚಟುವಟಿಕೆಯಲ್ಲಿ ಪಾಲ್ಗೊಂಡ ಅನುಭವ ಅವರದ್ದು. ಮೂರು ವರ್ಷದಿಂದ ಅಗ್ನಿ ಶಾಮಕ ಇಲಾಖೆ ಡಿಐಜಿಯಾಗಿ, ನಂತರ ಐಜಿಪಿಯಾಗಿ ಇಲಾಖೆಯಲ್ಲಿ ಅತ್ಯುನ್ನತ ಯಂತ್ರೋಪಕರಣ ಒದಗಿಸುವ ಜತೆಗೆ ಹತ್ತಾರು ವರ್ಷದಿಂದ ಬಾಕಿ ಇದ್ದ ಅಗ್ನಿಶಾಮಕ ಸಿಬ್ಬಂದಿ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ವಿಪತ್ತು ನಿರ್ವಹಣೆಗೆ ಪೂರಕವಾಗಿ ೫ ಕಂಪೆನಿಗಳನ್ನು ಸ್ಥಾಪಿಸುವಲ್ಲಿಯೂ ಬಾಲಕೃಷ್ಣರ ಪಾತ್ರ ಇತ್ತು. ಇಲಾಖೆಯಿಂದ ಬಾಲಕೃಷ್ಣ ಅವರನ್ನು ಮಂಗಳವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಪೊಲೀಸ್ ಇಲಾಖೆಯಲ್ಲಿ ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಕೆಲಸ ಮಾಡಿದ ಖುಷಿಯಿದೆ. ಮೈಸೂರಿನಲ್ಲಿಯೇ ನೆಲೆಸಿರುವ ಕುಟುಂಬದೊಂದಿಗೆ ನಿವೃತ್ತಿ ಜೀವನ ಮುಂದುವರೆಯಲಿದೆ ಎಂದು ಕೆ.ಟಿ.ಬಾಲಕೃಷ್ಣ ತಿಳಿಸಿದರು.
Key words : Bangalore-police-k.t.balakrishna-Mysore